ಒಟ್ಟು ಕುಟುಂಬದ ಆಸ್ತಿಯಲ್ಲಿ ಭಾಗ ಕೇಳುವಾಗ ಮಗಳು ವರದಕ್ಷಿಣೆಯಾಗಿ ಪಡೆದ ಆಸ್ತಿಗೆ ವಿನಾಯಿತಿ ಕೇಳುವಂತಿಲ್ಲ
ಒಟ್ಟು ಕುಟುಂಬದ ಆಸ್ತಿಯಲ್ಲಿ ಪಾಲು ಕೋರಿ ಮಗಳು ಕೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಮದುವೆಯ ಸಮಯದಲ್ಲಿ ವರದಕ್ಷಿಣೆ ಅಥವಾ ಕೊಡುಗೆಯಾಗಿ ಕೊಟ್ಟ ಆಸ್ತಿಗೆ ವಿನಾಯಿತಿ ಕೇಳುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮದುವೆಯಾದಾಗಲೂ ಆಸ್ತಿ ಪಡೆದು ನಂತರವೂ ತವರಿನ ಆಸ್ತಿಗೆ ಆಸೆ ಪಡುವ ಮಹಿಳೆಯರಿಗೆ ಸ್ವಲ್ಪ ನಿರಾಸೆ ಕಾದಿದೆ. ಒಟ್ಟು ಕುಟುಂಬದ ಆಸ್ತಿಯಲ್ಲಿ ಪಾಲು ಕೋರಿ ಮಗಳು ಕೋರ್ಟ್ ಗೆ ಅರ್ಜಿ ಸಲ್ಲಿಸುವಾಗ ಮದುವೆಯ ಸಮಯದಲ್ಲಿ ವರದಕ್ಷಿಣೆ ಅಥವಾ ಕೊಡುಗೆಯಾಗಿ ಕೊಟ್ಟ ಆಸ್ತಿಗೆ ವಿನಾಯಿತಿ ಕೇಳುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ. ಹೇಮಲತಾ ಎಂಬ ಮಹಿಳೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೋರಿ ಸಹೋದರರ ವಿರುದ್ಧ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆದರೆ ದಾವೆಯಲ್ಲಿ ತಾನು ಮದುವೆ ಸಮಯದಲ್ಲಿ ಪಡೆದ ಆಸ್ತಿಯನ್ನು ದಾವಾ ಆಸ್ತಿಯಾಗಿ ದಾಖಲಿಸಿರಲಿಲ್ಲ. ಬದಲಿಗೆ ಉಳಿದ ಆಸ್ತಿಯಲ್ಲಿ ಸಮಪಾಲು ನೀಡುವಂತೆ ಕೋರ್ಟ್ ನಲ್ಲಿ ಪಾರ್ಟಿಷನ್ ಕೇಸ್ ದಾಖಲಿಸಿದ್ದರು.
ಈ ದಾವೆಯಲ್ಲಿ ಪ್ರತಿವಾದಿಯಾಗಿದ್ದ ಮಹಿಳೆಯ ಸಹೋದರ ಅರ್ಜಿ ಸಲ್ಲಿಸಿ, ವಿವಾಹದ ಸಮಯದಲ್ಲಿ ಸಹೋದರಿಗೆ ನೀಡಿದ ಒಟ್ಟು ಕುಟುಂಬದ ಆಸ್ತಿಯನ್ನೂ ದಾವೆಯ ಸ್ವತ್ತಾಗಿ ಪರಿಗಣಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ಅಂಗೀಕರಿಸಿ, ವಿವಾಹದ ಸಂದರ್ಭದಲ್ಲಿ ಮಗಳಿಗೆ ನೀಡಿದ್ದ ಸ್ವತ್ತನ್ನೂ ಆಸ್ತಿ ವಿಭಾಗದ ದಾವೆಯಲ್ಲಿ ಸೇರಿಸಬೇಕೆಂದು ಆದೇಶ ನೀಡಿತ್ತು.
ಇದನ್ನು ಪ್ರಶ್ನಿಸಿ ಹೇಮಲತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದಿರುವ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮಹತ್ವದ ತೀರ್ಪು ನೀಡಿದ್ದಾರೆ. ಒಟ್ಟು ಕುಟುಂಬದ ಆಸ್ತಿಯನ್ನು ವರದಕ್ಷಿಣೆ ಅಥವಾ ಕೊಡುಗೆಯಾಗಿ ಸ್ವೀಕರಿಸಿದ ಮಗಳು ನಂತರ ಉಳಿದ ಆಸ್ತಿಯಲ್ಲಿ ಭಾಗ ಕೇಳಿದರೆ, ತಾನು ಸ್ವೀಕರಿಸಿದ ಆಸ್ತಿಯನ್ನೂ ವಿಭಾಗ ದಾವೆಯ ಸ್ವತ್ತಾಗಿ ಪರಿಗಣಿಸಬೇಕೆಂದು ತೀರ್ಪು ನೀಡಿದ್ದಾರೆ. ತಾನು ಕೊಡುಗೆಯಾಗಿ ಸ್ವೀಕರಿಸಿದ ಆಸ್ತಿಯನ್ನೂ ಸೇರಿಸಿ ಒಟ್ಟು ಕುಟುಂಬದ ಆಸ್ತಿಯಲ್ಲಿ ಭಾಗ ಕೇಳಬಹುದೆಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:
ರಷ್ಯಾದ ಅಧ್ಯಕ್ಷ ಪುಟಿನ್ಗೆ ಕೂಡಲೇ ಯುದ್ಧವಿರಾಮ ಘೋಷಿಸುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ
ಶಿವಮೊಗ್ಗದಲ್ಲಿ ಫೆ 28ರವರೆಗೆ ನಿಷೇಧಾಜ್ಞೆ ವಿಸ್ತರಣೆ: ಜಿಲ್ಲಾಡಳಿತ ಘೋಷಣೆ