ಶುಂಠಿ ದರ ಕುಸಿತ: ಸಿಎಂ B.S.ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರದಲ್ಲಿ ಅನ್ನದಾತ ನೇಣಿಗೆ ಶರಣು

Suicide ಸಾಲಬಾಧೆ ತಾಳದೆ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಎಂ ಬಿ.ಎಸ್​.ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರದಲ್ಲಿ ವರದಿಯಾಗಿದೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಮತ್ತಿಕೋಟಿ ಗ್ರಾಮದ ಬಸವರಾಜಪ್ಪ ತಂಬ್ಳಿ(59) ನೇಣಿಗೆ ಶರಣಾದ ಅನ್ನದಾತ.

  • TV9 Web Team
  • Published On - 16:59 PM, 21 Feb 2021
ಶುಂಠಿ ದರ ಕುಸಿತ: ಸಿಎಂ B.S.ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರದಲ್ಲಿ ಅನ್ನದಾತ ನೇಣಿಗೆ ಶರಣು
ಬಿ.ಎಸ್​.ಯಡಿಯೂರಪ್ಪ(ಎಡ); ನೇಣಿಗೆ ಶರಣಾದ ಅನ್ನದಾತ ಬಸವರಾಜಪ್ಪ ತಂಬ್ಳಿ (ಬಲ)

ಶಿವಮೊಗ್ಗ: ಸಾಲಬಾಧೆ ತಾಳದೆ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಎಂ ಬಿ.ಎಸ್​.ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರದಲ್ಲಿ ವರದಿಯಾಗಿದೆ. ಜಿಲ್ಲೆಯ ಶಿಕಾರಿಪುರ ತಾಲೂಕಿನ ಮತ್ತಿಕೋಟಿ ಗ್ರಾಮದ ಬಸವರಾಜಪ್ಪ ತಂಬ್ಳಿ(59) ನೇಣಿಗೆ ಶರಣಾದ ಅನ್ನದಾತ. ತಾವು ಬೆಳೆದಿದ್ದ ಶುಂಠಿ ಬೆಳೆ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ಮನನೊಂದ ಬಸವರಾಜಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಕಾರಿಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕ ನೀರುಪಾಲು
ಇತ್ತ, ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದಲ್ಲಿ ನಡೆದಿದೆ. ಬಾಗಳಿ ಗ್ರಾಮದ ನಿವಾಸಿ ಕಾರ್ತಿಕ್(12) ನೀರುಪಾಲಾದ ಬಾಲಕ.

ಇತ್ತ, ಕಾರ್ತಿಕ್​ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನ ಮತ್ತಿಬ್ಬರು ಸ್ನೇಹಿತರು ಸುರಕ್ಷಿತವಾಗಿ ದಡ ಸೇರಿದ್ದಾರೆ. ಇಂದು ಭಾನುವಾರ ಆಗಿದ್ದರಿಂದ ಕಾರ್ತಿಕ್​ ತನ್ನ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿದ್ದ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JCB ಮೂಲಕ ಮಣ್ಣು ತೆಗೆಯುತ್ತಿದ್ದಾಗ ಏಕಾಏಕಿ ನುಗ್ಗಿದ ನೀರು; ಕೂದಲೆಳೆಯಲ್ಲಿ ಚಾಲಕ ಪಾರು
ಅತ್ತ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಮಳೆರಾಯ ಅವಾಂತರ ಸೃಷ್ಟಿಸಿದ್ದಾನೆ. ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ನಷ್ಟವಾಗಿದೆ. ಇದಲ್ಲದೆ, ತಾಲೂಕಿನ ಗಾಳಿಹಳ್ಳಿಯಲ್ಲಿ ಮಳೆ ನೀರು ನುಗ್ಗಿದ್ದರಿಂದ ನೂರಾರು ಕ್ವಿಂಟಾಲ್ ರಾಗಿ ಬೆಳೆ ನಾಶವಾಗಿದೆ.

ಇತ್ತ, JCB ಮೂಲಕ ಮಣ್ಣು ತೆಗೆಯುತ್ತಿದ್ದಾಗ ಏಕಾಏಕಿ ನೀರು ನುಗ್ಗಿದ ಹಿನ್ನೆಲೆಯಲ್ಲಿ ಚಾಲಕ ಸಿಲುಕಿಕೊಂಡ ಘಟನೆ ಕಡೂರು ತಾಲೂಕಿನ ದೋಗೆಹಳ್ಳಿಯಲ್ಲಿ ನಡೆದಿದೆ. ಚಾಲಕ JCBಯಲ್ಲಿ ಕೆಲಸ ಮಾಡುವಾಗ ಏಕಾಏಕಿ ನೀರು ನುಗ್ಗಿದೆ. ಇದನ್ನು, ಗಮನಿಸಿದ ಚಾಲಕ ಕೂಡಲೇ JCB ಬಿಟ್ಟು ಏರಿ ಮೇಲೆ ಹತ್ತಿ ಪರಾರಿಯಾಗಿದ್ದಾನೆ.

CKM JCB ACCIDENT 1

ನೀರಿನಲ್ಲಿ ಸಿಲುಕಿದ JCB ಚಾಲಕ

ಕೊಡಗು ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿ ಸೆರೆ
ಅತ್ತ, ಕೊಡಗು ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿಯನ್ನು ಸೆರೆಹಿಡಿಯಲಾಗಿದೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆಹಿಡಿಯಲಾಗಿದೆ.

ಸುಮಾರು 10 ವರ್ಷದ ಹೆಣ್ಣು ಹುಲಿ ಓರ್ವ ಬಾಲಕ ಹಾಗೂ ಓರ್ವ ಮಹಿಳೆಯನ್ನು ಕಳೆದ ಕೆಲವು ದಿನಗಳ ಹಿಂದೆ ಕೊಂದಿತ್ತು. ಇದೀಗ, 5 ಸಾಕಾನೆಗಳ ನೆರವಿನಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಸಿ ವ್ಯಘ್ರನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಸೆರೆಸಿಕ್ಕ ಹುಲಿ ಮೈಸೂರಿನ ಕೂರ್ಗಳ್ಳಿಗೆ ರವಾನಿಸಲಾಗಿದೆ.

MDK TIGER SERE 1

ಕೊಡಗು ಜಿಲ್ಲೆಯಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿ ಸೆರೆ

ಕೌಟುಂಬಿಕ ಕಲಹ ಹಿನ್ನೆಲೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬಾವಿಗೆ ಹಾರಿ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ. 35 ವರ್ಷದ ಸುಮಾ ಜೋಶಿ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿದ್ಯಾಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ. ಸ್ಥಳಕ್ಕೆ ವಿದ್ಯಾಗಿರಿ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದಿಂದ ದೇಹ ಹೊರ ತೆಗೆಯೋ ಕಾರ್ಯಾಚರಣೆ ನಡೆಯಿತು.

ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಅಂದರ್​
ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಜಯನಗರ ಠಾಣೆ ಪೊಲೀಸರಿಂದ ಕಾರ್ಯಾಚರಣೆ ನಡೆದಿದೆ. ಚಿಕ್ಕಮಗಳೂರು ಮೂಲದ ರಮೇಶ್​ ಬಂಧಿತ ಆರೋಪಿ. ಬಂಧಿತನಿಂದ ₹12 ಲಕ್ಷ ಮೌಲ್ಯದ ಚಿನ್ನಾಭರಣಗಳು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಪಂಚಮಸಾಲಿ ಸಮಾವೇಶ: ಪೊಲೀಸ್ ಅನುಮತಿ ಇಲ್ಲದಿದ್ದರೂ ವಿಧಾನಸೌಧದತ್ತ ಪಾದಯಾತ್ರೆ