ತೋಟಗಾರಿಕಾ ವಿವಿಯ 11ನೇ ಘಟಿಕೋತ್ಸವ: ರೈತ ಏಕಾಂತಯ್ಯ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ ರಾಜ್ಯಪಾಲ
ತೋಟಗಾರಿಕೆ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್. ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು. ಇದೇ ವೇಳೆ ರೈತನ ಮಗಳಿಗೆ 16 ಚಿನ್ನದ ಪದಕವನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಿತರಿಸಿದರು.
ಬಾಗಲಕೋಟೆ: ತೋಟಗಾರಿಕೆ ವಿಶ್ವವಿದ್ಯಾಲಯ (University of Horticulture)ದ 11ನೇ ಘಟಿಕೋತ್ಸವ ನಡೆಯುತ್ತಿದೆ. ಘಟಿಕೋತ್ಸವದ ಸಂಭ್ರಮದಲ್ಲಿ ಈ ಬಾರಿ ಪ್ರಗತಿಪರ ರೈತ, ತೋಟಗಾರಿಕೆ ಬೆಳೆಗಾರ ಹೆಚ್. ಏಕಾಂತಯ್ಯ ಅವರಿಗೆ ಗೌರವ ಡಾಕ್ಟರೇಟ್ ಪದವಿ (PHD)ಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ (Thawar Chand Gehlot) ಪ್ರದಾನ ಮಾಡಿದರು. ತೋಟಗಾರಿಕೆ ವಿವಿಯಿಂದ ಇದೇ ಮೊದಲ ಬಾರಿಗೆ ನೀಡಿದ ಗೌರವ ಡಾಕ್ಟರೇಟ್ ಪುರಸ್ಕಾರ ಆಗಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಏಕಾಂತಯ್ಯ ಅವರು ಮಾಜಿ ಸಚಿವರಾಗಿದ್ದು, 1992 ರಿಂದ ತಮ್ಮ 50 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಅಲ್ಲದೆ ತೋಟಗಾರಿಕೆ ಬೆಳೆಯಲ್ಲಿ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ, ವಿವಿ ಕುಲಪತಿ ಡಾ.ಕೆ.ಎಂ. ಇಂದಿರೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಸಿ ನೆಡುವ ಕಾರ್ಯಕ್ಕೆ ಚಾಲನೆ
ತೋಟಗಾರಿಕೆ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾದ ಸಸಿ ನೆಡುವ ಕಾರ್ಯಕ್ಕೆ ಎಚ್.ಏಕಾಂತಯ್ಯ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಚಿವ ಮುನಿರತ್ನ, ಶಾಸಕ ವೀರಣ್ಣ ಚರಂತಿಮಠ ಮತ್ತಿತರರು ಭಾಗಿಯಾದರು. ಕಾರ್ಯಕ್ರಮದ ನಂತರ ರಾಜ್ಯಪಾಲರು, ಜಿಲ್ಲೆಯ ಪಾರಂಪರಿಕ ತಾಣಗಳಾದ ಐಹೊಳೆ, ಪಟ್ಟದಕಲ್ಲು ಹಾಗೂ ಬಾದಾಮಿ ಕ್ಷೇತ್ರವನ್ನು ವೀಕ್ಷಣೆ ನಡೆಸಲಿದ್ದಾರೆ.
16 ಚಿನ್ನದ ಪದಕ ಪಡೆದ ರೈತನ ಮಗಳು
ಬಾಗಲಕೋಟೆ ತೋಟಗಾರಿಕೆ ವಿವಿಯ 11ನೇ ಘಟಿಕೋತ್ಸವದಲ್ಲಿ ವಿವಿಧ ವಿಷಯದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದರಂತೆ, ಚಿಕ್ಕಮಗಳೂರು ಜಿಲ್ಲೆ ಸತ್ತಿಹಳ್ಳಿ ಗ್ರಾಮದ ರೈತರನ ಮಗಳಾದ ಶಿರಸಿ ತೋಟಗಾರಿಕೆ ಮಹಾವಿದ್ಯಾಲಯದ ಬಿಎಸ್ಸಿ ತೋಟಗಾರಿಕೆ ಪದವಿ ವಿದ್ಯಾರ್ಥಿನಿ ಉಮ್ಮೇಸರಾ ಹಸ್ಮತ್ ಅಲಿ 16 ಚಿನ್ನದ ಪದಕ ಪಡೆದಿದ್ದು, ರಾಜ್ಯಪಾಲರಿಂದ ಚಿನ್ನದ ಪದಕ (Gold Medal)ಗಳನ್ನು ಸ್ವೀಕರಿಸಿದ್ದಾಳೆ. ಇದನ್ನೂ ಓದಿ: ಮೇ 26ರಂದು ರಾಜ್ಯಕ್ಕೆ ಆಗಮಿಸಲಿರುವ ರಕ್ಷಣಾ ಸಚಿವ, ಎರಡು ದಿನ ಜಲಾಂತರ್ಗಾಮಿ ಸಮುದ್ರಯಾನದಲ್ಲಿ ರಾಜನಾಥ್ ಸಿಂಗ್ ಭಾಗಿ
ಒಟ್ಟು 680 ವಿದ್ಯಾರ್ಥಿಗಳಲ್ಲಿ 475 ಸ್ನಾತಕ ಪದವೀಧರರು(ತೋಟಗಾರಿಕೆ), 23 ಬಿ.ಟೆಕ್(ಆಹಾರ ತಂತ್ರಜ್ಞಾನ), 137 ಸ್ನಾತಕೋತ್ತರ (ತೋಟಗಾರಿಕೆ), 45 ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಸ್ನಾತಕೋತ್ತರ ವಿಭಾಗದಲ್ಲಿ ವಿವಿಧ ಡಿಪಾರ್ಟ್ಮೆಂಟ್ನ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ವಿವಿಯಿಂದ 25 ಚಿನ್ನದ ಪದಕ ಹಾಗೂ ದಾನಿಗಳು ಕೊಡಮಾಡುವ 52 ಚಿನ್ನದ ಪದಕ ಸೇರಿ ಒಟ್ಟು 77 ಚಿನ್ನದ ಪದಕ ಘಟಿಕೋತ್ಸವದಲ್ಲಿ ವಿತರಣೆ ಮಾಡಲಾಯಿತು.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Wed, 25 May 22