ಇನಾಮ್ತಿ ಜಮೀನು ಪಡೆಯಲು ಅರ್ಜಿ ಸಲ್ಲಿಕೆಗೆ ಅವಕಾಶ: ಕಂದಾಯ ಸಚಿವ ಆರ್.ಅಶೋಕ್
ಇನಾಮ್ತಿ ಜಮೀನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸವೂ ನಡೆಯುತ್ತಿತ್ತು. ಇನಾಮ್ತಿ ಕಾಯ್ದೆ ರದ್ದಾದಾಗ ತಿಳುವಳಿಕೆ ಕೊರತೆಯಿಂದ ಬಹಳಷ್ಟು ಲಕ್ಷಾಂತರ ರೈತರು ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂದು ಅಶೋಕ್ ವಿವರಿಸಿದರು.
ಬೆಂಗಳೂರು: ಸರ್ಕಾರಕ್ಕೂ ಸೇರದ, ರೈತರ ವಶದಲ್ಲಿಯೂ ಇಲ್ಲದ ಇನಾಮ್ತಿ ಜಮೀನು ವಿತರಣೆಗೆ ರಾಜ್ಯ ಸರ್ಕಾರ ಆಲೋಚಿಸುತ್ತಿದೆ. ರಾಜ್ಯದಲ್ಲಿ ಸುಮಾರು 70 ಸಾವಿರ ಎಕರೆ ಜಮೀನು ಇನಾಮ್ತಿ ವ್ಯಾಪ್ತಿಯಲ್ಲಿ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ ಮತ್ತು ಅದಕ್ಕೂ ಹಿಂದೆ ರಾಜರ ಆಳ್ವಿಕೆಯ ಕಾಲದಲ್ಲಿ ಕೆಲ ವ್ಯಕ್ತಿಗಳಿಗೆ ನೂರಾರು ಎಕರೆ ಭೂಮಿಯನ್ನು ಇನಾಮ್ತಿಯಾಗಿ ನೀಡಲಾಗಿತ್ತು ಎಂದು ವಿವರಿಸಿದರು.
ಇಂಥ ಜಮೀನುಗಳು ಪೂರ್ಣ ಪ್ರಮಾಣದಲ್ಲಿ ಸಾಗುವಳಿ ಆಗುತ್ತಿರಲಿಲ್ಲ. ಕೆಲ ತುಂಡು ಭೂಮಿಗಳಲ್ಲಿ ಮಾತ್ರ ರೈತರು ಉಳುಮೆ ಮಾಡಿಕೊಳ್ಳುತ್ತಿದ್ದರು. ಇನಾಮ್ತಿ ಜಮೀನಲ್ಲಿ ಸಾಗುವಳಿ ಮಾಡುತ್ತಿದ್ದ ರೈತರಿಗೆ ಪಹಣಿ ಕೊಡುವ ಕೆಲಸವೂ ನಡೆಯುತ್ತಿತ್ತು. ಇನಾಮ್ತಿ ಕಾಯ್ದೆ ರದ್ದಾದಾಗ ತಿಳುವಳಿಕೆ ಕೊರತೆಯಿಂದ ಬಹಳಷ್ಟು ಲಕ್ಷಾಂತರ ರೈತರು ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂದು ಅಶೋಕ್ ವಿವರಿಸಿದರು.
ರಾಜ್ಯದ ಹಲವೆಡೆ ಪರಿಶೀಲನೆ ನಡೆಸಿದಾಗ ಸುಮಾರು 70 ಸಾವಿರ ಎಕರೆ ಇನಾಮ್ತಿ ಭೂಮಿ ಇರುವುದು ಪತ್ತೆಯಾಗಿತ್ತು. ಈ ಭೂಮಿಯ ನಿರ್ವಹಣೆಯ ಬಗ್ಗೆ ಸರ್ಕಾರ ಆಲೋಚಿಸಿತ್ತು. ಇದಕ್ಕಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ವಸ್ತ್ರದ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ರೈತರಿಗೆ ಅರ್ಜಿ ಸಲ್ಲಿಸಲು ಒಂದಿಷ್ಟು ಕಾಲಾವಕಾಶ ನೀಡಬೇಕು ಎಂದು ಸಮಿತಿ ವರದಿ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಸ್ವಲ್ಪ ಸಮಯಾವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಆಸಕ್ತ ರೈತರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.
‘ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಸತೀಶ್ ರೆಡ್ಡಿ ಇಲ್ಲ’ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಶಾಸಕ ಸತೀಶ್ ರೆಡ್ಡಿ ಶಾಮೀಲಾಗಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಈ ಹಗರಣದಲ್ಲಿ ಸತೀಶ್ ರೆಡ್ಡಿ ಹಿಂಬಾಲಕರಾಗಲಿ, ಆಪ್ತರಾಗಲಿ ಶಾಮೀಲಾಗಿಲ್ಲ. ಈ ಅಂಶವು ತನಿಖೆಯಿಂದ ಈಗಾಗಲೇ ಸಾಬೀತಾಗಿದೆ. ಈ ವಿಚಾರದಲ್ಲಿ ಸತೀಶ್ ಹೆಸರು ಪದೇಪದೆ ಕೇಳಿಬರುತ್ತಿರುವುದರಿಂದ ಅವರಿಗೂ ಬೇಸರ ವಾಗಿದೆ. ಇಂಥ ಆರೋಪ ಮಾಡುತ್ತಿರುವವರ ವಿರುದ್ಧ ಅವರು ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಸತೀಶ್ ರೆಡ್ಡಿಗೆ ದೇವರು ಎಲ್ಲವನ್ನೂ ಕೊಟ್ಟಿದ್ದಾರೆ. 50ರಿಂದ 60 ಸಾವಿರಕ್ಕೆ ಶಾಸಕರೊಬ್ಬರು ಇಂಥ ಕೆಲಸ ಮಾಡುತ್ತಾರೆ ಎಂದರೆ ಯಾರೂ ನಂಬಲು ಆಗುವುದಿಲ್ಲ ಎಂದು ಅಶೋಕ್ ಸಮರ್ಥಿಸಿಕೊಂಡರು.
ನಾನು ಯಾರಿಗೂ ದೂರು ಕೊಟ್ಟಿಲ್ಲ: ಸತೀಶ್ ರೆಡ್ಡಿ ಯಾವುದೇ ಸಚಿವ ಅಥವಾ ಶಾಸಕರ ವಿರುದ್ಧ ನಾನು ವರಿಷ್ಠರಿಗೆ ದೂರು ನೀಡಿಲ್ಲ, ಯಾರ ವಿರುದ್ಧವೂ ಹೇಳಿಕೆ ನೀಡಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಸಂತೋಷ್ ಅವರಿಗೆ ನಾನು ದೂರು ನೀಡಿದ್ದೇನೆಂಬುದು ಸುಳ್ಳು. ನಾನು ಕೇವಲ ಬೆಡ್ ಬ್ಲಾಕಿಂಗ್ ಬಗ್ಗೆ ಮಾತ್ರ ಮಾತಾಡಿದ್ದೇನೆ. ಬಿ.ಎಲ್.ಸಂತೋಷ್‌ಗೆ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಸಚಿವ ಆರ್.ಅಶೋಕ್ ಉಪಸ್ಥಿತಿಯಲ್ಲೇ ಸತೀಶ್ ರೆಡ್ಡಿ ಸ್ಪಷ್ಟನೆ ನೀಡಿದರು.
(farmers in karnataka get another chance to apply for inamti land says revenue minister R Ashok)
ಇದನ್ನೂ ಓದಿ: ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ ಬದಲಾವಣೆ ಇಲ್ಲ; ಬಿಜೆಪಿ ಕೋರ್ ಕಮಿಟಿ ಸಭೆಯ ನಂತರ ಸ್ಪಷ್ಟಪಡಿಸಿದ ಸಚಿವ ಆರ್ ಅಶೋಕ್
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆಗೆ ಅರುಣ್ ಸಿಂಗ್ ಬರುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು: ಆರ್ ಅಶೋಕ್
Published On - 3:59 pm, Wed, 23 June 21