ಮುಡಾ ಕೇಸ್: ಸಿದ್ದರಾಮಯ್ಯಗೆ ಬಿಎಸ್ವೈ, ರಾಮಕೃಷ್ಣ ಹೆಗಡೆ ಉದಾಹರಣೆ ಕೊಟ್ಟು ಟಾಂಗ್ ಕೊಟ್ಟ ಅಶೋಕ್
ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಂದು ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದರೂ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವೆಂದು ಬಿಜೆಪಿ ಕಿಡಿಕಾರುತ್ತಿದೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ವಿಪಕ್ಷ ನಾಯಕ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯಗೆ ಬಿಎಸ್ವೈ, ರಾಮಕೃಷ್ಣ ಹೆಗಡೆ ಉದಾಹರಣೆ ಕೊಟ್ಟು ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 27: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ಎಫ್ಐಆರ್ ದಾಖಲಾದ ಮೇಲೂ ಇನ್ನೂ ಸಿಎಂ ಸ್ಥಾನದಲ್ಲಿದ್ದಾರೆ. ಈ ರೀತಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಫ್ಐಆರ್ ದಾಖಲಾದ್ಮೇಲೆ ಯಾರೂ ಸಿಎಂ ಸ್ಥಾನದಲ್ಲಿ ಇರಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಆರೋಪ ಬಂದಾಗ ಬಿಎಸ್ ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಸಹ ರಾಜೀನಾಮೆ ನೀಡಿದ್ದರು. ಲೋಕಾಯುಕ್ತ ಪೊಲೀಸರು ಅಳೆದು ತೂಗಿ ಕೇಸ್ ತೆಗೆದುಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಕರ್ನಾಟಕ ಪೊಲೀಸರೇ ಇರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಪ್ರಕರಣ: ಸಿಎಂ ವಿರುದ್ಧ ಎಫ್ಐಆರ್ ದಾಖಲಾದರೂ ಸಹ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಸ್ನೇಹಮಯಿ ಕೃಷ್ಣ
ಸಿಎಂ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪ ಬಂದಿದೆ. ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ್ದರು. ಇಂದು ಅವರ ಮೇಲೆ ಆರೋಪ ಬಂದಿದೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಯಾರೂ ಬಾಯಿ ಬಿಡುತ್ತಿಲ್ಲ. ರಾಹುಲ್ ಗಾಂಧಿ ಏನು ಭಾಷಣ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ಕೊಡುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ನಾವು ಇಲ್ಲಿ ಸಚಿವರ ರಾಜೀನಾಮೆ ಕೇಳುತ್ತಿಲ್ಲ. ಸಿಎಂ ರಾಜೀನಾಮೆ ಕೇಳುತ್ತಿದ್ದೇವೆ. ಸಿಎಂ ಅಡಿಯಲ್ಲಿ ಇರುವ ಇಲಾಖೆಯ ಕೈಯಲ್ಲಿ ತನಿಖೆ ಮಾಡಲು ಆಗುತ್ತಾ? ಕುಮಾರಸ್ವಾಮಿ ಪ್ರಕರಣದಲ್ಲಿ ಅವರು ಇಲ್ಲಿ ಹೇಗೆ ಪ್ರಬಾವ ಬೀರಲು ಆಗುತ್ತದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಇರುವ ಸಂಸ್ಥೆಯೇ ಕುಮಾರಸ್ವಾಮಿ ಕೇಸ್ ತನಿಖೆ ಮಾಡುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ವಿರುದ್ಧದ ಎಫ್ಐಆರ್ನಲ್ಲಿ ಯಾವೆಲ್ಲಾ ಸೆಕ್ಷನ್ ದಾಖಲು? ಯಾವ ಸೆಕ್ಷನ್ಗೆ ಏನು ಶಿಕ್ಷೆ?
ವ್ಯಕ್ತಿ ಮುಖ್ಯ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಕೋಳಿವಾಡ ಸಹ ಹಾಗೆ ಹೇಳಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಸಹ ಹೇಳಿದ್ದಾರೆ. ನಾಳೆ ಮತ್ತಷ್ಟು ನಾಯಕರು ಹೇಳಬಹುದು. ಸಿಎಂ ಆಗಬೇಕು ಅಂತ ಹಲವರು ಬಟ್ಟೆ ಹೊಲಿಸಿಕೊಂಡಿದ್ದಾರೆ. ಅವರಿಗೆ ಒಳಗೊಳಗೆ ಖುಷಿ ಆಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂದರೆ ಭಂಡತನ. ನೀವೇ ಅಪರಾಧಿ ಸ್ಥಾನದಲ್ಲಿ ಇದ್ದು ನೀವೇ ತನಿಖೆ ಮಾಡಿಕೊಂಡರೆ ಹೇಗೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.