ಶಿಗ್ಗಾಂವಿ ಬೈ ಎಲೆಕ್ಷನ್ ವೇಳೆ ಅನುಮಾನಾಸ್ಪದ ಬ್ಯಾಲೆಟ್​ ಬಾಕ್ಸ್ ಪತ್ತೆ ಕೇಸ್: ಐವರ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 17, 2024 | 3:02 PM

ಹಾವೇರಿಯಲ್ಲಿ ಹಳೆ ಬ್ಯಾಲೆಟ್ ಬಾಕ್ಸ್​ಗಳ ಕಳ್ಳತನ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 27 ಮತಪೆಟ್ಟಿಗೆಗಳು ಮತ್ತು ಒಂದು ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಪಿಎಂಸಿ ಗೋದಾಮಿನಿಂದ ಪೆಟ್ಟಿಗೆಗಳನ್ನು ಕಳವು ಮಾಡಿದ್ದರು. ಈ ಘಟನೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಶಿಗ್ಗಾಂವಿ ಬೈ ಎಲೆಕ್ಷನ್ ವೇಳೆ ಅನುಮಾನಾಸ್ಪದ ಬ್ಯಾಲೆಟ್​ ಬಾಕ್ಸ್ ಪತ್ತೆ ಕೇಸ್: ಐವರ ಬಂಧನ
ಶಿಗ್ಗಾಂವಿ ಬೈ ಎಲೆಕ್ಷನ್ ವೇಳೆ ಅನುಮಾನಸ್ಪದ ಬ್ಯಾಲೆಟ್​ ಬಾಕ್ಸ್ ಪತ್ತೆ ಕೇಸ್: ಐವರ ಬಂಧನ
Follow us on

ಹಾವೇರಿ, ನವೆಂಬರ್​ 17: ಹಳೆಯ ಬ್ಯಾಲೆಟ್ ಬಾಕ್ಸ್​ಗಳನ್ನು (Ballot Boxes) ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸರು ಕಾರ್ಯಚರಣೆ ನಡೆಸಿ, ಸಂತೋಷ ಮಾಳಗಿ, ಗಣೇಶ ಹರಿಜನ, ಮುತ್ತಪ್ಪ ದೇವಿಹೊಸೂರು, ಕೃಷ್ಣ ಹರಿಜನ ಮತ್ತು ಮಹ್ಮದ್ ಜಾವಿದ್​ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ 27 ಬ್ಯಾಲೆಟ್​ ಬಾಕ್ಸ್, ಕೃತ್ಯಕ್ಕೆ ಬಳಿಸಿದ 1 ಆಟೋ ಜಪ್ತಿ ಮಾಡಲಾಗಿದೆ.

ಹಾವೇರಿ ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಬಳಿಯ ಕಾಲುವೆಯಲ್ಲಿ ಹಳೆಯ ಬ್ಯಾಲೆಟ್​ ಬಾಕ್ಸ್ ಸಿಕ್ಕಿದ್ದರಿಂದ ಗ್ರಾಮಸ್ಥರಿಗೆ ಆತಂಕ ಮತ್ತು ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ನಾಲ್ಕು ದಿನಗಳ ಹಿಂದಷ್ಟೆ ಶಿಗ್ಗಾಂವಿ ಉಪಚುನಾವಣೆಯ ಮತದಾನ ಮುಕ್ತಾಯ ಆಗಿತ್ತು. ಬ್ಯಾಲೆಟ್​ ಬಾಕ್ಸ್ ಕಳ್ಳತನವಾಗಿದ್ದು ಜಿಲ್ಲೆಯಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು.

ಇದನ್ನೂ ಓದಿ: ಹಾವೇರಿ: ಶಿಗ್ಗಾಂವಿ ಉಪಚುನಾವಣೆ ಮತದಾನ ಮರುದಿನವೇ ಕಾಲುವೆಯಲ್ಲಿ ಬ್ಯಾಲೆಟ್ ಬಾಕ್ಸ್‌ಗಳು ಪತ್ತೆ

ಆರೋಪಿಗಳು ಎಪಿಎಂಸಿ ಗೋಡೌನ್​ನ ಬೀಗ ಮುರಿದು ಕಳ್ಳತನ ಮಾಡಿದ್ದರು. ಇದೀಗ ಐವರು ಜನ ಕಳ್ಳರನ್ನ ಪತ್ತೆ ಮಾಡಿದ್ದು, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಹಾವೇರಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಬ್ಯಾಲೆಟ್​ ಬಾಕ್ಸ್​ಗಳು ನೋಡಿ ಸ್ಥಳೀಯರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಲ್.ರಮೇಶ್, ಸಹಾಯಕ ಆಯುಕ್ತ ಎಚ್.ಬಿ.ಚನ್ನಪ್ಪ, ತಹಶೀಲ್ದಾರ್ ಶರಣಮ್ಮ ಖಾರಿ ಸೇರಿದಂತೆ ಅಧಿಕಾರಿಗಳು ಹಾವೇರಿ ನಗರ ಪೊಲೀಸರ ನೇತೃತ್ವದಲ್ಲಿ ಪರಿಶೀಲನೆ ನಡೆಸಿ ಬ್ಯಾಲೆಟ್​ ಬಾಕ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಬ್ಯಾಲೆಟ್​ ಬಾಕ್ಸ್​ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಪರಿಶೀಲನೆ ಮಾಡಿದಾಗ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಹಾವೇರಿ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ ಮುಗಿದ ಒಂದು ದಿನದ ಬೆನ್ನೆಲ್ಲೇ ಈ ಘಟನೆ ನಡೆದಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ನಾನು ಬೆಳಗಿನ ವಾಕಿಂಗ್ ಹೋಗುತ್ತಿದ್ದಾಗ ಚರಂಡಿಯಲ್ಲಿ ಈ ಮತಪೆಟ್ಟಿಗೆಗಳು ಪತ್ತೆಯಾಗಿದ್ದು, ಕೂಡಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆ ಎಂದು ಯತ್ತಿನಹಳ್ಳಿ ನಿವಾಸಿ ಅಬ್ದುಲ್ ಹುಬ್ಬಳ್ಳಿ ಹೇಳಿದ್ದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಳಸಿದ ಹಳೆಯ ಮತ್ತು ಹಾಳಾಗಿರುವ ಬಾಕ್ಸ್‌ಗಳಂತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಉಪಚುನಾವಣೆ ಅಂತ್ಯ: ಸಂಡೂರು, ಶಿಗ್ಗಾಂವಿ-ಚನ್ನಪಟ್ಟಣದಲ್ಲಿ ಎಷ್ಟು ಮತದಾನ?

ನಾಲೆಯಲ್ಲಿದ್ದ 10 ಕಬ್ಬಿಣದ ಮತಪೆಟ್ಟಿಗೆಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಘಟನೆಗೂ ಶಿಗ್ಗಾಂವಿ ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿ ವಿಜಯ ಮಹಾಂತೇಶ ದಾನಮ್ಮನವರ್ ಹೇಳಿದ್ದರು.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:02 pm, Sun, 17 November 24