ಕೆರೆಗಳ ಮೇಲೆ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಯೋಜನೆ, ಏನಿದು ಯೋಜನೆ?
ಕೆರೆಗಳಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಕೆಯ ಸಾಧ್ಯಾಸಾಧ್ಯತೆಗಳ ಬಗ್ಗೆವಿಸ್ತೃತವಾಗಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ವಿಷಯ ತಜ್ಞರೊಂದಿಗೆ ಚರ್ಚಿಸುವ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರೊಂದಿಗೆ ಸಭೆ ಆಯೋಜಿಸುವಂತೆ ಸಚಿವ ಎನ್ಎಸ್ ಭೋಸರಾಜು ನಿರ್ದೇಶಿಸಿದ್ದಾರೆ. ಈ ಕುರಿತಾಗಿ ಅಧಿಕಾರಿಗಳಿಂದ ಸಚಿವರಿಗೆ ಮಾಹಿತಿ ನೀಡಲಾಗಿದೆ.
ಬೆಂಗಳೂರು, ಜುಲೈ 11: ಸಣ್ಣ ನೀರಾವರಿ ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ (floating solar panels) ಅಳವಡಿಸುವ ಸಾಧ್ಯಸಾಧ್ಯತೆಗಳ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ತಜ್ಞರೊಂದಿಗೆ ಸಭೆಯನ್ನು ಆಯೋಜಿಸುವಂತೆ ಸಚಿವ ಎನ್ಎಸ್ ಭೋಸರಾಜು (N. S. Boseraju) ಸೂಚನೆ ನೀಡಿದ್ದಾರೆ. ಇಂದು ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ವಿಸ್ತ್ರುತ ಸಭೆ ನಡೆಸಿ ಸೂಚನೆ ನೀಡಿದ್ದಾರೆ.
2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶ
100 ಕ್ಕೂ ಹೆಚ್ಚು ಏಕರೆ ವಿಸ್ತೀರ್ಣ ಹೊಂದಿರುವ 40 ಕೆರೆಗಳನ್ನು ಗುರುತಿಸಲಾಗಿದೆ. ಈ ಕೆರೆಗಳು ಸುಮಾರು 10 ಸಾವಿರ ಏಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿವೆ. ಸುಮಾರು 2500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಈ ಕೆರೆಗಳಲ್ಲಿ ವರ್ಷದಾದ್ಯಂತ ಶೇಕಡಾ 50 ರಿಂದ 60 ರಷ್ಟು ನೀರು ತುಂಬಿಸಲಾಗುತ್ತದೆ. ಈ ಕೆರೆಗಳಲ್ಲಿ ತೇಲುವ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶವನ್ನು ಹೊಂದಿರುವ ಸರ್ಕಾರ ಈ ಯೋಜನೆಯನ್ನು ಅಳವಡಿಸುವ ಮೂಲಕ ನೀರಾವರಿ ಇಲಾಖೆಯ ಮೂಲಕ ಏತ ನೀರಾವರಿ ಯೋಜನೆಗಳಿಗೆ ಭರಿಸಲಾಗುತ್ತಿರುವ ವಿದ್ಯುತ್ ಖರ್ಚನ್ನು ಕಡಿತಗೊಳಿಸುವ ಯೋಜನೆ ಹಾಕಿದೆ.
ಇದನ್ನೂ ಓದಿ: ಬಿಬಿಎಂಪಿ ಅಧಿಕಾರಿ ಬಸವರಾಜ್ ಮಾಗಿ ನಿವಾಸದಲ್ಲಿ 2 ಹುಲಿ ಉಗುರು, 5 ತಲವಾರ್ ಪತ್ತೆ
ದೇಶದ ವಿವಿಧ ಭಾಗಗಳಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಕೆಯ ಮೂಲಕ ಕೇವಲ 1 ಗಿಗಾ ವ್ಯಾಟ್ ನಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದೆ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ತೇಲುವ ವಿದ್ಯುತ್ ಫಲಕಗಳ ಅಳವಡಿಕೆಗೆ ವಿಪುಲ ಅವಕಾಶಗಳಿವೆ. ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಜಮೀನಿನ ಅವಶ್ಯಕತೆ ಇಲ್ಲ. ಆದರೆ, ಇದರ ಅಳವಡಿಕೆ ವೆಚ್ಚ ಸ್ವಲ್ಪ ಹೆಚ್ಚಾಗಿದೆ ಎಂದು ಅಧಿಕಾರಿಗಳಿಂದ ಸಚಿವರಿಗೆ ಮಾಹಿತಿ ನೀಡಲಾಗಿದೆ.
ಕೆರೆಗಳಲ್ಲಿ ಫ್ಲೋಟಿಂಗ್ ಸೋಲಾರ್ ಪ್ಯಾನೆಲ್ ಅಳವಡಿಕೆಯ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಸ್ತೃತವಾಗಿ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ವಿಷಯ ತಜ್ಞರೊಂದಿಗೆ ಚರ್ಚಿಸುವ ಮೂಲಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ತಜ್ಞರೊಂದಿಗೆ ಸಭೆ ಆಯೋಜಿಸುವಂತೆ ಎನ್ಎಸ್ ಭೋಸರಾಜು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ಇದ್ದೂ ಇಲ್ಲದಂತಾದ ಸೋಲಾರ್ ಬೀದಿ ದೀಪಗಳು, ಅಳವಡಿಸುವಾಗ ಇದ್ದ ಜೋಷ್ ನಿರ್ವಹಣೆಯಲ್ಲಿ ಇಲ್ಲ
ಸಭೆಯಲ್ಲಿ ಸಣ್ಣನೀರಾವರಿ ಇಲಾಖೆಯ ಕಾರ್ಯದರ್ಶಿ ರಾಘವನ್, ಕರ್ನಾಟಕ ನವೀಕರಿಸಬಹುದಾದ ಇಂಧನಗಳ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರುದ್ರಪ್ಪಯ್ಯ, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:07 pm, Thu, 11 July 24