ಧಾರವಾಡ, ಅಕ್ಟೋಬರ್ 02: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ಹಬ್ಬಗಳ ಸಾಲು ಕೂಡ ಶುರುವಾಗುತ್ತೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರದ ಭರಾಟೆಯೂ ಹೆಚ್ಚಾಗುತ್ತೆ. ಅದರಲ್ಲೂ ಹಬ್ಬ-ಹರಿದಿನಗಳಲ್ಲಿ ನಡೆಯುವ ಪೂಜೆಗೆ ಬೇಕಾಗುವ ವಸ್ತುಗಳ ವ್ಯಾಪಾರವೂ ಹೆಚ್ಚಾಗುತ್ತೆ. ಇದರಲ್ಲಿ ಹೆಚ್ಚಿನ ಪಾಲು ಹೂವಿಗೆ (Flowers) ಸೇರುತ್ತೆ. ಆದರೆ ಈ ಬಾರಿ ಧಾರವಾಡದಲ್ಲಿ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ ಮಳೆಯ ಆರ್ಭಟ.
ಧಾರವಾಡ ತಾಲೂಕಿನ ವಿವಿಧ ಗ್ರಾಮಗಳ ರೈತರ ಪ್ರಮುಖ ಬೆಳೆ ಬಗೆ ಬಗೆಯ ಹೂವುಗಳು. ಈ ಹೂವಿನಿಂದಲೇ ಇಲ್ಲಿನ ರೈತರು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಅಲ್ಲದೇ ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಂತೂ ಈ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ. ಇದೇ ಕಾರಣಕ್ಕೆ ಈ ಹಬ್ಬಗಳ ಹೊತ್ತಿಗೆ ಹೂವು ಬರುವಂತೆ ರೈತರು ಲೆಕ್ಕಚಾರ ಹಾಕಿ, ಕೃಷಿ ಮಾಡಿರುತ್ತಾರೆ. ಇದೀಗ ದಸರಾ ಹಬ್ಬ ಬಂದಿದೆ. ಆದರೆ ಈ ಬಾರಿ ಹೂವಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ಹೂವುಗಳು ಹೊಲದಲ್ಲಿಯೇ ಕೊಳೆಯೋ ಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನೂ ಓದಿ: ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಸೇವಂತಿ, ಸುಗಂಧ ರಾಜ, ಮಲ್ಲಿಗೆ, ಚೆಂಡು ಹೂವು ಸೇರಿದಂತೆ ಬಗೆ ಬಗೆಯ ಹೂವುಗಳನ್ನು ರೈತರು ಬೆಳೆಯುತ್ತಾರೆ. ನಿತ್ಯವೂ ಬೆಳಿಗ್ಗೆ ಹೂವನ್ನು ಕಿತ್ತುಕೊಂಡು ಮಾರುಕಟ್ಟೆಗೆ ಬಂದು ಮಾರಾಟ ಮಾಡುತ್ತಾರೆ. ಇದರಿಂದಾಗಿಯೇ ಅವರ ಜೀವನ ನಿರ್ವಹಣೆ ಆಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಗುಣಮಟ್ಟದ ಹೂವು ಇದ್ದರಷ್ಟೇ ವ್ಯಾಪಾರಿಗಳು ಖರೀದಿ ಮಾಡುತ್ತಾರೆ. ಆದರೆ ಇದೀಗ ಬೀಳುತ್ತಿರುವ ಮಳೆಯಿಂದಾಗಿ ಹೂವಿನ ಗುಣಮಟ್ಟ ಕುಸಿಯುತ್ತಿದೆ. ಇದು ನೇರವಾಗಿ ದರದ ಮೇಲೆ ಪರಿಣಾಮ ಬೀರುತ್ತಿದೆ. ಕೆಜಿಗೆ ನೂರು ರೂಪಾಯಿಗೆ ಮಾರಾಟವಾಗಬೇಕಿರುವ ಹೂವು 20 ರಿಂದ 30 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರಿಗೆ ಆರ್ಥಿಕವಾಗಿ ಸಾಕಷ್ಟು ನಷ್ಟವಾಗುತ್ತಿದೆ.
ಇದನ್ನೂ ಓದಿ: ಗ್ಯಾರಂಟಿ ಸಮಾವೇಶದಲ್ಲಿ ಗೋಲ್ಮಾಲ್?; ತನಿಖೆಗೆ ಆಗ್ರಹಿಸಿ ಲೋಕಾಯುಕ್ತಕ್ಕೆ ದೂರು
ಇತ್ತೀಚಿಗಷ್ಟೇ ಧಾರವಾಡದ ಮಾರುಕಟ್ಟೆಗೆ ಬೆಂಗಳೂರಿನ ಹೂವು ಲಗ್ಗೆ ಇಟ್ಟ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಹೂವಿನಿಂದಾಗಿ ಸ್ಥಳೀಯ ರೈತರು ಅತಿ ಕಡಿಮೆ ದರಕ್ಕೆ ತಮ್ಮ ಹೂವುಗಳನ್ನು ಮಾರಾಟ ಮಾಡೋ ಸ್ಥಿತಿ ಬಂದಿದೆ. ಇದರ ಬೆನ್ನಲ್ಲೇ ಇದೀಗ ಮಳೆಯಿಂದಾಗಿ ಹೂವಿನ ಬೆಳೆಗೆ ಸಂಕಷ್ಟ ಎದುರಾಗಿದೆ. ಒಟ್ಟಿನಲ್ಲಿ ಈ ಬಾರಿಯ ದಸರಾ ಹಬ್ಬದಲ್ಲಿ ಕೊಂಚ ಆದಾಯ ಗಳಿಸಬಹುದು ಅಂದುಕೊಂಡಿರೋ ಹೂವು ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿರೋದು ವಿಪರ್ಯಾಸವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.