ಶಕ್ತಿ ಯೋಜನೆ: ಮಹಿಳೆಯರ ಉಚಿತ ಪ್ರಯಾಣಕ್ಕಿನ್ನು ಮೊಬೈಲಲ್ಲೇ ಗುರುತಿನ ಚೀಟಿ ತೋರಿಸಿದ್ರೆ ಸಾಕು
ಮಹಿಳಾ ಪ್ರಯಾಣಿಕರು ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ತಮ್ಮ ಐಡಿಗಳನ್ನು ತೋರಿಸಲು ಅವಕಾಶವಿದ್ದರೂ, ಅನೇಕ ಕಂಡಕ್ಟರ್‌ಗಳು ಅದನ್ನು ತಿರಸ್ಕರಿಸುತ್ತಿದ್ದಾರೆ. ಹಾರ್ಡ್ ಕಾಪಿಗಳನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಈ ಕ್ರಮ ಕೈಗೊಂಡಿದೆ.
ಬೆಂಗಳೂರು, ನವೆಂಬರ್ 14: ಇನ್ನು ಮುಂದೆ ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ (Shakti Scheme) ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಮಹಿಳೆಯರು ಐಡಿಗಳ (ಮೂಲ ಅಥವಾ ಫೋಟೊಕಾಪಿ) ಹಾರ್ಡ್ ಪ್ರತಿಯನ್ನು ಒಯ್ಯಬೇಕಿಲ್ಲ. ಮೊಬೈಲ್ ಫೋನ್ನಲ್ಲಿ ಡಿಜಿಲಾಕರ್ ಆ್ಯಪ್ (Digilocker app) ಮೂಲಕ ಸ್ಥಳೀಯ ನಿವಾಸದ ಪುರಾವೆಗಳನ್ನು ಒದಗಿಸುವ ಮೂಲಕ ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಕಟಣೆ ಹೊರಡಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮತ್ತು ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಅಧಿಕಾರಿಗಳಿಗೆ ದೂರು ನೀಡಿದ ಹಲವು ಪ್ರಕರಣಗಳು ವರದಿಯಾಗಿವೆ. ತಾವು ಐಡಿಯ ಹಾರ್ಡ್ ಕಾಪಿ ಒಯ್ಯಲು ವಿಫಲವಾದರೆ ಟಿಕೆಟ್ ಖರೀದಿಸುವಂತೆ ಕಂಡಕ್ಟರ್‌ಗಳು ಒತ್ತಾಯಿಸುತ್ತಿದ್ದಾರೆ. ಮೂಲ ಐಡಿ ಅಥವಾ ಫೊಟೊಕಾಪಿಯನ್ನೇ ಕೇಳುತ್ತಿದ್ದಾರೆ ಎಂದು ಅವರು ದೂರು ನೀಡಿದ್ದರು. ಹೀಗಾಗಿ ಸಾರಿಗೆ ಸಂಸ್ಥೆ ಹೊಸದಾಗಿ ಪ್ರಕಟಣೆ ಹೊರಡಿಸಿದೆ.
ಮಹಿಳಾ ಪ್ರಯಾಣಿಕರು ಡಿಜಿಲಾಕರ್ ಅಪ್ಲಿಕೇಶನ್ ಮೂಲಕ ತಮ್ಮ ಐಡಿಗಳನ್ನು ತೋರಿಸಲು ಅವಕಾಶವಿದ್ದರೂ, ಅನೇಕ ಕಂಡಕ್ಟರ್‌ಗಳು ಅದನ್ನು ತಿರಸ್ಕರಿಸುತ್ತಿದ್ದಾರೆ. ಹಾರ್ಡ್ ಕಾಪಿಗಳನ್ನು ತೋರಿಸುವಂತೆ ಒತ್ತಾಯಿಸುತ್ತಿದ್ದಾರೆ. ಕಂಡಕ್ಟರ್‌ಗಳು ಐಡಿಗಳನ್ನು ಪರಿಶೀಲಿಸಲು ಮತ್ತು ಶೂನ್ಯ ಟಿಕೆಟ್‌ಗಳನ್ನು ನೀಡಲು ಆತುರಪಡುತ್ತಾರೆ ಎಂಬ ಕಾರಣದಿಂದ ನಾವು ನಮ್ಮ ಮೊಬೈಲ್ ಫೋನ್‌ಗಳ ಹಿಂದಿನ ಕೇಸ್‌ನಲ್ಲಿ ಗುರುತಿನ ಚೀಟಿಗಳನ್ನು ಇಡಬೇಕಾಗಿಬರುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಪ್ರಯಾಣಿಕರೊಬ್ಬರು ದೂರಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಆರೇ ತಿಂಗಳಿಗೆ ಖಾಲಿ: ಮಹಿಳೆಯರ ಉಚಿತ ಬಸ್ ಪ್ರಯಾಣ ರದ್ದಾಗುತ್ತಾ? ಸಾರಿಗೆ ಸಚಿವ ಹೇಳಿದ್ದಿಷ್ಟು
ಈ ವಿಚಾರವಾಗಿ ಕೆಎಸ್‌ಆರ್‌ಟಿಸಿ ಪ್ರಕಟಣೆ ಹೊರಡಿಸಿದೆ. ನವೆಂಬರ್ 3 ರಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರ ಪತ್ರವನ್ನು ಉಲ್ಲೇಖಿಸಿರುವ ಕೆಕೆಆರ್‌ಟಿಸಿ, ಕಂಡಕ್ಟರ್‌ಗಳು ಗುರುತಿನ ಪುರಾವೆಗಳನ್ನು ಹಾರ್ಡ್ ಕಾಪಿಗಳ ಮೂಲಕ (ಒರಿಜಿನಲ್ ಅಥವಾ ಫೋಟೊಕಾಪಿ) ಮತ್ತು ಡಿಜಿಲಾಕರ್ ಮೂಲಕವೂ ಸ್ವೀಕರಿಸಬಹುದು ಎಂಬ ಆದೇಶವಿದೆ. ಇದರ ಹೊರತಾಗಿಯೂ, ಕೆಲವು ಬಸ್ ಕಂಡಕ್ಟರ್‌ಗಳ ಬಗ್ಗೆ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಡಿಜಿಲಾಕರ್ ಮೂಲಕ ತೋರಿಸಿರುವ ಪುರಾವೆಗಳನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ ಮತ್ತು ಮಹಿಳಾ ಪ್ರಯಾಣಿಕರಿಗೆ ಅನಗತ್ಯ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಕೆಲವು ಕಂಡಕ್ಟರ್‌ಗಳ ವಿರುದ್ಧ ದೂರುಗಳು ಬಂದಿವೆ. ಕಂಡಕ್ಟರ್‌ಗಳು ಡಿಜಿಲಾಕರ್ ಮೂಲಕ ಐಡಿ ಪುರಾವೆಗಳನ್ನು ಸ್ವೀಕರಿಸಬೇಕು ಮತ್ತು ಇನ್ನು ಮುಂದೆ ಮಹಿಳಾ ಪ್ರಯಾಣಿಕರು ದೂರು ನೀಡುವಂತಾಗಬಾರದು ಎಂದು ಖಾತರಿಪಡಿಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೆಎಸ್‌ಆರ್‌ಟಿಸಿ ಉಲ್ಲೇಖಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:50 pm, Tue, 14 November 23