75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್‌ ಡೋಸ್‌: ಸಚಿವ ಡಾ.ಕೆ.ಸುಧಾಕರ್‌

ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿದ್ದು, ಮುಂದಿನ 75 ದಿನಗಳಲ್ಲಿ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಉಚಿತ ಬೂಸ್ಟರ್‌ ಡೋಸ್‌ ಲಸಿಕೆ ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ಬೆಂಗಳೂರಿನಲ್ಲಿ ಲಸಿಕಾಕರಣ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

75 ದಿನಗಳಲ್ಲಿ ನಾಲ್ಕೂವರೆ ಕೋಟಿ ಜನರಿಗೆ ಬೂಸ್ಟರ್‌ ಡೋಸ್‌: ಸಚಿವ ಡಾ.ಕೆ.ಸುಧಾಕರ್‌
ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಮತ್ತು ಸಚಿವ ಕೆ ಸುಧಾಕರ
Follow us
| Updated By: ವಿವೇಕ ಬಿರಾದಾರ

Updated on:Jul 16, 2022 | 4:50 PM

ಬೆಂಗಳೂರು: ಕೋವಿಡ್‌ (Covid) ನಿರ್ವಹಣೆಯಲ್ಲಿ ಸರ್ಕಾರ ಉತ್ತಮ ಸಾಧನೆ ಮಾಡಿದ್ದು, ಮುಂದಿನ 75 ದಿನಗಳಲ್ಲಿ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಉಚಿತ ಬೂಸ್ಟರ್‌ ಡೋಸ್‌ (Booster Dose) ಲಸಿಕೆ (Vaccine) ನೀಡಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ (K Sudhakar) ಬೆಂಗಳೂರಿನಲ್ಲಿ ಲಸಿಕಾಕರಣ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕರ್ನಾಟಕ ಶೇ.100 ಕ್ಕೂ ಅಧಿಕ ಪ್ರಮಾಣದಲ್ಲಿ ಎರಡೂ ಡೋಸ್‌ ಲಸಿಕೆ ನೀಡಿದೆ. 3ನೇ ಡೋಸ್​ನ್ನು ಕೂಡ ಮುಂದಿನ 75 ದಿನಗಳಲ್ಲಿ ರಾಜ್ಯದ 18 ರಿಂದ 59 ವಯೋಮಿತಿಯ ನಾಲ್ಕೂವರೆ ಕೋಟಿ ಜನರಿಗೆ ಕೊಡಬೇಕು ಅನ್ನುವ ಗುರಿ ಇದೆ. ಈ ಗುರಿ ತಲುಪಲು ಪೂರಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ರಾಜ್ಯದ ವಿವಿಧೆಡೆ ಏಳೂವರೆ ಸಾವಿರ ಸರ್ಕಾರಿ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನರು ಇದರ ಸಂಪೂರ್ಣ ಲಾಭ ಪಡೆಯಬೇಕು ಎಂದು ಕೋರಿದರು.

ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಡೀ ದೇಶಕ್ಕೆ ಕೊರೊನಾ ಲಸಿಕೆಯ 2 ಡೋಸ್‌ಗಳನ್ನು ಉಚಿತವಾಗಿ ನೀಡಿದ್ದರು. ಶುಕ್ರವಾರದಿಂದ ಬೂಸ್ಟರ್‌ ಡೋಸ್​​ನ್ನು ಕೂಡ ಉಚಿತವಾಗಿ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಈ ರೀತಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯದ 75 ವಿವಿಧ ಕ್ಷೇತ್ರಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಏಕ ಕಾಲಕ್ಕೆ ಆರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇತ್ತೀಚೆಗೆ ಅನೇಕರಿಗೆ ಕೋವಿಡ್‌ ಬಂದರೆ ಏನಾಗುತ್ತೆ ಅನ್ನುವ ಉದಾಸೀನತೆ ಇದೆ. 2 ಡೋಸ್‌ ಲಸಿಕೆ ತೆಗೆದುಕೊಂಡು 6 ತಿಂಗಳುಗಳ ಮೇಲಾಗಿದೆ. ಇನ್ನೂ ಕೆಲವರು 2ನೇ ಡೋಸ್‌ ತೆಗೆದುಕೊಂಡು 1 ವರ್ಷದ ಮೇಲಾಗಿದೆ. ಇಂತಹವರಿಗೆ ಅಪಾಯ ಇರುತ್ತದೆ. ಹೀಗಾಗಿ ಲಸಿಕಾಕರಣವನ್ನು ಗಂಭಿರವಾಗಿ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಇಲ್ಲಿಯ ತನಕ ಕೋವಿಡ್‌ ವಿರುದ್ಧ ಯಶಸ್ವಿಯಾಗಿ ಹೋರಾಟ ಮಾಡಲು ಲಸಿಕಾಕರಣದ ವೇಗವೇ ಕಾರಣವಾಗಿದೆ. ಹೀಗಾಗಿ ಎಲ್ಲರೂ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಿ ಏಂದು ಮನವಿ ಮಾಡಿದರು.

ಮುಖ್ಯಮಂತ್ರಿಗಳು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಶೀಘ್ರದಲ್ಲಿ ರಾಜ್ಯದಲ್ಲಿ 470 ಕಡೆಗಳಲ್ಲಿ ನಮ್ಮ ಕ್ಲಿನಿಕ್‌ ಆರಂಭವಾಗಲಿದೆ. ಮುಂದಿನ ಮೂರು ತಿಂಗಳ ಒಳಗೆ ಈ ಕ್ಲಿನಿಕ್‌ಗಳು ಆರಂಭವಾಗಲಿವೆ. ರಾಜಧಾನಿ ಬೆಂಗಳೂರಿನಲ್ಲಿ 243 ನಮ್ಮ ಕ್ಲಿನಿಕ್‌ ಆರಂಭವಾಗಲಿದೆ. ಜುಲೈ 28ಕ್ಕೆ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಮೊದಲ ಕ್ಲಿನಿಕ್‌ ಆರಂಭಿಸಲು ಹಗಲಿರುಳು ಶ್ರಮಿಸಲಾಗುತ್ತಿದೆ ಎಂದರು.

ಯಾವ ದೇಶದಲ್ಲೂ ಕೊರೊನಾ ಉಚಿತ ಲಸಿಕೆ ನೀಡಿಲ್ಲ. ವಿದೇಶದಲ್ಲಿ ಕೊರೊನಾ ಪರೀಕ್ಷೆ ಮಾಡಲು ಕೂಡ 10,000 ರೂ. ಕೊಡಬೇಕು. ಆದರೆ 133 ಕೋಟಿ ಜನರಿರುವ ದೇಶದಲ್ಲಿ ಕೊರೊನಾ ಟೆಸ್ಟ್‌, ಲಸಿಕೆ ಎಲ್ಲವೂ ಉಚಿತ. ಕೊರೊನಾ ನಿಯಂತ್ರಣ ಮಾಡುವಲ್ಲಿ ಪ್ರಧಾನಿಯವರ ಹಾಗೂ ಕೇಂದ್ರ ಸರ್ಕಾರದ ಕೊಡುಗೆ ದೊಡ್ಡದು. ಇಂತಹ ಸಮರ್ಥ ನಾಯಕತ್ವವನ್ನು ಜನರು  ಮರೆಯುವ ಹಾಗಿಲ್ಲ. ಜೊತೆಗೆ ಕೊರೊನಾ ನಿರ್ವಹಣೆ ಮಾಡಲು ಶ್ರಮಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಸ್ವಯಂ ಸೇವಕರುಗಳಿಗೆ ಧನ್ಯವಾದ ಅರ್ಪಿಸಿದರು.

Published On - 4:50 pm, Sat, 16 July 22