ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ರೇಷನ್; ಗದಗ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ಗಾಗಿ ಮುಗಿಬಿದ್ದ ಸಾರ್ವಜನಿಕರು
ಗ್ರಾಮದಲ್ಲಿ ಹೆಚ್ಚು ವ್ಯಾಕ್ಸಿನೇಷನ್ ಆಗಲಿ ಎನ್ನುವ ಉದ್ದೇಶದಿಂದ ನಿರ್ಧಾರ ಮಾಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ರೇಷನ್ ನೀಡಲಾಗುವುದು ಎಂದು ಕೊತಬಾಳ ಗ್ರಾಮ ಪಂಚಾಯತಿ ಪಿಡಿಒ ಕಲ್ಪನಾ ಕಡಗದ ತಿಳಿಸಿದ್ದಾರೆ.
ಗದಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಇನ್ನು ಕೊರೊನಾ ಸೋಂಕಿನ ಪ್ರಸರಣವನ್ನು ಕಡಿಮೆ ಮಾಡಲು ಲಸಿಕೆ ಪಡೆಯುವಂತೆ ಸರ್ಕಾರ ತಿಳಿಸಿದೆ. ಆದರೆ ಜನರು ಇನ್ನು ಕೂಡ ಮೂಢನಂಬಿಕೆಯಿಂದ ಹೋರಬಂದಿಲ್ಲ. ಕೊರೊನಾ ತಡೆಯಲು ಲಸಿಕೆ ಪಡೆಯಿರಿ ಎಂದು ಜಿಲ್ಲಾಮಟ್ಟದಲ್ಲಿ ಜನಜಾಗೃತಿ ಮೂಡಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯದವರಿಗೆ ಪಡಿತರ ಇಲ್ಲ ಎಂದು ಘೋಷಿಸಿದೆ. ಇದಕ್ಕೆ ಹೆದರಿದ ಇಲ್ಲಿನ ಜನತೆ ಸದ್ಯ ಲಸಿಕೆ ಪಡೆಯಲು ಮುಂದಾಗಿದ್ದಾರೆ.
ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳ್ಳಿಹಾಳ, ಮುಗಳಿ ಸೇರಿದಂತೆ ಮೂರು ಗ್ರಾಮದಲ್ಲಿ, ವ್ಯಾಕ್ಸಿನ್ ಹಾಕಿಸಿಕೊಳ್ಳದ್ದಿದ್ದರೆ, ಪಡಿತರ ರೇಷನ್ ನೀಡದಿರಲು ನಿರ್ಧಾರ ಮಾಡಲಾಗಿದೆ. ಕೊತಬಾಳ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಈ ನಿರ್ಣಯ ಕೈಗೊಂಡಿದ್ದಾರೆ. ಗ್ರಾಮದಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಂಡವರಿಗೆ ಆರೋಗ್ಯ ಇಲಾಖೆ ವತಿಯಿಂದ ಪತ್ರವೊಂದನ್ನು ನೀಡಲಾಗುತ್ತದೆ. ಪಡಿತರ ಚೀಟಿದಾರರು ತಮ್ಮ ಪಡಿತರ ಕಾರ್ಡಿನೊಂದಿಗೆ ಆರೋಗ್ಯ ಇಲಾಖೆ ಪತ್ರ ತರಬೇಕು. ಲಸಿಕೆ ಹಾಕಿಸಿಕೊಂಡ ಬಗ್ಗೆ ಪತ್ರ ನೀಡಿದರೆ ಮಾತ್ರ ಅಂತವರಿಗೆ ರೇಷನ್ ಹಂಚಿಕೆ ಮಾಡಲಾಗುವುದು ಎಂದು ಸೂಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನೇಷನ್ ಆಗಲಿ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಈರಣ್ಣಾ ಯಾಳಾಗಿ ಹೇಳಿದ್ದಾರೆ.
ಕೊರೊನಾ ನಿಯಂತ್ರಣ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಲಸಿಕೆ ಹಾಕಿಸಿಕೊಳ್ಳಲು ಜನರು ಮಾತ್ರ ಮುಂದೆ ಬರುತ್ತಿರಲ್ಲಿಲ್ಲ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಮನವಿ ಮಾಡಿದರು, ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನ ಬರಲ್ಲಿಲ್ಲ. ಈಗ ಗ್ರಾಮ ಪಂಚಾಯತಿ ಸರ್ವಾನುಮತದಿಂದ ರೇಷನ್ ನೀಡುವುದಿಲ್ಲ ಎಂದು ಠರಾವು ಮಾಡಿದ ಮೇಲೆ 100 ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಹೆಚ್ಚು ವ್ಯಾಕ್ಸಿನೇಷನ್ ಆಗಲಿ ಎನ್ನುವ ಉದ್ದೇಶದಿಂದ ನಿರ್ಧಾರ ಮಾಡಲಾಗಿದ್ದು, ಅರ್ಹ ಫಲಾನುಭವಿಗಳಿಗೆ ರೇಷನ್ ನೀಡಲಾಗುವುದು ಎಂದು ಕೊತಬಾಳ ಗ್ರಾಮ ಪಂಚಾಯತಿ ಪಿಡಿಒ ಕಲ್ಪನಾ ಕಡಗದ ತಿಳಿಸಿದ್ದಾರೆ.
ವ್ಯಾಕ್ಸಿನೇಷನ್ ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎನ್ನುವ ಉದ್ದೇಶದಿಂದ ಮಾಡಿದ ಈ ನಿರ್ಧಾರ ಸದ್ಯ ಯಶಸ್ವಿಯಾಗಿದೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕೊತಬಾಳ ಗ್ರಾಮವನ್ನು ಕೊರೊನಾ ಮುಕ್ತ ಮಾಡಲು ಇಟ್ಟ ಈ ಹೆಜ್ಜೆಗೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
ಗದಗ: ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ರೇಷನ್ ಇಲ್ಲ; ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಿರ್ಧಾರ
ವ್ಯಾಕ್ಸಿನ್ ಅಭಾವ; ಕೋವ್ಯಾಕ್ಸಿನ್ ಲಸಿಕೆ ಪಡೆಯಲು 30-35 ಕಿ.ಮೀ ದೂರದಿಂದ ಬರುತ್ತಿರುವ ಜನ