ದಿಂಗಾಲೇಶ್ವರ ಮಠ, ಫಕೀರೇಶ್ವರ ಮಠದ ಪೀಠಾಧಿಪತಿ ಆಗಿರುವ ಸ್ವಾಮೀಜಿಯನ್ನು ಬೆಂಬಲಿಸಿ ನರಗುಂದ ಪಟ್ಟಣಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಮುಳಗುಂದ ಪಟ್ಟಣದಲ್ಲಿಯೇ ಶ್ರೀಗಳ ಭಕ್ತರನ್ನು ಪೊಲೀಸರು ತಡೆಯುತ್ತಿದ್ದಾರೆ. ಪೊಲೀಸರ ನಡೆಗೆ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಧ್ವಜ ಕಟ್ಟಿದ ವಾಹನಗಳನ್ನು ಮಾತ್ರ ಪೊಲೀಸರು ಒಳಗೆ ಬಿಡುತ್ತಿದ್ದಾರೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ಮೂರು ಸಾವಿರ ಮಠದ ಪಿಠಾಧಿಪತಿಯಾಗಲು ದಿಂಗಾಗಲೇಶ್ವರ ಸ್ವಾಮೀಜಿ ರೌಡಿಸಂ ಮಾಡಿದ್ದರು. ಅವರ ಪೂರ್ವಾಶ್ರಮದ ಬಗ್ಗೆ ನನಗೆ ಗೊತ್ತಿದೆ ಎಂದು ಸಚಿವ ಸಿ.ಸಿ.ಪಾಟೀಲ ಬೆಂಗಳೂರಿನ ವಿಧಾನಸೌಧದಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಈ ಹೇಳಿಕೆಯಿಂದ ಕೆರಳಿದ್ದ ದಿಂಗಾಲೇಶ್ವರ ಸ್ವಾಮೀಜಿ, ನಾನು ಏನಾಗಿದ್ದ ಎಂಬುದನ್ನು ಸಿ.ಸಿ.ಪಾಟೀಲ ವಿವರಿಸಬೇಕು ಎಂದು ಒತ್ತಾಯಿಸಿದ್ದರು.
ನನ್ನ ಪೂರ್ವಾಶ್ರಮದ ಬಗ್ಗೆ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಮನೆಯಲ್ಲಿ ಮಾಲೀಕರಾಗಿದ್ದಿರೋ ಅಥವಾ ಜೀತದಾಳು ಆಗಿದ್ದರೋ ಎಂಬ ಬಗ್ಗೆ ಸಮಾಜಕ್ಕೆ ಸ್ಪಷ್ಟನೆ ನೀಡಬೇಕು. ಸ್ಪಷ್ಟನೆ ನೀಡಲು ವಿಫಲರಾದರೆ ಅವರ ಮನೆ ಎದುರು ಸತ್ಯಾಗ್ರಹ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಏನು ಕಾರಣ?
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಯ ನಂತರ ರಾಜ್ಯದಲ್ಲಿ ಕಮಿಷನ್ ಬಗ್ಗೆ ದೊಡ್ಡ ಚರ್ಚೆ ಆರಂಭವಾಗಿತ್ತು. ಈ ವೇಳೆ ಚಿತ್ರದುರ್ಗದಲ್ಲಿ ನಡೆದಿದ್ದ ಸಮಾರಂಭದಲ್ಲಿ ಮಾತನಾಡಿದ್ದ ದಿಂಗಾಲೇಶ್ವರ ಸ್ವಾಮೀಜಿ ರಾಜ್ಯ ಸರ್ಕಾರದಿಂದ ಅನುದಾನ ಪಡೆಯಲು ಮಠಗಳು ಸಹ ಶೇ 30ರ ಕಮಿಷನ್ ಕೊಡಬೇಕಿದೆ ಎಂದು ದೂರಿದ್ದರು. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು, ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದರು. ನಂತರದ ದಿನಗಳಲ್ಲಿ ಇದು ದೊಡ್ಡ ವಿವಾದವಾಗಿ ಬೆಳೆಯಿತು.
ಈ ಹೇಳಿಕೆಯನ್ನು ಖಂಡಿಸುವ ಭರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಸಚಿವ ಸಿ.ಸಿ.ಪಾಟೀಲ ರೌಡಿಸಂ ಆರೋಪ ಮಾಡಿದ್ದರು. ಈ ಹೇಳಿಕೆ ಖಂಡಿಸಿ ಇದೀಗ ಧರಣಿ ನಡೆಸಲು ದಿಂಗಾಲೇಶ್ವರ ಸ್ವಾಮೀಜಿ ಮುಂದಾಗಿದ್ದಾರೆ.
ಇದನ್ನೂ ಓದಿ: ನನ್ನ ರೌಡಿಸಂ ಸಾಬೀತು ಮಾಡಿ: ಸಚಿವ ಸಿಸಿ ಪಾಟೀಲ್ ಮನೆ ಎದುರು ದಿಂಗಾಲೇಶ್ವರ ಸ್ವಾಮೀಜಿ ಇಂದು ಧರಣಿ
ಇದನ್ನೂ ಓದಿ: ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಹಣ ಗುಳುಂ; ಸರ್ಕಾರದ ವಿರುದ್ಧ ದಿಂಗಾಲೇಶ್ವರ ಶ್ರೀಗಳಿಂದ ಹೊಸ ಬಾಂಬ್