ಗದಗ ಹಳ್ಳದಲ್ಲಿ ಸಿಲುಕಿರುವ ನಾಲ್ವರು ಕಾರ್ಮಿಕರು! ರಕ್ಷಣಾ ಕಾರ್ಯಕ್ಕೆ ಮುಂದಾದ ಅಗ್ನಿಶಾಮಕ ದಳದ ಸಿಬ್ಬಂದಿ
ಭಾರೀ ಮಳೆಗೆ ಜಿಲ್ಲೆಯ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದೆ. ಉಕ್ಕಿ ಹರಿಯುವ ಹಳ್ಳದಿಂದ ಕುರ್ಲಗೇರಿ ಗ್ರಾಮದಿಂದ ನರಗುಂದ, ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತವಾಗಿದೆ. ಇನ್ನು ಹಮ್ಮಿಗಿ-ಗುಮ್ಮಗೋಳ ಮಾರ್ಗದಲ್ಲಿರುವ ಸೇತುವೆ ಜಲಾವೃತವಾಗಿದೆ.
ಗದಗ: ನಿರಂತರ ಮಳೆಗೆ (Rain) ರಾಜ್ಯದಲ್ಲಿ ಅವಾಂತರ ಸೃಷ್ಟಿಯಾಗಿದೆ. ಹಲವೆಡೆ ಮನೆಗಳು (House) ಕುಸಿದು ಜನರು ಪರದಾಡುತ್ತಿದ್ದರೆ, ಇನ್ನು ಕೆಲವೆಡೆ ಭಾರೀ ಪ್ರಮಾಣದ ನೀರಿನಿಂದ ಊರುಗಳ ಮಧ್ಯೆ ಸಂಪರ್ಕ ಕಡಿತವಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ನಾಲ್ವರು ಕಾರ್ಮಿಕರು ಹಳ್ಳದಲ್ಲಿ ಸಿಲುಕಿದ್ದಾರೆ. ಕಾರ್ಮಿಕರು ನಿನ್ನೆ ರಾತ್ರಿ ಸೇತುವೆ ನಿರ್ಮಾಣ ಕಾಮಗಾರಿಗೆ ತೆರಳಿದ್ದರು. ಇಂದು ಬೆಳ್ಳಂಬೆಳಗ್ಗೆ ಬೆಣ್ಣೆ ಹಳ್ಳದಲ್ಲಿ ನೀರು ಹೆಚ್ಚಾದ ಹಿನ್ನೆಲೆ ರಸ್ತೆ ಸಂಪರ್ಕ ಕಡಿತವಾಗಿದೆ. ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿರುವ ನಾಲ್ವರು ಕಾರ್ಮಿಕರನ್ನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಲು ಮುಂದಾಗಿದೆ.
ಉಕ್ಕಿ ಹರಿಯುತ್ತಿರುವ ಬೆಣ್ಣೆ ಹಳ್ಳ: ಭಾರೀ ಮಳೆಗೆ ಜಿಲ್ಲೆಯ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದೆ. ಉಕ್ಕಿ ಹರಿಯುವ ಹಳ್ಳದಿಂದ ಕುರ್ಲಗೇರಿ ಗ್ರಾಮದಿಂದ ನರಗುಂದ, ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಡಿತವಾಗಿದೆ. ಇನ್ನು ಹಮ್ಮಿಗಿ-ಗುಮ್ಮಗೋಳ ಮಾರ್ಗದಲ್ಲಿರುವ ಸೇತುವೆ ಜಲಾವೃತವಾಗಿದೆ. ಸಿಂಗಟಾಲೂರು ಬ್ಯಾರೇಜ್ ಭರ್ತಿ ಹಿನ್ನೆಲೆ ಸೇತುವೆ ಮುಳುಗಡೆಯಾಗಿದೆ.
ತಡೆಗೋಡೆ ಕುಸಿತ: ದೇವನಹಳ್ಳಿ: ಕಳೆರ ಮೂರು ದಿನಗಳಿಂದ ಭಾರಿ ಗಾಳಿ, ಮಳೆಯಾಗುತ್ತಿರುವ ಹಿನ್ನೆಲೆ, ಮೇಲ್ಸೇತುವೆ ತಡೆಗೋಡೆ ಮತ್ತು ಮಣ್ಣು ಕುಸಿದಿದೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೇಲ್ಸೇತುವೆ ಈ ಹಿಂದೆಯು ಉದ್ಘಾಟನೆಗೂ ಮುನ್ನ ಕುಸಿತವಾಗಿತ್ತು. ನಂತರ ತೇಪೆ ಹಾಕಿ ಉದ್ಘಾಟನೆ ಮಾಡಿದ್ದರು. ಇದೀಗ ಮೂರನೆ ಬಾರಿಗೆ ಮತ್ತೆ ಕುಸಿದಿದೆ. ಮಣ್ಣು ಕುಸಿದಿರುವ ಕಾರಣ ವಾಹನ ಸವಾರರಲ್ಲಿ ಆತಂಕ ಹೆಚ್ಚಾಗಿದೆ. ಮೇಲ್ಸೇತುವೆಯ ಒಂದು ಬದಿಯ ರಸ್ತೆ ಸಂಚಾರ ಬಂದ್ ಆಗಿದೆ.
ಪರಿಹಾರ ಬಿಡುಗಡೆಗೆ ಸಿದ್ಧತೆ: ಇನ್ನು ಬೆಂಗಳೂರಿನಲ್ಲಿ ರಣಮಳೆಗೆ ಹಲವೆಡೆ ಅವಾಂತರ ಸೃಷ್ಟಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಹಾರ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಸಿಎಂ ಮಳೆ ಹಾನಿಗೆ 25 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಸರ್ವೆ ಮೂಲಕ ಹಾನಿಗೊಳಗಾದ 3,453 ಮನೆಗಳ ಗುರುತು ಮಾಡಿ 8,63,25,000 ರೂಪಾಯಿ ಪರಿಹಾರ ನೀಡಲಾಗುತ್ತದೆ. ಸದ್ಯ ಬಿಬಿಎಂಪಿ ಅಧಿಕಾರಿಗಳು ಮನೆಗಳ ಸರ್ವೆ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಕಲ್ಯಾಣ ಇಲಾಖೆ ವಿಶೇಷ ಆಯುಕ್ತ ಶರತ್ ಮಾಹಿತಿ ನೀಡಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Sat, 21 May 22