ಗದಗ: ಬೇಕಾಬಿಟ್ಟಿ ಲೆಕ್ಕ ಬರೆದು ಲಕ್ಷ ಲಕ್ಷ ಹಣ ಲೂಟಿ; ಅಧಿಕಾರಿಯನ್ನ ಕಚೇರಿ ಒಳಗಡೆ ಬಿಡದೇ ವಾಪಸ್ ಕಳುಹಿಸಿದ ಜನ
ಆತ ಭ್ರಷ್ಟ ಮುಖ್ಯಾಧಿಕಾರಿ ಹೀಗಾಗಿ ಡಿಸಿ ಮೇಡಂ ಸಸ್ಪೆಂಡ್ ಮಾಡಿ ಮನೆಗೆ ಕಳಿಸಿದ್ರು. ಆದರೂ ಈ ಅಧಿಕಾರಿ ಜಿಲ್ಲಾಧಿಕಾರಿಗೆ ಸವಾಲು ಹಾಕಿ ಮತ್ತೆ ಇದೇ ಪಟ್ಟಣ ಪಂಚಾಯತಿಗೆ ಆರ್ಡರ್ ತಗೊಂಡು ಬಂದಿದ್ದ. ಆದರೆ ಆ ಪಟ್ಟಣದ ಜನರು ಇತನನ್ನ ಕಚೇರಿ ಒಳಗೆ ಬಿಡದೇ ಧರಣಿ ಮಾಡಿ, ವಾಪಸ್ ಕಳುಹಿಸಿದ್ದಾರೆ.
ಗದಗ: ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ವಿರುದ್ಧ ಸಿಡಿದೆದ್ದ ಪಟ್ಟಣದ ಜನರು, ಈ ಭ್ರಷ್ಟ ಅಧಿಕಾರಿ ನಮ್ಮೂರಿಗೆ ಬೇಡವೇ ಬೇಡ ಎಂದು ಪಟ್ಟು ಹಿಡಿದ ನಾಗರಿಕರು. ಎರಡು ದಿನ ಮತ್ತೆ ಮುಖ್ಯಾಧಿಕಾರಿಯಾಗಿ ಚಾರ್ಜ್ ಪಡೆಯಬೇಕು ಎಂದು ಬಂದ ಮುಖ್ಯಾಧಿಕಾರಿಯನ್ನ ವಾಪಸ್ ಕಳಿಸಿದ ನಾಗರಿಕರು. ಭ್ರಷ್ಟ ಅಧಿಕಾರಿ ವಿರುದ್ಧದ ಸಮರದಲ್ಲಿ ಗೆದ್ದ ಪಟ್ಟಣದ ಜನರು. ಹೌದು ಈ ಫೋಟೋದಲ್ಲಿ ಇರುವ ವ್ಯಕ್ತಿಯೇ ಭ್ರಷ್ಟ ಮುಖ್ಯಾಧಿಕಾರಿ ಹಣಮಂತಪ್ಪ. ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣ ಪಂಚಾಯತ್ನಲ್ಲಿ ಈತ ಮುಖ್ಯಾಧಿಕಾರಿಯಾಗಿ ಸೇವೆ ಮಾಡಿದ್ದಾರೆ. ಆಗ ಪಟ್ಟಣ ಪಂಚಾಯತ್ನಲ್ಲಿ ಇತ ಆಡಿದ್ದೇ ಆಟವಾಗಿತ್ತು. ಸರ್ಕಾರದ ಕಾನೂನು, ನಿಯಮ ಅಂದ್ರೆ ಆತನಿಗೆ ಅಲರ್ಜಿ. ಆ ಮುಖ್ಯಾಧಿಕಾರಿ ಭ್ರಷ್ಟಾಚಾರಕ್ಕೆ ಸ್ವತಃ ಜಿಲ್ಲಾಧಿಕಾರಿಗಳೇ ದಂಗಾಗಿದ್ರು. ಕಾಗಕ್ಕ ಗುಬ್ಬಕ್ಕನ ಲೆಕ್ಕ ಬರೆದು ಲಕ್ಷ ಲಕ್ಷ ಲೂಟಿ ಮಾಡಿದ್ದ ಈ ಅಧಿಕಾರಿ ನಮ್ಮ ಪಟ್ಟಣ ಪಂಚಾಯತ್ ಹಗಲು ದರೊಡೆ ಮಾಡಿದ್ದಾನೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಇತನ ಹಗಲು ದರೋಡೆ ಮೇಲ್ನೋಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿ ವೈಶಾಲಿ ಅವರು ಅಮಾನತು ಮಾಡಿದ್ರು. ಆದರೆ ಈ ಭಂಡ ಅಧಿಕಾರಿ ಡಿಸಿ ಮೇಡಂಗೆ ಚಾಲೆಂಜ್ ಮಾಡಿ ಮತ್ತೆ ಇದೇ ಪಟ್ಟಣ ಪಂಚಾಯತ್ಗೆ ಮಾ.3ರಂದು ಆಗಮಿಸಿದ್ದಾರೆ. ಆದರೆ ಈ ಭ್ರಷ್ಟ ಮುಖ್ಯಾಧಿಕಾರಿ ಮತ್ತೆ ನಮ್ಮೂರಿಗೆ ಒಕ್ಕರಿಸಿಕೊಳ್ಳುತ್ತಾನೆ ಎನ್ನುವ ಸುದ್ದಿ ತಿಳಿದಿದ್ದೇ ತಡ ಇಡೀ ಪಟ್ಟಣದ ಜನರು ಪಟ್ಟಣ ಪಂಚಾಯತ್ ಕಚೇರಿಗೆ ಬೀಗ ಜಡಿದು ಈ ಭ್ರಷ್ಟ ಮುಖ್ಯಾಧಿಕಾರಿ ಹಣಮಂತಪ್ಪನನ್ನು ಒಳಗೆ ಬಿಟ್ಟಿಲ್ಲ. ಅಷ್ಟೇ ಅಲ್ಲ ಯಾವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕಚೇರಿ ಒಳಗಡೆ ಬಿಟ್ಟಿಲ್ಲ. ತಕ್ಷಣ ಈ ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡಿ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಿದ್ರೆ ಮಾತ್ರ ಕಚೇರಿ ಬೀಗ ತೆಗೆಯುವುದಾಗಿ ಪಟ್ಟಣದ ಜನ್ರು ಪಟ್ಟು ಹಿಡಿದಿದ್ರು. ಮೇಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಎಷ್ಟೇ ಮನವೊಲಿಸಿದ್ರು ಪಟ್ಟು ಬಿಡದ ಜನರು ಅಹೋರಾತ್ರಿ ಧರಣಿ ಮಾಡಿ ಭ್ರಷ್ಟ ಮುಖ್ಯಾಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ:ಚಾಮರಾಜನಗರ: ಬಂಡೀಪುರ ಹುಲಿ ಯೋಜನೆ ನಿರ್ದೇಶಕನ ಮೇಲೆ ಭ್ರಷ್ಟಾಚಾರ ಆರೋಪ; ತನಿಖೆಗೆ ಆಗ್ರಹಿಸಿದ ರೈತ ಸಂಘ
ಇನ್ನು ಈ ಭ್ರಷ್ಟ ಅಧಿಕಾರಿಗೆ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಕುಮ್ಮಕ್ಕು ಇದೆ. ಎಲ್ಲ ತನಿಖೆ ಮಾಡಿದ್ರೆ ಶಾಸಕರು ಸಿಕ್ಕಾಹಾಕಿಕೊಳ್ತಾರೆ ಎಂದು ಜನರು ಆರೋಪಿಸಿದ್ದಾರೆ. ಪಟ್ಟಣದ ಜನರ ಆಕ್ರೋಶದ ಹಿನ್ನೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಪಟ್ಟಣ ಪಂಚಾಯತ್ ಕಚೇರಿಗೆ ಬೀಗಿ ಪೊಲೀಸ್ ಪಹರೆ ನಿಯೋಜನೆ ಮಾಡಲಾಗಿತ್ತು. ಇನ್ನು ಮಧ್ಯಾಹ್ನದವರೆಗೂ ಹೊಸ ಮುಖ್ಯಾಧಿಕಾರಿ ಬಾರದ ಕಾರಣ ಕಚೇರಿ ಬಾಗಿಲು ತೆರೆಯಲು ಅವಕಾಶ ನೀಡದ ಪರಿಣಾಮ ಎಲ್ಲ ಸಿಬ್ಬಂದಿಗಳು ಹೊರಗಡೆಯೇ ನಿಲ್ಲುವ ಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾಡಳಿತ ಮಧ್ಯಾಹ್ನ ವೇಳೆ ಹೊಸ ಮುಖ್ಯಾಧಿಕಾರಿಯನ್ನು ನೇಮಕ ಮಾಡಿ ಆದೇಶ ಮಾಡಿತ್ತು.
ಆದರೂ ಹೊಸ ಅಧಿಕಾರಿ ಬಂದು ಸೇವೆಗೆ ಹಾಜರಾಗುವವರೆಗೂ ಕಚೇರಿ ಬೀಗ ತೆಗೆಯಲ್ಲ ಎಂದು ಪಟ್ಟು ಹಿಡಿದ್ರು, ಜನಾಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ತಕ್ಷಣ ನೂತನ ಮುಖ್ಯಾಧಿಕಾರಿಯನ್ನು ಕಳಿಸಿ ಸೇವೆಗೆ ಹಾಜರಾಗುವಂತೆ ಸೂಚನೆ ನೀಡಿದ ಬಳಿಕ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರಿ ಸ್ವೀಕಾರ ಮಾಡಿದ್ರು. ಬಳಿಕ ಜನರು ಧರಣಿ ಹಿಂಪಡೆದ್ರು. ಆದರೆ ನರೇಗಲ್ ಪಟ್ಟಣ ಪಂಚಾಯತ್ ಹಣ ಲೂಟಿ ಮಾಡಿದ ಮುಖ್ಯಾಧಿಕಾರಿ ಹಣಮಂತಪ್ಪನ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ, ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ: ಸುರ್ಜೇವಾಲ ಆಗ್ರಹ
ಪಟ್ಟಣ ಪಂಚಾಯತ್ನಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಸುಮಾರು 80ಲಕ್ಷಕ್ಕೂ ಹೆಚ್ಚು ಲೂಟಿ ಮಾಡಿದ್ದಾನೆ ಈ ಅಧಿಕಾರಿ ಎಂದು ಜನರು ಆರೋಪಿಸಿದ್ದಾರೆ. ಸರ್ಕಾರದ ಹಣವನ್ನ ಬೇಕಾಬಿಟ್ಟಿ ಖರ್ಚು ಮಾಡಿ ಲಕ್ಷ ಲಕ್ಷ ಹಗಲು ದರೋಡೆ ಮಾಡಿದ್ದಾನೆ. ತನಿಖೆ ಮಾಡಿದ್ರೆ ಜನ್ರಪ್ರತಿನಿಧಿಗಳು ಸಿಕ್ಕಾಹಾಕಿಕೊಳ್ತಾರೆ ಎಂದು ಪಟ್ಟಣದ ಜನರು ಆರೋಪ ಮಾಡಿದ್ದಾರೆ. ಹೀಗಾಗಿ ತನಿಖೆ ಆಗದಂತೆ ಜನಪ್ರತಿನಿಧಿಗಳ ಅಡ್ಡಗಾಲು ಹಾಕುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಏನೇ ಇರಲಿ ಜನಾಕ್ರೋಶಕ್ಕೆ ಭ್ರಷ್ಟ ಮುಖ್ಯಾಧಿಕಾರಿ ಓಡಿ ಹೋಗಿದ್ದಾರೆ. ಜನರು ಸಿಡಿದೆದ್ರೆ ಏನ್ ಬೇಕಾದ್ರೂ ಮಾಡಬಹುದು ಎಂದು ನರೇಗಲ್ ನಾಗರಿಕರು ತೋರಿಸಿಕೊಟ್ಟಿದ್ದಾರೆ.
ವರದಿ: ಸಂಜೀವ ಪಾಂಡ್ರೆ ಟಿವಿ9 ಗದಗ
ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:27 am, Mon, 6 March 23