ಗದಗ-ಬೇಟಗೇರಿ ನಗರ ಸಭೆಯಲ್ಲಿ ಗೋಲ್ಮಾಲ್; ಕಾನೂನ ಬಾಹಿರ ಕಾಮಗಾರಿ ಟೆಂಡರ್ ಮಾಡಿ ಕೋಟ್ಯಾಂತರ ಹಣ ಲೂಟಿಗೆ ಪ್ಲಾನ್
ಕೋಟ್ಯಂತರ ಮೊತ್ತದ ನಕಲಿ ಠರಾವು ಪ್ರಕರಣದಿಂದ ಕುಖ್ಯಾತಿ ಪಡೆದಿದ್ದ ಗದಗ ನಗರಸಭೆ ಈಗ ಮತ್ತೊಂದು ಗೋಲ್ಮಾಲ್ ಮಾಡೋಕೆ ಹೋಗಿ ಮತ್ತೆ ಸುದ್ಧಿಯಲ್ಲಿದೆ. ಅಧ್ಯಕ್ಷೆ ಉಷಾ ದಾಸರ್ ಸರ್ವಾಧಿಕಾರಕ್ಕೆ ಸ್ವಪಕ್ಷದ ಸದಸ್ಯರೇ ಕೆಂಡಾಮಂಡಲವಾಗಿದ್ದಾರೆ. ಉಪಾಧ್ಯಕ್ಷೆಯೇ ಅಧ್ಯಕ್ಷೆ ಅಂಧಾದರ್ಬಾರ್ ವಿರುದ್ಧ ಡಿಸಿ ದೂರು ನೀಡಿದ್ದಾರೆ. ಇಷ್ಟೊಂದು ರಾಧ್ಧಾಂತ ನಡೆದ್ರೂ ಜಿಲ್ಲಾಡಳಿತ ಮೌನತಾಳಿದ್ದು ಅವಳಿ ನಗರದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗದಗ, ಸೆ.01: ಗದಗ-ಬೆಟಗೇರಿ ನಗರಸಭೆ (Gadag-Betageri City Municipal Council) ಯಲ್ಲಿ ಮತ್ತೊಂದು ಕರ್ಮಕಾಂಡ ಕೇಳಿಬಂದಿದೆ. ಕಾನೂನ ಬಾಹಿರ ಕಾಮಗಾರಿ ಟೆಂಡರ್ (Tender) ಮಾಡಿ ನಗರಸಭೆ ಅಧ್ಯಕ್ಷೆ ಕೋಟ್ಯಾಂತರ ಹಣ ಲೂಟಿಗೆ ಪ್ಲಾನ್ ಮಾಡಿರುವ ಆರೋಪ ಕೇಳಿಬಂದಿದೆ. ಯಾವಾಗ ಬಿಜೆಪಿ, ನಗರಸಭೆ ಅಧಿಕಾರದ ಗದ್ದುಗೆ ಏರಿದಿಯೋ ಇಂದಿಗೂ ಅವಳಿ ನಗರದ ಜನರಿಗೆ ನೆಮ್ಮದಿ ಎನ್ನುವುದೇ ಇಲ್ಲದಂತಾಗಿದೆ. ನಿತ್ಯವೂ ಒಂದಿಲ್ಲೊಂದು ರಾದ್ಧಾಂತ, ಹಗರಣದಲ್ಲೇ ನಗರಸಭೆ ಮುಳುಗಿದೆ. ಅದರಲ್ಲೂ ಅಧ್ಯಕ್ಷೆ ಉಷಾ ದಾಸರ್ ಸರ್ವಾಧಿಕಾರ, ಅಂಧ ದರ್ಬಾರ್ಕ್ಕೆ ಸ್ವಪಕ್ಷದ ಸದಸ್ಯರೇ ಬೇಸತ್ತು ಹೋಗಿದ್ದಾರೆ. ಹೌದು, ಅಧ್ಯಕ್ಷೆ ಉಷಾ ದಾಸರ್ ಅವರು ಉಪಾಧ್ಯಕ್ಷೆ ಸುನಂದಾ ಬಾಕಳೆ ಹಾಗೂ ಬಿಜೆಪಿ ಸದಸ್ಯರ ಜೊತೆ ಚರ್ಚಿಸದೇ ಏಕಾಏಕಿ ಆಗಸ್ಟ್ 30 ರಂದು ಸಾಮಾನ್ಯ ಸಭೆ ಕರೆದಿದ್ದರು. ಆದ್ರೆ, ಇದು ನಿಯಮ ಬಾಹಿರ ಸಭೆ ಎಂದು ಸರ್ವಾನುಮತದಿಂದ ಎಲ್ಲರೂ ವಿರೋಧಿಸಿದರು.
ಒಂದೇ ತಿಂಗಳಲ್ಲಿ 9 ಕೋಟಿ ಮೊತ್ತದ ನೂರಾರು ಟೆಂಡರ್ ಪ್ರಕ್ರಿಯೆ
ಅಷ್ಟೇ ಅಲ್ಲ ಉಪಾಧ್ಯಕ್ಷೆ ಸುನಂದಾ ಬಾಕಳೆ ಸಭೆ ಬಗ್ಗೆ ಹಾಗೂ ಟೆಂಡರ್ನಲ್ಲಾದ ಗೋಲ್ಮಾಲ್ ಬಗ್ಗೆ ಡಿಸಿಗೆ ಲಿಖಿತ್ ದೂರು ನೀಡಿದ್ದಾರೆ. ಹೀಗಾಗಿ ಅಂದಿನ ಸಭೆ ರದ್ದಾಗಿದೆ. ಆದ್ರೆ, ಆಗಸ್ಟ್ ಒಂದೇ ತಿಂಗಳಲ್ಲೇ ಅಂದಾಜು 9 ಕೋಟಿ ಮೊತ್ತದ ನೂರಕ್ಕೂ ಹೆಚ್ಚು ಕಾಮಗಾರಿಗಳ ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆ ನಡೆಸಿದ್ದು ಬೆಳಕಿಗೆ ಬಂದಿದೆ. ಈ ಮೂಲಕ ನಗರಸಭೆ ನಡಾವಳಿಗಳನ್ನು ಪೌರಾಯುಕ್ತರು ಮತ್ತು ಅಧ್ಯಕ್ಷರು ಉಲ್ಲಂಘಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಹಗರಣಗಳ ತನಿಖೆಗೆ ಒತ್ತಾಯಿಸಿದ ಉಪಾಧ್ಯಕ್ಷೆ ಸುನಂದಾ ಬಾಕಳೆ
ಸಾಮಾನ್ಯ ಸಭೆ ಕರೆಯದೇ, ಸಭೆಯಲ್ಲಿ ಕಾಮಗಾರಿಗಳ ಬಗ್ಗೆ ಚಚಿರ್ಸದೇ, ಸಭೆಯ ಒಪ್ಪಿಗೆ ಪಡೆಯದೇ ಮತ್ತು ಸ್ಥಾಯಿ ಸಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚಚಿರ್ಸದೇ ಕೋಟ್ಯಂತರ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಜನರ ತೆರಿಗೆ ಹಣ ಸದಸ್ಯರು, ಅಧಿಕಾರಿಗಳು ಲೂಟಿ ಮಾಡ್ತಾಯಿದ್ದಾರೆ ಅಂತ ಜನ್ರು ಕಿಡಿಕಾರಿದ್ದಾರೆ. ಈ ಎಲ್ಲ ಗೋಲ್ಮಾಲ್ ಕಾಮಗಾರಿಗಳಿಗೆ ಅನುಮೋದನೆ ಪಡೆಯಲು ಅಧ್ಯಕ್ಷರು ಹಾಗೂ ಆಯುಕ್ತರು ತರಾತುರಿಯಲ್ಲಿ ಸಾಮಾನ್ಯ ಸಭೆ ಕರೆದಿದ್ದಾರೆ ಎಂದು ದೂರು ನೀಡಿದ್ದಾರೆ. ಟೆಂಡರ್ನಲ್ಲಿ ಆದ ಹಗರಣ ಸಂಪೂರ್ಣ ತನಿಖೆಯಾಗಬೇಕು ಎಂದು ಉಪಾದ್ಯಕ್ಷೆ ಸುನಂದಾ ಬಾಕಳೆ ಒತ್ತಾಯಿಸಿದ್ದಾರೆ.
ಕೆಲ ಕಾಮಗಾರಿಗಳಿಗೆ ಜರುಗಿದ ಗುದ್ದಲಿ ಪೂಜೆ
ನಗರದಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೂ ನಗರಸಭೆಯ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಬೇಕು. ಆದರೆ, ಕಳೆದ ಎರಡ್ಮೂರು ತಿಂಗಳಿಂದ ನಗರಸಭೆ ಸಾಮಾನ್ಯ ಸಭೆ ಜರುಗಿಯೇ ಇಲ್ಲ. ಹೀಗಿದ್ದರೂ, ಆಗಸ್ಟ್.14 ಮತ್ತು 16 ರಂದು ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಕೆಲ ಕಾಮಗಾರಿಗಳಿಗೆ ಗುದ್ದಲಿ ಪೂಜೆಯೂ ಜರುಗಿದೆ. ಈ ಕಾನೂನು ಬಾಹಿರ ಪ್ರಕ್ರಿಯೆ ಆಗಸ್ಟ್ 29ರಂದು ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಲ್ಲಿ ಕೆಲವರು ಆಗಸ್ಟ್ 30ರಂದು ಸಂಜೆ ಸಾಮಾನ್ಯ ಸಭೆ ಜರಗಿಸುವಂತೆ ಪೌರಾಯುಕ್ತರನ್ನು ಒಪ್ಪಿಸಿದ್ದಾರೆ. ನಗರಸಭೆಯ ಎಲ್ಲ ಸದಸ್ಯರಿಗೆ ರಾತ್ರೋ ರಾತ್ರಿ ಸಾಮಾನ್ಯ ಸಭೆಯ ನೋಟೀಸ್ ಹಂಚಲಾಗಿದೆ. ಈ ಪ್ರಕ್ರಿಯೆಯನ್ನು ನಗರಸಭೆ ಉಪಾಧ್ಯೆ ಸುನಂದಾ ಬಾಕಳೆ ಸೇರಿ ಬಿಜೆಪಿ, ಕಾಂಗ್ರೆಸ್ ಸದಸ್ಯರು ವಿರೋಧಿಸಿದ್ದಾರೆ.
ತಪ್ಪೊಪ್ಪಿಕೊಳ್ಳದ ಅಧ್ಯಕ್ಷೆ ಉಷಾ ದಾಸರ್
ಇಷ್ಟೆಲ್ಲಾ ಘಟನೆಗಳು ಆಗುತ್ತಿದ್ದರು. ಆದ್ರೆ, ಅಧ್ಯಕ್ಷೆ ಉಷಾ ದಾಸರ್ ಮಾತ್ರ ತಪ್ಪು ಒಪ್ಪಿಕೊಳ್ಳುತ್ತಿಲ್ಲ. ಅಭಿವೃದ್ಧಿ ಕಾಮಗಾರಿಯಲ್ಲಿ ಹೆಚ್ಚು ಕಡಿಮೆಯಾಗಿ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಆಗಿದೆ. ಎಲ್ಲರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ತೀವಿ ಅಂತಿದ್ದಾರೆ. ಗದಗ ನಗರಸಭೆ ಅಧ್ಯಕ್ಷೆ ಅಂಧ ದರ್ಭಾರ್ಗೆ ಬಿಜೆಪಿ ಪಕ್ಷದ ಉಪಾಧ್ಯಕ್ಷೆ ಹಾಗೂ ಸದಸ್ಯರೇ ರೋಸಿಹೋಗಿದ್ದಾರೆ. ಆಡಳಿತ ಪಕ್ಷದ ಸದಸ್ಯರ ಕಡೆಗಣಿಸಿ ಕಾಂಗ್ರೆಸ್ ಪಕ್ಷದ ಕೆಲಸ ಸದಸ್ಯರ ಜೊತೆ ಶಾಮೀಲಾಗಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತಿದೆ. ಬಿಜೆಪಿ ಅಡಳಿತದ ನಗರಸೆಭೆ ಅಧ್ಯಕ್ಷೆ ಹಾಗೂ ಸದಸ್ಯರ ಗುದ್ದಾಟದಿಂದ ಗದಗ-ಬೆಟಗೇರಿ ಅವಳಿ ನಗರದ ಜನ್ರು ಬೇಸತ್ತು ಹೋಗಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು ಮಾತ್ರ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ