ನಿರಂತರ ಮಳೆಯಿಂದ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ: ಸಂಕಷ್ಟದಲ್ಲಿ ಗದಗ ಯಾತ್ರಿಕರು
ಜಮ್ಮು ಕಾಶ್ಮೀರದಲ್ಲಿ ನಿರಂತರ ಮಳೆಯಾಗುತ್ತಿದ್ದು, ಗುಡ್ಡ ಕುಸಿತವೂ ಉಂಟಾಗಿದೆ. ಪರಿಣಾಮ ಕರ್ನಾಟಕದ ಗದಗದಿಂದ ತೆರಳಿದ ಅಮರನಾಥ ಯಾತ್ರಿಕರು ದಾರಿ ಮಧ್ಯೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗದಗ: ನಿರಂತರ ಮಳೆಯಾಗುತ್ತಿರುವ ಪರಿಣಾಮ ಜಮ್ಮು ಕಾಶ್ಮೀರದ ಅಮರನಾಥ (Amarnath) ಮಾರ್ಗ ಮಧ್ಯೆ ಗುಡ್ಡ ಕುಸಿತ (Landslide) ಉಂಟಾಗಿದ್ದು, ಗದಗದಿಂದ (Gadag) ತೆರಳಿದ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಗದಗದ ಸುಮಾರು 23 ಕನ್ನಡಿಗರು ಅಮರನಾಥ ಯಾತ್ರೆಗೆ ತೆರಳಿದ್ದರು. ಸದ್ಯ ಧಾರಾಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಪಂಚತರಣಿ ಕ್ಯಾಂಪ್‌ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಅಮರನಾಥದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಜಿಲ್ಲೆಯ ಯಾತ್ರಿಕರು ಗದಗ ಎಸ್ಪಿ ಬಿ.ಎಸ್.ನೇಮಗೌಡ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ಎಸ್ಪಿ, ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲು ವ್ಯವಸ್ಥೆ ಮಾಡುತ್ತಿದ್ದಾರೆ. ಈ ಬಗ್ಗೆ ಟಿವಿ9 ಗೆ ಎಸ್ಪಿ ನೇಮಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Amarnath Yatra: ಕಾಶ್ಮೀರದಲ್ಲಿ ಭಾರೀ ಮಳೆ, ಅಮರನಾಥ ಯಾತ್ರೆ ಸ್ಥಗಿತ
ಕಾಶ್ಮೀರದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಬಾಲ್ಟಾಲ್ ಮತ್ತು ಪಹಲ್ಗಾಮ್ ಅವಳಿ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಜುಲೈ 7 ರಂದು ತಿಳಿಸಿದ್ದರು. ಬೆಳಿಗ್ಗೆ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಯಾವುದೇ ಯಾತ್ರಿಕರಿಗೆ ಪವಿತ್ರ ಗುಹೆಯತ್ತ ತೆರಳಲು ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರು.
3,200 ಯಾತ್ರಾರ್ಥಿಗಳನ್ನು ನುನ್ವಾನ್ ಪಹಲ್ಗಾಮ್ ಶಿಬಿರದಲ್ಲಿ ಮತ್ತು 4,000 ಯಾತ್ರಾರ್ಥಿಗಳನ್ನು ಬಾಲ್ಟಾಲ್ ಬೇಸ್ ಕ್ಯಾಂಪ್‌ನಲ್ಲಿ ಆಶ್ರಯ ನೀಡಲಾಗಿತ್ತು. ಹವಾಮಾನ ಸುಧಾರಿಸಿದ ನಂತರ ಯಾತ್ರೆ ಪುನರಾರಂಭವಾಗಲಿದೆ. ಇದುವರೆಗೆ 80,000ಕ್ಕೂ ಹೆಚ್ಚು ಭಕ್ತರು ಯಾತ್ರೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. 7,010 ಯಾತ್ರಾರ್ಥಿಗಳನ್ನು ಒಳಗೊಂಡ 8ನೇ ಬ್ಯಾಚ್ ಶುಕ್ರವಾರ 247 ವಾಹನಗಳು ಬಘವತಿ ನಗರ ಬೇಸ್ ಕ್ಯಾಂಪ್ ಜಮ್ಮುವಿನಿಂದ ಕಣಿವೆಯ ಕಡೆಗೆ ಹೊರಟಿತು ಎಂದು ತಿಳಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:58 pm, Sat, 8 July 23