AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೈರನಹಟ್ಟಿ ಮಠದಲ್ಲಿ ಕನ್ನಡವೇ ಆರಾಧ್ಯ ದೈವ, ಕನ್ನಡವೇ ನಿತ್ಯ ಮಂತ್ರ! ವರ್ಷವಿಡೀ ಆರಾಧನೆ, ಅದ್ಧೂರಿ ಭುವನೇಶ್ವರಿ ರಥೋತ್ಸವ

ಕರ್ನಾಟಕ ರಾಜ್ಯೋತ್ಸವ: ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ವರ್ಷವಿಡೀ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡದ ಮಹನೀಯರ ಭಾವಚಿತ್ರಗಳಿಂದ ಅಲಂಕೃತಗೊಂಡ ಭುವನೇಶ್ವರಿ ರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಕನ್ನಡದ ಮೇಲಿನ ಪ್ರೀತಿ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂಬ ಉದ್ದೇಶದೊಂದಿಗೆ ಮಠದಲ್ಲಿ ಸದಾ ಕನ್ನಡಮ್ಮನ ಆರಾಧನೆ ನಡೆಯುತ್ತಿರುವುದು ವಿಶೇಷ.

ಭೈರನಹಟ್ಟಿ ಮಠದಲ್ಲಿ ಕನ್ನಡವೇ ಆರಾಧ್ಯ ದೈವ, ಕನ್ನಡವೇ ನಿತ್ಯ ಮಂತ್ರ! ವರ್ಷವಿಡೀ ಆರಾಧನೆ, ಅದ್ಧೂರಿ ಭುವನೇಶ್ವರಿ ರಥೋತ್ಸವ
ವರ್ಷವಿಡೀ ಕನ್ನಡ ಆರಾಧನೆ, ಅದ್ಧೂರಿ ಭುವನೇಶ್ವರಿ ರಥೋತ್ಸವ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on:Nov 03, 2026 | 10:34 AM

Share

ಮುಖ್ಯಾಂಶಗಳು

  • ವರ್ಷವಿಡೀ ಕನ್ನಡಮ್ಮನ ಆರಾಧನೆ ಮಾಡುವ ಭೈರನಹಟ್ಟಿ ಮಠ
  • ಕನ್ನಡದ ಮಹನೀಯರ ಭಾವಚಿತ್ರಗಳಿಂದ ಕಂಗೊಳಿಸಿದ ಭುವನೇಶ್ವರಿ ರಥ
  • ನೂರಾರು ಕನ್ನಡಾಭಿಮಾನಿಗಳಿಂದ ರಥೋತ್ಸವದಲ್ಲಿ ಭಕ್ತಿ ಸಂಭ್ರಮ

ಗದಗ, ನವೆಂಬರ್ 3: ನವೆಂಬರ್ ತಿಂಗಳು ಬಂತೆಂದರೆ ಸಾಕು, ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆಮಾಡುತ್ತದೆ. ಕನ್ನಡದ ಬಾವುಟಗಳ ಹಾರಾಟ, ಕನ್ನಡದ ಜಯಘೋಷ ಮೊಳಗುತ್ತದೆ. ಆದರೆ ನವೆಂಬರ್ ಮುಗಿಯುತ್ತಿದ್ದಂತೆ ಕನ್ನಡದ ಮೇಲಿನ ಅಭಿಮಾನವೂ ಕಡಿಮೆಯಾಗುತ್ತದೆ ಎಂಬ ಮಾತಿದೆ. ಇದಕ್ಕೆ ಭಿನ್ನವಾಗಿ ಗದಗ ಜಿಲ್ಲೆಯ ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದಲ್ಲಿ ವರ್ಷವಿಡೀ ಕನ್ನಡದ ಆರಾಧನೆ ನಡೆಯುತ್ತದೆ. ನಿತ್ಯವೂ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುವ ಈ ಮಠದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅದ್ಧೂರಿ ರಥೋತ್ಸವ ಆಯೋಜಿಸಲಾಗಿತ್ತು.

ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡವೇ ಆರಾಧ್ಯ ದೈವ. ಇಲ್ಲಿ ಪ್ರತಿನಿತ್ಯ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತದೆ. ಮಠದ ಪೀಠಾಧಿಪತಿ ಶಾಂತಲಿಂಗ ಶ್ರೀಗಳು ಕನ್ನಡದ ಜಗದ್ಗುರು ಎಂದೇ ಪ್ರಸಿದ್ಧರಾಗಿದ್ದಾರೆ. ತೋಂಟದಾರ್ಯ ಮಠದ ಲಿಂಗೈಕ್ಯ ಡಾ. ಸಿದ್ದಲಿಂಗ ಶ್ರೀಗಳ ಪರಮ ಶಿಷ್ಯರಾಗಿರುವ ಶಾಂತಲಿಂಗ ಶ್ರೀಗಳು ಕನ್ನಡದ ಕಂಪನ್ನು ನಾಡಿನಾದ್ಯಂತ ಪಸರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಸ್ವಾಭಿಮಾನ ಮತ್ತು ಬದುಕು ಎಂಬ ಸಂದೇಶವನ್ನು ಶ್ರೀಗಳು ಸಾರುತ್ತಿದ್ದಾರೆ. ಇದೇ ಆಶಯದೊಂದಿಗೆ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ಮಠದಲ್ಲಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಅದ್ಧೂರಿ ರಥೋತ್ಸವ ನಡೆಸಲಾಗುತ್ತದೆ. ಈ ಮೂಲಕ ಕನ್ನಡದ ಪ್ರೀತಿಯನ್ನು ಕೇವಲ ಮಠಕ್ಕೆ ಸೀಮಿತಗೊಳಿಸದೆ ಇಡೀ ಗ್ರಾಮದಲ್ಲಿ ಪಸರಿಸಲಾಗುತ್ತದೆ.

ಕನ್ನಡದ ಇತಿಹಾಸ ಸಾರಿದ ಭುವನೇಶ್ವರಿ ರಥ

ಈ ಬಾರಿಯ ರಥೋತ್ಸವದ ವಿಶೇಷವೆಂದರೆ ರಥದ ಅಲಂಕಾರ. ಕನ್ನಡ ನಾಡಿನ ಇತಿಹಾಸ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರು ಹಾಗೂ ಕನ್ನಡದ ಕೀರ್ತಿ ಹೆಚ್ಚಿಸಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳಿಂದ ರಥವನ್ನು ಸಿಂಗರಿಸಲಾಗಿತ್ತು. ಕೆಂಪು-ಹಳದಿ ಬಣ್ಣದ ಕನ್ನಡದ ಬಾವುಟಗಳು ಮತ್ತು ಬಣ್ಣಬಣ್ಣದ ಹೂವುಗಳಿಂದ ರಥ ಕಂಗೊಳಿಸುತ್ತಿತ್ತು. ರಥದ ಅಲಂಕಾರದಲ್ಲಿ ಕನ್ನಡದ ಇತಿಹಾಸವೇ ಅನಾವರಣಗೊಂಡಿತ್ತು.

Karnataka Rajyotsava: Grand Bhuvaneshwari Rathotsava at Bhairanahatti Math in Gadag

ಬದಾಮಿ ತಾಲೂಕಿನ ಕಿತ್ತಲಿ ಗ್ರಾಮದ ಸಿದ್ಧರಾಮೇಶ್ವರ ಮಠದ ಅಭಿನವ ಸಿದ್ಧರಾಮ ಸ್ವಾಮೀಜಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಸಕಲ ವಾದ್ಯವೈಭವಗಳೊಂದಿಗೆ ತಾಯಿ ಭುವನೇಶ್ವರಿಯ ರಥವು ಗ್ರಾಮದ ರಾಜಬೀದಿಗಳಲ್ಲಿ ಸಾಗಿತು. ನೂರಾರು ಕನ್ನಡಾಭಿಮಾನಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಕನ್ನಡದ ಜಯಘೋಷ ಮೊಳಗಿಸಿದರು.

ಭಕ್ತಿಭಾವದಿಂದ ಪಾಲ್ಗೊಂಡ ಮಹಿಳೆಯರು

ರಥೋತ್ಸವದಲ್ಲಿ ಮಹಿಳೆಯರ ಭಕ್ತಿಯೂ ವಿಶೇಷವಾಗಿ ಗಮನ ಸೆಳೆಯಿತು. ಭುವನೇಶ್ವರಿಯ ರಥ ಸಾಗುವ ರಸ್ತೆಯನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಮಹಿಳೆಯರು ತುಂಬಿದ ಬಿಂದಿಗೆಯಲ್ಲಿ ನೀರು ತಂದು ರಸ್ತೆಗೆ ಹಾಕಿದರು. ಬಳಿಕ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ಉಡಿ ತುಂಬಿ, ಹಣ್ಣು-ಕಾಯಿ ಸಮರ್ಪಿಸಿ ಆರತಿ ಬೆಳಗಿದರು. ಕುಟುಂಬ ಸಮೇತರಾಗಿ ರಥಕ್ಕೆ ನಮಸ್ಕರಿಸಿ ಭಕ್ತಿ ಸಮರ್ಪಿಸಿದರು. ತಾಯಿ ಭುವನೇಶ್ವರಿಯ ವಿಶೇಷ ವೇಷಭೂಷಣವೂ ಭಕ್ತರ ಗಮನ ಸೆಳೆಯಿತು.

ಇದನ್ನೂ ಓದಿ: ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!

ಒಟ್ಟಿನಲ್ಲಿ, ಕನ್ನಡದ ಮೇಲಿನ ಪ್ರೀತಿ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು, ವರ್ಷವಿಡೀ ಕನ್ನಡವನ್ನು ಆರಾಧಿಸಬೇಕು ಎಂಬ ಸಂದೇಶವನ್ನು ಭೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠ ಸಾರುತ್ತಿದೆ. ಕನ್ನಡವೇ ನಮ್ಮ ಅಸ್ಮಿತೆ, ಸಂಸ್ಕೃತಿ ಮತ್ತು ಬದುಕು ಎಂಬುದನ್ನು ಭುವನೇಶ್ವರಿ ರಥೋತ್ಸವದ ಮೂಲಕ ಮತ್ತೊಮ್ಮೆ ನೆನಪಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:26 am, Tue, 3 November 26

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More