
ಗದಗ, ಆಗಸ್ಟ್ 23: ಕಟ್ಟಡ ನಿರ್ಮಾಣ ಕಾಮಗಾರಿಗಳ ವೇಳೆ ಕೆಲಸಗಾರರ ಜೀವಕ್ಕೆ ಯಾವುದೇ ಅಪಾಯ ಆಗಬಾರದೆಂಬ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕಾನೂನು ಮಾಡಿದವರೇ ಈ ನಿಯಮಗಳನ್ನೀಗ ಗಾಳಿಗೆ ತೂರಿರುವ ಆರೋಪ ಗದಗದಲ್ಲಿ ಕೇಳಿಬಂದಿದೆ. ಗದಗ ತಾಲೂಕಿನ ಹರ್ತಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ಅಲ್ಪಸಂಖ್ಯಾತ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ಕಾಮಗಾರಿಯಲ್ಲಿ ನಿರತರಾಗಿರುವ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದೇ ಕೆಲಸ ಮಾಡುತ್ತಿದ್ದಾರೆ. 3–4 ಅಂತಸ್ತು ಎತ್ತರವಿರುವ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ನಿರತರಾಗಿರುವ ಇವರಿಗೆ ಕನಿಷ್ಠ ಹೆಲ್ಮೆಟ್, ಸೇಫ್ಟಿ ಬೆಲ್ಟ್ಗಳನ್ನೂ ನೀಡದಿರುವುದು ಕಂಡುಬಂದಿದೆ.
ಒಂದು ಸಣ್ಣ ಎಡವಟ್ಟು ನಡೆದರೂ ಸಾಕು ಜೀವಕ್ಕೆ ಅಪಾಯ ಎದುರಾಗುವ ಸನ್ನಿವೇಶ ಸ್ಥಳದಲ್ಲಿ ಕಂಡುಬಂದಿದ್ದು, ಕಾರ್ಮಿಕರ ಪ್ರಾಣಕ್ಕೆ ಅಪಾಯ ಆದ್ರೆ ಹೊಣೆ ಕಾಮಗಾರಿಯ ಗುತ್ತಿಗೆದಾರರೇ? ಸಂಬಂಧಪಟ್ಟ ಇಂಜಿನಿಯರ್‌ಗಳೇ? ಅಥವಾ ಕಾಮಗಾರಿಯ ಮೇಲ್ವಿಚಾರಣೆ ಮಾಡಬೇಕಾದ ಅಧಿಕಾರಿಗಳೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ. ಕಟ್ಟಡ ಕಾಮಗಾರಿಯ ಗುಣಮಟ್ಟದ ಜೊತೆಗೆ ಕಾರ್ಮಿಕರ ಸುರಕ್ಷತೆಯೂ ಅತ್ಯಂತ ಮುಖ್ಯ. ಇಲ್ಲಿ ನಡೆಯುತ್ತಿರುವುದು ಸರ್ಕಾರಿ ಹಣದಲ್ಲಿನ ಕಟ್ಟಡ ಕಾಮಗಾರಿ. ಹೀಗಿದ್ದರೂ ಕಾರ್ಮಿಕರ ಸುರಕ್ಷತೆ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ: ಪೊಲೀಸ್ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು; 7 ಜನರ ಬಂಧನ
ಇನ್ನು ಈ ಕಟ್ಟಡದ ಕಾಮಗಾರಿ ನಡೆಸುತ್ತಿರುವುದು ಬೆಂಗಳೂರು ಮೂಲದ ಕಂಪನಿಯಾಗಿದ್ದು, ಗುತ್ತಿಗೆದಾರರ ಜೊತೆ ಶಾಮೀಲಾಗಿ ಅಧಿಕಾರಿಗಳೂ ಈ ಬಗ್ಗೆ ಗಪ್ಚುಪ್ ಆಗಿದ್ದಾರೆ ಎಂದು ದೂರಲಾಗಿದೆ. ಗದಗ ಜಿಲ್ಲಾಡಳಿತ ಕಚೇರಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಮಾತ್ರ ಎಲ್ಲವನ್ನು ಕಂಡೂ ಕಾಣದಂತಿದೆ. ಅಧಿಕಾರಿಗಳು ಕನಿಷ್ಠ ಸ್ಥಳ ಪರಿಶೀಲನೆಯನ್ನಾದರೂ ನಡೆಸಿದ್ದಾರಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮೊದಲು ರಕ್ಷಣೆ ಕೊಡಿ. ಆಮೇಲೆ ಕಟ್ಟಡ ಕಟ್ಟಿಸಿ ಎಂದು ಕಿಡಿ ಕಾರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:01 am, Sun, 23 August 26