ಗದಗ ತಾಲೂಕಿನ ಮಲ್ಲಸಮುದ್ರದಲ್ಲಿ ಚಾಕು ಇರಿತ ಪ್ರಕರಣ: ಪ್ರಮೋದ್ ಮುತಾಲಿಕ್ಗೆ ನಿರ್ಬಂಧ ಹೇರಿದ ಜಿಲ್ಲಾಡಳಿತ
ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಆಗಸ್ಟ್ 12ರ ಬೆಳಗ್ಗೆ 7 ಗಂಟೆಯಿಂದ ಆಗಸ್ಟ್ 14 ಮಧ್ಯರಾತ್ರಿವರಗೆ ಮುತಾಲಿಕ್ರನ್ನು ಗದಗ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಗದಗ: ಮಲ್ಲಸಮುದ್ರ ಗ್ರಾಮದಲ್ಲಿ ಇಬ್ಬರ ಮೇಲೆ ಚೂರಿ (knife) ಇರಿತ ಪ್ರಕರಣ ಸಂಬಂಧ ಇಂದು ಗದಗ ನಗರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ಹಿನ್ನೆಲೆ ಗದಗ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ಪ್ರಮೋದ್ ಮುತಾಲಿಕ್ಗೆ ನಿರ್ಬಂಧ ಹೇರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಆಗಸ್ಟ್ 12ರ ಬೆಳಗ್ಗೆ 7 ಗಂಟೆಯಿಂದ ಆಗಸ್ಟ್ 14 ಮಧ್ಯರಾತ್ರಿವರಗೆ ಮುತಾಲಿಕ್ರನ್ನು ಗದಗ ಜಿಲ್ಲೆ ಪ್ರವೇಶಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ವೈಶ್ಯಾಲಿ ಆದೇಶ ಹೊರಡಿಸಿದ್ದಾರೆ. ಇನ್ನೂ ಚೂರಿ ಇರಿತ ಪ್ರಕರಣದಲ್ಲಿ ಶ್ರೀರಾಮಸೇನೆ ಕಾರ್ಯಕರ್ತ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದು, ಪ್ರಮುಖ ಆರೋಪಿ ಶ್ರೀರಾಮಸೇನೆ ಕಾರ್ಯಕರ್ತ ಸೋಮು ಗುಡಿನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಆರೋಪಿ ಸೋಮು ಗುಡಿ ಭೇಟಿಗೆ ಗದಗ ಜಿಲ್ಲೆಗೆ ಮುತಾಲಿಕ್ ಆಗಮಿಸುತ್ತಿದ್ದರು. ಮುತಾಲಿಕ್ ಜಿಲ್ಲೆ ಪ್ರವೇಶದಿಂದ ಕಾನೂನು ಸುವ್ಯವಸ್ಥೆ, ಶಾಂತಿ ಭಂಗ ಹಿನ್ನೆಲೆಯಲ್ಲಿ ಕಲಂ 133, 143 ಮತ್ತು 144 ಅನ್ವಯ ನಿಷೇಧ ಆದೇಶ ಹೊರಡಿಸಲಾಗಿದೆ. ಆದೇಶ ಪಾಲನೆಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಉಲ್ಲಂಘನೆ ಆದರೆ ಸಂಬಂಧಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಪ್ರಕರಣ ಏನು?
ಮೊಹರಂ (Moharam) ಹಬ್ಬ ಆಚರಣೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ (Gadag) ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ (ಆಗಸ್ಟ್ 09) ರಂದು ನಡೆದಿದೆ. ದಾದಾಪೀರ್ ಹೊಸಮನಿ 23, ಮುಸ್ತಾಕ್ ಹೊಸಮನಿ 24 ಎಂಬುವರಿಗೆ ಚಾಕೂ ಇರಿಯಲಾಗಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಇನ್ನೊಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೋಹರಂ ಹಬ್ಬ ಆಚರಣೆ ವೇಳೆ ಕಾಲು ತುಳಿದಿದ್ದಕ್ಕೆ ಗುಂಪಿನಿಂದ ಚಾಕೂ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ. ಆರ್ಎಸ್ಎಸ್ (RSS) ಕಾರ್ಯಕರ್ತ ಸೋಮು ಗುಡಿ ಎಂಬಾತ ಸೇರಿ ಹಲವರಿಂದ ಚಾಕೂ ಇರಿಯಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು.
ಎಸ್ಪಿ ದೇವರಾಜು, ಡಿವೈಎಸ್ಪಿ ಶಿವಾನಂದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳು ದಾದಾಪೀರ್ನನ್ನು ವೈದ್ಯರು ಶಸ್ತ್ರಚಿಕಿತ್ಸೆಗೆ ಕರೆದ್ಯೊಯ್ದಿದ್ದರು. ಪ್ರಕರಣ ಸಂಬಂಧ ಸೋಮು, ಯಲ್ಲಪ್ಪ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಮಲ್ಲಸಮುದ್ರ ಗ್ರಾಮದಲ್ಲಿ ಗದಗ ಎಸ್ಪಿ ಶಿವಪ್ರಕಾಶ್ ಹೇಳಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನ ಉಳಿಸಿಕೊಳ್ಳಲು ಪ್ರಯತ್ನ ವೈದ್ಯರು ನಡೆಸಿದ್ದಾರೆ. ಮಲ್ಲಸಮುದ್ರ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಟೈಟ್ ಸೆಕ್ಯೂರಿಟಿ ಮಾಡಲಾಗಿದೆ. ಎರಡು ಡಿಆರ್ ತುಕಡಿ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:39 am, Fri, 12 August 22