ಗದಗ ಜಿಲ್ಲೆಯಲ್ಲಿ ಅನಧಿಕೃತ ಟೋಲ್ ಪ್ಲಾಜಾ: ಪರಿಶೀಲನೆಗೆ ಡಿಸಿಗೆ ಪತ್ರ ಬರೆದ ಸಚಿವ ಎಚ್ಕೆ ಪಾಟೀಲ್
ಗದಗ ಜಿಲ್ಲೆಯಲ್ಲಿ ಅಕ್ರಮ ಟೋಲ್ ಪ್ಲಾಜ್ ನಿರ್ಮಾಣ ಮಾಡಲಾಗಿದೆ. ವಾಹನ ಸವಾರರಿಂದ ಪ್ರತಿನಿತ್ಯ ಲಕ್ಷಗಟ್ಟಲೆ ರೂಪಾಯಿ ಹಣ ಲೂಟಿ ಮಾಡಲಾಗುತ್ತಿದೆ. ಕಾನೂನುಗಳನ್ನು ಗಾಳಿಗೆ ತೂರಿ ಹಗಲು ದರೋಡೆ ಮಾಡಲಾಗುತ್ತಿದೆ. ಹೀಗಾಗಿ ಅನಧಿಕೃತ ಟೋಲ್ ತೆರವು ಮಾಡಲು, ವಾಹನ ಸವಾರರು ಒತ್ತಾಯ ಮಾಡುತ್ತಿದ್ದಾರೆ. ಕಾನೂನು ಸಚಿವರು ಕೂಡ ಪರಿಶೀಲನೆ ಮಾಡಿ ಕ್ರಮ ಮಾಡಿ ಅಂತ ಡಿಸಿಗೆ ಪತ್ರ ಬರೆದಿದ್ದಾರೆ.
ಗದಗ, ಸೆಪ್ಟೆಂಬರ್ 11: ಗದಗ ಜಿಲ್ಲೆಯಲ್ಲಿ ಅನಧಿಕೃತ ಟೋಲ್ ಪ್ಲಾಜಾ ಮೂಲಕ ವಾಹನ ಸವಾರರಿಂದ ಹಗಲು ದರೋಡೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ನಿತ್ಯ ಲಕ್ಷ ಲಕ್ಷ ರೂಪಾಯಿ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಗದಗ ತಾಲೂಕಿನ ಪಾಪನಾಶಿ ಗ್ರಾಮದ ಬಳಿಯ ಟೋಲ್ ಪ್ಲಾಜಾ ಅನಧಿಕೃತ ಎಂದು ವಾಹನ ಸವಾರರು ಆರೋಪ ಮಾಡಿದ್ದಾದೆ.
ಟೋಲ್ ಪ್ಲಾಜಾ ವಿರುದ್ಧ ಸಾರ್ವಜನಿಕರು ಸಾಕಷ್ಟು ಬಾರಿ ಹೋರಾಟ ಮಾಡಿದ್ದಾರೆ. ಗದಗ ಜಿಲ್ಲೆಯಲ್ಲಿ ಹಾದುಹೋಗುವ ಅರಭಾವಿ ಹಾಗೂ ಚಳ್ಳಿಕೇರಿ ರಾಜ್ಯ ಹೆದ್ದಾರಿಯಲ್ಲಿ ಅನಧಿಕೃತ ಟೋಲ್ ಪ್ಲಾಜಾ ಕಾರ್ಯ ನಿರ್ವಹಿಸುತ್ತಿದೆ. 40 ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಪ್ಲಾಜಾಗಳು ಇವೆ. ಒಂದು ಪಾಪನಾಶಿ ಟೋಲ್ ಪ್ಲಾಜಾ, ಇನ್ನೊಂದು ಕೊರ್ಲಹಳ್ಳಿ ಟೋಲ್ ಪ್ಲಾಜಾ.
40 ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಗೇಟ್ ಇರಬಾರದು ಎಂದು ನಿಯಮ ಇದೆ. ಆ ನಿಯಮಗಳನ್ನು ಉಲ್ಲಂಘನೆ ಮಾಡಿ, ಪಾಪನಾಶಿ ಬಳಿ ಅಕ್ರಮ ಟೋಲ್ ಪ್ಲಾಜಾ ನಿರ್ಮಾಣ ಮಾಡಿ ಹಣ ವಸೂಲಿ ಮಾಡುವ ಕೆಲಸ ನಡೆಯುತ್ತಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಪನಾಶಿ ಟೋಲ್ ಪ್ಲಾಜಾ ನಿಯಮದ ಪ್ರಕಾರ ಧಾರವಾಡ ಜಿಲ್ಲೆ ಶೆಲವಡಿ ಗ್ರಾಮದ ಬಳಿ ಅಳವಡಿಕೆ ಮಾಡಬೇಕು, ಅದನ್ನು ಬಿಟ್ಟು ಪಾಪನಾಶಿ ಗ್ರಾಮದ ಬಳಿ ಟೋಲ್ ಪ್ಲಾಜಾ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಇದರಿಂದ ವಾಹನ ಸವಾರರಿಗೆ ಬಹಳ ಹೊರೆ ಆಗುತ್ತದೆ.
ಕೂಡಲೇ ಪಾಪನಾಶಿ ಟೋಲ್ ಗೇಟ್ ತೆರವು ಮಾಡಬೇಕು ಎಂದು ಅಕ್ಕಪಕ್ಕದ ಗ್ರಾಮಸ್ಥರು, ವಾಹನ ಚಾಲಕರು ಮಾಲೀಕರು ಒತ್ತಾಯಿಸಿದ್ದಾರೆ.
ಲಾರಿ ಮಾಲೀಕರ ಸಂಘದಿಂದ ಹೋರಾಟ
ಪಾಪನಾಶಿ ಟೋಲ್ ಗೇಟ್ ಅನಧಿಕೃತ ಎಂದು ಲಾರಿ ಮಾಲೀಕರ ಸಂಘ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಸದ್ಯ ‘ಎಪಿಜೆ ಅಬ್ದುಲ್ ಕಲಾಂ ಲಾರಿ ಚಾಲಕರ ಹಾಗೂ ಮಾಲೀಕರ ಸಂಘ’ದಿಂದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ಕೆ ಪಾಟೀಲ್ ಅವರಿಗೆ ಮನವಿ ಮಾಡಲಾಗಿದೆ.
ಡಿಸಿಗೆ ಪತ್ರ ಬರೆದ ಸಚಿವ ಎಚ್ಕೆ ಪಾಟೀಲ್
ಪಾಪನಾಶಿ ಟೋಲ್ ಗೇಟ್ ಅನಧಿಕೃತ ಎಂಬ ಆರೋಪಗಳು ಕೇಳಿಬಂದಿದೆ. ಆ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಸದ್ಯ ಸಚಿವ ಎಚ್ಕೆ ಪಾಟೀಲ್ ಗದಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಮಾಡಿ ಕೂಡಲೇ ಕ್ರಮ ಕೈಗೊಳ್ಳವುದಾಗಿ ಗದಗ ಡಿಸಿ ಗೋವಿಂದರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಗದಗ: ಪುಟಾಣಿಯ ಹಠಕ್ಕೆ ಮನಸೋತು ಮುಸ್ಲಿಂ ವ್ಯಕ್ತಿ ಮನೆಯಲ್ಲಿ ಗಣೇಶ ಪ್ರತಿಷ್ಠಾಪನೆ
ಕಾನೂನು ಉಲ್ಲಂಘನೆ ಮಾಡಿ, ಹಗಲು ದರೋಡೆ ಮಾಡಲಾಗುತ್ತಿದೆ. ಅನಧಿಕೃತ ಟೋಲ್ ಗೇಟ್ ಮೂಲಕ ವಾಹನ ಸವಾರರಿಂದ ಹಣ ಸುಲಿಗೆ ಮಾಡಲಾಗುತ್ತಿದೆ. ಇದರಿಂದ ಗದಗ ಹಾಗೂ ಮುಂಡರಗಿ ಬಸ್ ದರ ಕೂಡಾ ಹೆಚ್ಚಾಗಿದೆ. ಬಡ ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇನಾದ್ರು ಜಿಲ್ಲಾಧಿಕಾರಿಗಳು ಸೂಕ್ತವಾದ ಕ್ರಮ ಕೈಗೊಂಡು, ಅನಧಿಕೃತ ಟೋಲ್ ಗೇಟ್ ತೆರವು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ