ಕಲಬುರಗಿ: ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿ ಶಿವಶಂಕರ ಪಾಟೀಲ್ ಎಂಬವರ ಚಿನ್ನ ದರೋಡೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ಕೊವಿಡ್ ಸಂದರ್ಭದಲ್ಲಿ ಚಿನ್ನ ಹಾಕಿಕೊಂಡು ಓಡಾಡಬಾರದು ಎಂದು ಶಿವಶಂಕರ ಪಾಟೀಲ್ರನ್ನು ಬೆದರಿಸಿದ್ದ ನಕಲಿ ಪೊಲೀಸರು 70 ಗ್ರಾಂ ಚಿನ್ನವನ್ನು ದರೋಡೆ ಮಾಡಿದ್ದಾರೆ.
ತಮ್ಮವರೇ ಒಬ್ಬನನ್ನು ಕರೆದ ನಕಲಿ ಪೊಲೀಸರು, ಆತನ ಕಪಾಳಕ್ಕೆಹೊಡೆದು ಚಿನ್ನಾಭರಣ ಒಳಗೆ ಇಡುವಂತೆ ಸೂಚಿಸಿದ್ದರು. ಕಪಾಳಕ್ಕೆ ಹೊಡೆಸಿಕೊಂಡ ವ್ಯಕ್ತಿ ಕರವಸ್ತ್ರದಲ್ಲಿ ಚಿನ್ನ ಹಾಕಿದ್ದ. ಮೈಮೇಲಿದ್ದ ಆಭರಣ ತೆಗೆದು ಕರವಸ್ತ್ರದಲ್ಲಿ ಹಾಕಿಕೊಂಡಿದ್ದ. ನಂತರ ನಕಲಿ ಪೊಲೀಸರು, ಶಿವಶಂಕರ ಧರಿಸಿದ್ದ ಚಿನ್ನ ತೆಗೆಯುವಂತೆ ಸೂಚನೆ ನೀಡಿದ್ದರು. ಚಿನ್ನಾಭರಣ ಒಳಗೆ ಇಟ್ಟುಕೊಳ್ಳುವಂತೆ ಸೂಚನೆ ನೀಡಿದ್ದರು. ಚೈನು, ಉಂಗುರ ತೆಗೆದು ಕರ್ಚೀಫ್ನಲ್ಲಿ ಹಾಕುವಂತೆ ಧಮ್ಕಿ ಹಾಕಿದ್ದರು. ಉದ್ಯಮಿ ಕರ್ಚೀಫ್ನಲ್ಲಿ ಚಿನ್ನಾಭರಣ ಹಾಕುತ್ತಿದ್ದಂತೆ, ನಕಲಿ ಪೊಲೀಸರ ಜತೆ ಕಪಾಳಕ್ಕೆ ಹೊಡೆಸಿಕೊಂಡ ವ್ಯಕ್ತಿ ಚಿನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಾಡಹಗಲೇ ಈ ಕೃತ್ಯ ನಡೆದಿದ್ದು, ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬಾಣಂತಿ ಡಿಸ್ಚಾರ್ಜ್‌ಗೆ ಲಂಚಕ್ಕೆ ಬೇಡಿಕೆ; ಆರೋಪಿ ಡಾ.ವೀರೇಂದ್ರ ಕುಚಬಾಳ ಎಸಿಬಿ ಬಲೆಗೆ
ಬೆಳಗಾವಿಯಲ್ಲಿ ಸಿಜೇರಿಯನ್ ಆಗಿದ್ದ ಬಾಣಂತಿ ಡಿಸ್ಚಾರ್ಜ್‌ಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯ ವೀರೇಂದ್ರ ಕುಚಬಾಳ ಎಂಬವರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಸರ್ಕಾರಿ ಆಸ್ಪತ್ರೆಯ ವೈದ್ಯ ವೀರೇಂದ್ರ ಕುಚಬಾಳ ಗರ್ಭಿಣಿ ಡಿಸ್ಚಾರ್ಜ್‌ಗೆ ಲಂಚ ಕೇಳಿದ್ದಾರೆ. ಇಂದು (ಏಪ್ರಿಲ್ 3) 7 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಆರೋಪಿ ಡಾ.ವೀರೇಂದ್ರ ಕುಚಬಾಳ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಗರ್ಭಿಣಿ ಯುವತಿ, ಕಿತ್ತೂರು ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಯಶೋಧಾ ಕೋಲಕಾರ ಎಂಬವರು ಮಾರ್ಚ್ 30ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸಿಜೇರಿಯನ್ ಮೂಲಕ ಯಶೋಧಾಗೆ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಡಿಸ್ಚಾರ್ಜ್ ಮಾಡಲು, ಸರ್ಕಾರಿ ವೈದ್ಯ 7 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಹಿಳೆಯ ಪತಿ ಯಲ್ಲಪ್ಪ, ಎಸಿಬಿಗೆ ದೂರು ನೀಡಿದ್ದರು. ಲಂಚ ಸ್ವೀಕಾರ ವೇಳೆ ಆರೋಪಿ ಸಿಕ್ಕಿಬಿದ್ದಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆ
ಬೆಂಗಳೂರಲ್ಲಿ ಅನುಮಾನಾಸ್ಪದವಾಗಿ ಯುವಕನ ಶವ ಪತ್ತೆಯಾಗಿದೆ. ಮೈಸೂರು ರಸ್ತೆಯ ಹೊಸ ಗುಡ್ಡದಹಳ್ಳಿಯ ಪ್ರಿಯಾಂಕಾ ಗಾರ್ಡನ್ ಬಾರ್ ಬಳಿ ಶವ ಪತ್ತೆಯಾಗಿದೆ. ಆರ್.ಆರ್. ನಗರದ ನವೀನ್ (30) ಅಪಘಾತದಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೈಸೂರು ರಸ್ತೆಯಲ್ಲಿ ಮೃತ ಯುವಕನ ಬೈಕ್ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿಗಳು ಪ್ರಿಯಾಂಕ ಗಾರ್ಡನ್ ಬಾರ್ ಬಳಿ ಶವ ತಂದು ಇರಿಸಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವಪತ್ತೆ
ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಮಂಡ್ಯ ಮೂಲದ ಶಿವು (20) ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ 1 ತಿಂಗಳಿನಿಂದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಶಿವು, ಹೋಟೆಲ್ನ ರೂಮ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹಲವೆಡೆ ದರೋಡೆ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಡಕಾಯಿತರ ತಂಡದ 9 ಮಂದಿ ಮಂಗಳೂರಿನಲ್ಲಿ ಬಲೆಗೆ
ಇದನ್ನೂ ಓದಿ: ಪ್ರಿಯತಮನೇ ದರೋಡೆ ಮಾಡಿದ್ದ, ತಿಳಿಯದೆ ಗರ್ಲ್ಫ್ರೆಂಡೇ ದೂರು ನೀಡಿದ್ದಳು!
Published On - 8:05 pm, Sat, 3 April 21