ಕೋಲಾರ, ಸೆಪ್ಟೆಂಬರ್ 1: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ಕಪ್ಪು ಪಟ್ಟೆ ಪ್ರದರ್ಶನ ಮಾಡುವುದಾಗಿ ಅಹಿಂದ ಒಕ್ಕೂಟದ ನಾಯಕರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ನಾಳೆಯ ಕೋಲಾರ ಪ್ರವಾಸ ರದ್ದು ಮಾಡಲಾಗಿದೆ. ಈ ಬಗ್ಗೆ ಟಿವಿ9ಗೆ ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಮಾಹಿತಿ ನೀಡಲಾಗಿದೆ. ನಾಳೆ ಕೋಲಾರದಲ್ಲಿ ನಡೆಯಲಿರುವ ಬೆಂಗಳೂರು ಉತ್ತರ ವಿವಿ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಪ್ರವಾಸ ರದ್ದು ಮಾಡಿದ್ದಾರೆ.
ಕೋಲಾರದ ಪತ್ರಕರ್ತರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಹಿಂದ ಒಕ್ಕೂಟದ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಯಾವುದೇ ರೀತಿಯ ಹಗರಣವಾಗಲಿ, ಕಪ್ಪುಚುಕ್ಕೆಯಾಗಲಿ ಇಲ್ಲ. ಆದರೆ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಮೂಡಾ ಹಗರಣದಲ್ಲಿ ಸಿಲುಕಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಖಂಡನೀಯ. ನಾಳೆ ಕೋಲಾರದ ಹೊರವಲಯದ ನಂದಿನಿ ಪ್ಯಾಲೇಸ್ನಲ್ಲಿ ನಡೆಯಲಿರುವ ಬೆಂಗಳೂರು ವಿವಿಯ 4ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲರು ಆಗಮಿಸುತ್ತಿದ್ದು, ಇದಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಸೇರಿದಂತೆ ಇತರೆ ಯಾರದೇ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇಲ್ಲ: ರಾಜಭವನ ಸ್ಪಷ್ಟನೆ
ಇನ್ನು ರಾಜ್ಯದಲ್ಲಿ ಹಲವು ಮಾಜಿ ಸಚಿವರ ಮೇಲೆ ಹಗರಣಗಳಿದ್ದು, ಇವು ರಾಜ್ಯಪಾಲರ ಬಳಿಯಿದ್ದರೂ ಇವುಗಳನ್ನು ಬಿಟ್ಟು ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಡಾ ಹರಗಣದಲ್ಲಿ ಸಿಲುಕಿಸಿ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಅಹಿಂದ ನಾಯಕ ಸಿದ್ದರಾಮಯ್ಯನವರ ಸರ್ಕಾರ ಉರುಳಿಸಲು ರಾಜ್ಯಪಾಲರು ಯತ್ನ ಮಾಡುತ್ತಿದ್ದು ಬಿಜೆಪಿಯ ಏಜೆಂಟರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಸಿದ್ದರಾಮಯ್ಯ ಯಾವುದೇ ದೂರು ಇಲ್ಲದೆ ಇದ್ದರೂ ಅವರ ವಿರುದ್ದ ಪ್ರಾಸಿಕ್ಯೂಷನ್ಗೆ ಕೊಟ್ಟಿದ್ದಾರೆ. ಹೀಗಾಗಿ ರಾಜ್ಯಪಾಲರ ನಡೆಯನ್ನು ಖಂಡಿಸಿ ನಾಳೆ ಕೋಲಾರಕ್ಕೆ ಆಗಮಿಸುತ್ತಿರುವ ರಾಜ್ಯಾಪಾಲರಿಗೆ ಅಹಿಂದ ವರ್ಗದ ಕಾರ್ಯಕರ್ತರ ಕಪ್ಪು ಪಟ್ಟಿ ಪ್ರದರ್ಶನ ಮಾಡಲಿದ್ದಾರೆ. ಕಪ್ಪುಪಟ್ಟಿ ಪ್ರದರ್ಶನ ಕಾರ್ಯಕ್ರಮಕ್ಕೆ ಜಿಲ್ಲೆಯ ಅಹಿಂದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಮುಡಾಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ: ಬಿಜೆಪಿ ಅವಧಿಯ ಹಗರಣಗಳ ತನಿಖಾ ವರದಿ ಪಡೆಯುತ್ತಿರುವ ಕಾಂಗ್ರೆಸ್
ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಅಂಜಲಿ ಸೋಮಣ್ಣ, ಪ್ರಸಾದ್ ಬಾಬು, ಮಂಜುನಾಥ್ ಮತ್ತಿತರರು ಭಾಗಿ ಆಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.