ಕುಮಾರಸ್ವಾಮಿ ಸೇರಿದಂತೆ ಇತರೆ ಯಾರದೇ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇಲ್ಲ: ರಾಜಭವನ ಸ್ಪಷ್ಟನೆ
ಮುಡಾ ಪ್ರಕರಣದ ಕಾನೂನು ಸಂಘರ್ಷ ಹಾಗೂ ರಾಜಕೀಯ ಸಂಘರ್ಷ ಬೇರೆಯದೇ ದಿಕ್ಕಿಗೆ ಹೊರಳುತ್ತಿದೆ. ಒಂದೆಡೆ ಕೋರ್ಟ್ನಲ್ಲಿ ಪ್ರಾಸಿಕ್ಯೂಷನ್ ವಿರುದ್ಧದ ವಿಚಾರಣೆ ನಡೆದಿದೆ. ಇದರ ಮಧ್ಯ ಕಾಂಗ್ರೆಸ್ ಸರ್ಕಾರ, ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ಗೆ ಲೋಕಾಯುಕ್ತ ಎಸ್ಐಟಿ ಮನವಿಯನ್ನು ಪುರಸ್ಕರಿಸಬೇಕೆಂದು ರಾಜ್ಯಪಾಲರನ್ನು ಒತ್ತಾಯಿಸುತ್ತಿದೆ. ಆದ್ರೆ, ಇದೀಗ ರಾಜಭವನ, ಕುಮಾರಸ್ವಾಮಿ ಸೇರಿದಂತೆ ಇತರೆ ಯಾರದೇ ಪ್ರಾಸಿಕ್ಯೂಷನ್ ಅರ್ಜಿ ಬಾಕಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.
ಬೆಂಗಳೂರು, (ಸೆಪ್ಟೆಂಬರ್ .01): ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಶಾಸಕ ಜನಾರ್ಧನ ರೆಡ್ಡಿ ಅವರ ವಿರುದ್ಧ ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ಕಡತ ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಇಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬಿಜೆಪಿ, ಜೆಡಿಎಸ್ ನಾಯಕರ ಮೇಲಿನ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸಚಿವರು, ಕಾಂಗ್ರೆಸ್ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ನಡೆಸಿದರು. ಇದರ ಬೆನ್ನಲ್ಲೇ ರಾಜಭವನವು, ಪ್ರಾಸಿಕ್ಯೂಷನ್ ಕಡತಗಳು ನಮ್ಮ ಕಚೇರಿಯಲ್ಲಿ ಬಾಕಿ ಇಲ್ಲ ಎಂದು ಮಾಹಿತಿ ನೀಡಿದೆ. ಹೀಗಾಗಿ ಇದೀಗ ಕಾಂಗ್ರೆಸ್ ಸುಳ್ಳು ಹೇಳಿತ್ತೇ? ಅಥವಾ ರಾಜ್ಯಭವನವೇ ಸುಳ್ಳು ಮಾಹಿತಿ ನೀಡಿದ್ಯಾ? ಎನ್ನು ಪ್ರಶ್ನೆಗಳು ಉದ್ಭವಿಸಿವೆ.
ಮಾಹಿತಿ ಹಕ್ಕಿಗೆ ಉತ್ತರಿಸಿರುವ ರಾಜ್ಯಭವನ
ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಟಿ.ಜೆ ಅಬ್ರಾಹಂ ಅವರು, ವಿವಿಧ ಸಕ್ಷಮ ಪ್ರಾಧಿಕಾರಗಳು ವಿಚಾರಣೆಗೆ ಅನುಮತಿ ಕೋರಿರುವ ಪ್ರಸ್ತಾವಣೆಗಳ ಬಾಕಿ ಇರು ಕುರಿತಂತೆ ರಾಜ್ಯಪಾಲರ ಕಚೇರಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರು. ಅಬ್ರಾಹಂ ಸಲ್ಲಿಸಿದ್ದ ಈ ಮಾಹಿತಿ ಹಕ್ಕು ಅರ್ಜಿಗೆ ರಾಜ್ಯಭವನ ಕೇವಲ 9 ದಿನಗಳಲ್ಲೇ ಉತ್ತರಿಸಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ವಿರುದ್ಧ ವಿಚಾರಣೆಗೆ ಅನುಮತಿ ಕೋರಿರುವ ಯಾವ ಕಡತವೂ ಸಹ ರಾಜ್ಯಪಾಲರ ಕಚೇರಿಯಲ್ಲಿ ಇಲ್ಲ ಎಂದು ಮಾಹಿತಿ ಒದಗಿಸಿದೆ.
ಇದನ್ನೂ ಓದಿ: ಕುಮಾರಸ್ವಾಮಿಗೂ ಶುರುವಾಗತ್ತಾ ಪ್ರಾಸಿಕ್ಯೂಷನ್ ಸಂಕಷ್ಟ? ಯಾವ ಕೇಸ್? ಇಲ್ಲಿದೆ ವಿವರ
ಕೋರ್ಟ್ಗೂ ಮಾಹಿತಿ ನೀಡಿದ ವಕೀಲ
ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳು ತಮ್ಮ ಬಳಿ ಬಾಕಿ ಇಲ್ಲ ಎಂದು ರಾಜಭವನ ಅಧಿಕೃತ ದಾಖಲೆಯನ್ನು ನ್ಯಾಯಾಲಯಕ್ಕೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠಕ್ಕೆ ಟಿ.ಜೆ.ಅಬ್ರಾಹಂ ಪರ ವಕೀಲ ರಂಗನಾಥ್ ರೆಡ್ಡಿ ಈ ದಾಖಲೆ ಸಲ್ಲಿಸಿದರು. ರಾಜ್ಯಪಾಲರು ಕೇಂದ್ರ ಸಚಿವರು ಸೇರಿದಂತೆ ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಕೋರಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇವೆ ಎಂದು ಆರೋಪಿಸಲಾಗುತ್ತಿದೆ. ಆದರೆ ಯಾವುದೇ ಅರ್ಜಿಗಳು ಬಾಕಿ ಇಲ್ಲ ಎನ್ನುವ ಮಾಹಿತಿಯನ್ನು ರಾಜಭವನ ನೀಡಿದೆ.
ರಾಜ್ಯಭವನದಲ್ಲಿ ಪ್ರಾಸಿಕ್ಯೂಷನ್ ಕೋರಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇಲ್ಲವೆಂದು ವಕೀಲ ರಂಗನಾಥ್ ರೆಡ್ಡಿ ಕೋರ್ಟ್ಗೆ ತಿಳಿಸಿದ್ದಾರೆ. ಇದಕ್ಕೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನಿಮಗೆ ಈ ವಿಷಯ ಹೇಗೆ ಗೊತ್ತು ಎಂದು ಪ್ರಶ್ನಿಸಿದಾಗ, ರಂಗನಾಥ್ ರೆಡ್ಡಿ ಅವರು ಈ ಸಂಬಂಧ ಆರ್‌ಟಿಐ ಮೂಲಕ ಮಾಹಿತಿ ಪಡೆಯಲಾಗಿದೆ. ರಾಜಭವನ ಕಚೇರಿ ನೀಡಿರುವ ಉತ್ತರದಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಿ, ಅಧಿಕೃತ ದಾಖಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ.
ಪರಿಶೀಲಿಸುತ್ತೇವೆ ಎಂದ ಡಿಕೆ ಶಿವಕುಮಾರ್
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೂವರು ಮಾಜಿ ಸಚಿವರ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ಕೋರಿ ಅನುಮತಿ ಸಲ್ಲಿಸಿರುವ ಅರ್ಜಿಗಳು ತಮ್ಮ ಬಳಿ ಬಾಕಿ ಇಲ್ಲ ಎಂದು ರಾಜ್ಯಪಾಲರು ಹೇಳಿರುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಆದರೆ ರಾಜ್ಯಪಾಲರು ನನ್ನ ಬಳಿ ಯಾವ ಅರ್ಜಿಯೂ ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರು ಹೇಳಿರುವುದು ಸತ್ಯವೋ ಅಥವಾ ಸುಳ್ಳೋ ಗೊತ್ತಿಲ್ಲ. ಯಾಕೆ ಹೀಗೆ ಹೇಳಿದ್ದಾರೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಒಂದಷ್ಟು ವಿಚಾರದಲ್ಲಿ ಅವರು ಸ್ಪಷ್ಟನೆ ಕೇಳಿರಬಹುದು. ಇದನ್ನು ಸಹ ನಾವು ಪರಿಶೀಲಿಸುತ್ತೇವೆ ಎಂದು ಹೇಳಿದರು. ಅರ್ಜಿಗಳು ಇತ್ಯರ್ಥ ಆಗಿವೆ ರಾಜ್ಯಪಾಲರು ತಿಳಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಳಗಿನ ವಿಚಾರವನ್ನು ನಿಮ್ಮ ಬಳಿ ಚರ್ಚಿಸುವುದಿಲ್ಲ. ಅವರು ನನ್ನ ಬಳಿ ಯಾವುದೇ ಅರ್ಜಿ ಇಲ್ಲ ಎಂದು ಹೇಳಿದ್ದಾರೆ. ಅದನ್ನು ನಾವು ಪರಿಶೀಲಿಸುತ್ತೇವೆ ಎಂದು ತಿಳಿಸಿದರು.
ಇದರಲ್ಲಿ ಸುಳ್ಳು ಹೇಳುತ್ತಿರುವವರು ಯಾರು?
ಹಾಗಾದ್ರೆ, ಇದೀಗ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕ್ಯಾಬಿನೆಟ್ ಸಚಿವರು, ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ವಿರುದ್ಧ ಸುಳ್ಳು ಆರೋಪ ಮಾಡಿದರೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ಗೆ ಅನುಮತಿಗೆ ಮನವಿ ಮಾಡಿದ್ದರು ಸಹ ರಾಜ್ಯಪಾಲರು ಈವರೆಗೂ ಅನುಮತಿ ನೀಡಿಲ್ಲ. ಬದಲಾಗಿ ಮುಡಾ ಹಗರಣದಲ್ಲಿ ಒಂದೇ ದಿನದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಈ ಮೂಲಕ ರಾಜ್ಯಪಾಲರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈಗ ರಾಜ್ಯಭವನವೂ ಸಹ ಯಾವುದೇ ನಾಯಕರ ವಿರುದ್ಧ ಪ್ರಾಸಿಕ್ಯೂಷನ್ ಅರ್ಜಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ. ಹೀಗಾಗಿ ಇಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:33 pm, Sun, 1 September 24