ಬಿಜೆಪಿ ಅವಧಿಯಲ್ಲಿನ ಕೋವಿಡ್ ಹಗರಣದ ವರದಿ ಸಲ್ಲಿಕೆ: ಅಂದಿನ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಿಷ್ಟು
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಹಗರಣ ಸಂಬಂಧ ವರದಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಸೇರಿದೆ. ಆ ಮೂಲಕ ಮುಡಾಸ್ತ್ರಕ್ಕೆ ಕಾಂಗ್ರೆಸ್ ಕೊರೊನಾಸ್ತ್ರ ಪ್ರಯೋಗಿಸಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಂದಿನ ಆರೋಗ್ಯ ಸಚಿವ ಸುಧಾಕರ್, ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಯಾವುದೇ ಕಾನೂನು ಬಾಹಿರ ತಪ್ಪು ಮಾಡಿಲ್ಲ ಎಂದಿದ್ದಾರೆ.
ಬೆಂಗಳೂರು, ಸೆ. 1: ಗುಣಾಕಾರ ಭಾಗಾಕಾರ ಮಾಡಿ ಮಧ್ಯಂತರ ವರದಿ ನೀಡಿದ್ದಾರೆ. ನಾನು ಯಾವುದೇ ಕಾನೂನು ಬಾಹಿರ ತಪ್ಪು ಮಾಡಿಲ್ಲ. ಆರೋಗ್ಯ ಸಚಿವನಾಗಿ ಕೋವಿಡ್ ಸಂದರ್ಭದಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ (K Sudhakar) ಹೇಳಿದ್ದಾರೆ. ಸರ್ಕಾರಕ್ಕೆ ಕೋವಿಡ್ ಹಗರಣ ಸಂಬಂಧ ವರದಿ ಸಲ್ಲಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ವರದಿ ನೋಡುವವರೆಗೂ ನಾನು ಏನೂ ಮಾತಾಡಲ್ಲ ಎಂದು ಹೇಳಿದ್ದಾರೆ.
ಕೋವಿಡ್ ವೇಳೆ ನನ್ನ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದೇನೆ. ನಾನು ಮಾಡಿರುವ ಕೆಲಸ ರಾಜ್ಯದ ಜನರಿಗೆ ಗೊತ್ತಿದೆ. ಜಸ್ಟೀಸ್ ಕೆಂಪಣ್ಣ ವರದಿ ಬಂದು ಎಷ್ಟು ವರ್ಷ ಆಯ್ತು. ನಾವು ಯಾರೂ ಕೂಡ ರಾಜಕೀಯ ದ್ವೇಷ ಮಾಡಿಲ್ಲ. ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ದ್ವೇಷ ರಾಜಕಾರಣ ಮಾಡಿಲ್ಲ. ನಾವು ದ್ವೇಷ ರಾಜಕಾರಣ ಮಾಡಿದ್ದರೆ ಸಾಕಷ್ಟು ಜನ ಜೈಲಿಗೆ ಹೋಗುತ್ತಿದ್ದರು. ಎಲ್ಲವನ್ನೂ ಸವಾಲಾಗಿ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿರೋದು ದರೋಡೆಕೋರರ ಸರ್ಕಾರ: ಸುಧಾಕರ್ ವಾಗ್ದಾಳಿ
ಈ ಸರ್ಕಾರ ನನ್ನ ವಿರುದ್ಧ ರಾಜಕೀಯ ದ್ವೇಷ ಮಾಡುತ್ತಿದೆ. ಈ ಸರ್ಕಾರ ಏನಾದರೂ ಸತ್ಯಹರಿಶ್ಚಂದ್ರ ಸರ್ಕಾರನಾ? ಈಗ ರಾಜ್ಯದಲ್ಲಿರೋದು ದರೋಡೆಕೋರರ ಸರ್ಕಾರ ಎಂದು ವಾಗ್ದಾಳಿ ಮಾಡಿದ್ದಾರೆ. ಹಿಂದಿನ ಸರ್ಕಾರಗಳಲ್ಲಿ ಪರ್ಸೆಂಟೇಜ್ ರೂಪದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಕೆಲವರು ಪರ್ಸೆಂಟೇಜ್ ರೂಪದಲ್ಲಿ ಹಣ ಪಡೆಯುತ್ತಿದ್ದರು. ಈಗಿನ ಸರ್ಕಾರದಲ್ಲಿ ಪಾರ್ಟ್ನರ್ಶಿಪ್ ರೂಪದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾಸ್ತ್ರಕ್ಕೆ ಕಾಂಗ್ರೆಸ್ ಕೊರೊನಾಸ್ತ್ರ: ಕ್ರಿಮಿನಲ್ ಕೇಸ್ ದಾಖಲಿಸುವಂತೆ ಶಿಫಾರಸು, ಬಿಜೆಪಿಗರಲ್ಲಿ ಢವಢವ
ಒಂದು ಕಡೆ ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್, ಇನ್ನೊಂದು ಕಡೆ ಸಿಎಸ್ ನೇತೃತ್ವದ ಅಧಿಕಾರಿಗಳ, ತಜ್ಞರ ಸಮಿತಿ ಇತ್ತು. ಟಾಸ್ಕ್ ಫೋರ್ಸ್‌ನಲ್ಲಿ ಐವರು ಸಚಿವರು ಇದ್ದರು. ಟಾಸ್ಕ್ಫೋರ್ಸ್ಗೆ ಮೊದಲು ಶ್ರೀರಾಮುಲು ಅಧ್ಯಕ್ಷರಾಗಿದ್ದರು. ನಂತರ ಡಾ.ಅಶ್ವಥ್‌ನಾರಾಯಣ ಅಧ್ಯಕ್ಷರಾಗಿದ್ದರು. ಎಲ್ಲ ತೀರ್ಮಾನಗಳನ್ನೂ ಟಾಸ್ಕ್ ಫೋರ್ಸ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ತಗೊಳುತ್ತಿದ್ದೇವು. ನಾವು ಕ್ರಮಬದ್ಧವಾಗಿ, ನಿಯಮಬದ್ಧವಾಗಿ, ಸಮರೋಪಾದಿಯಲ್ಲಿ ರಾಜ್ಯದ ಜನರ ಪ್ರಾಣ ಉಳಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಸರ್ಕಾರ ಹೆಚ್ಚು ಅಂದರೆ ಇನ್ನು ಮೂರು ವರ್ಷ ಅಷ್ಟೇ ಇರುತ್ತೆ
ನಾಳೆ ಏನಾಗುತ್ತೆ ಅಂತ ಗೊತ್ತಾಗದ ವೈದ್ಯಕೀಯ ಎಮರ್ಜೆನ್ಸಿ ಆವತ್ತು ಇತ್ತು. ಇವರು ಆವತ್ತಿನ ಔಷಧಗಳಿಗೆ ಇವತ್ತಿನ ದರ ಹಾಕಿ ಲೆಕ್ಕ ಹಾಕಿದ್ದಾರಂತೆ. ಆರೋಗ್ಯ ವ್ಯವಸ್ಥೆಯನ್ನು ನಮ್ಮ ಸರ್ಕಾರ ಯಾವ ರೀತಿ ಉತ್ತಮ ಪಡಿಸಿತ್ತು ಅಂತ ರಾಜ್ಯದ ಜನರಿಗೆ ಗೊತ್ತಿದೆ. ಈಗ ಈ ಸರ್ಕಾರಕ್ಕೆ ನಾವು ಅರ್ಥ ಮಾಡಿಸುವ ಅಗತ್ಯ ಇಲ್ಲ. ಇವರೇನು ಶಾಶ್ವತವಾಗಿ ಅಧಿಕಾರದಲ್ಲಿ ಇರುವವರಂತೆ ಮಾತಾಡುತ್ತಾರೆ. ಈ ಸರ್ಕಾರ ಹೆಚ್ಚು ಅಂದರೆ ಇನ್ನು ಮೂರು ವರ್ಷ ಅಷ್ಟೇ ಇರುತ್ತೆ. ಈ ಸರ್ಕಾರಕ್ಕೆ ದಿನಗಣನೆ ಶುರುವಾಗಿದೆ. ನಂತರ ನಾವು ಅಧಿಕಾರಕ್ಕೆ ಬರಲ್ವಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊವಿಡ್ ಹಗರಣ ಆರೋಪ: ಸಿಎಂ ಕೈ ಸೇರಿದ ವರದಿ
ಇವರು ದ್ವೇಷ ಸಾಧನೆ ಮಾಡುತ್ತಿದ್ದಾರೆ. ಕೆಂಪಣ್ಣ ಆಯೋಗದ ವರದಿ ಎಷ್ಟು ವರ್ಷ ಆಯ್ತು ಬಂದು? ಸಂಪುಟ ಒಂದು, ಸಂಪುಟ ಎರಡು ಇದೆ. ಒಂದೇ ಸಂಪುಟ ಮುಂದೆ ಇಟ್ಟಿದ್ದಾರೆ. ನಾವು ಇವರ ವಿರುದ್ಧ ರಾಜಕೀಯ ದ್ವೇಷ ಮಾಡಿದ್ವಾ ಆಗ? ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹಾಕಿ ಮಧ್ಯಂತರ ವರದಿ ಪಡೆದಿದ್ದಾರೆ. ವರದಿ ನೀಡುವುದಕ್ಕೆ ಇನ್ನೂ ಸಮಯ ಇತ್ತು. ಅವರು ಇನ್ನೂ ಆರು ತಿಂಗಳು ಸಮಯ ಕೇಳಿದ್ದಾರೆ. ಜಸ್ಟಿಸ್ ಕುನ್ಹಾ ಸರಿಯಾದ ವರದಿ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.