ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ವಾಯು ಗುಣಮಟ್ಟ ಗಣನೀಯ ಕುಸಿತ, ಗಾಳಿಯಲ್ಲಿ ಹೆಚ್ಚಿದ ಅಪಾಯಕಾರಿ ಕಣಗಳು: ಅಧ್ಯಯನ ವರದಿ

|

Updated on: Sep 07, 2024 | 1:10 PM

ಸಾಮಾನ್ಯವಾಗಿ, ಉತ್ತರ ಭಾರತದ ನಗರಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ನಗರಗಳಲ್ಲಿ ವಾಯುಮಾಲಿನ್ಯ ತುಸು ಕಡಿಮೆ ಎಂದು ಹೇಳಲಾಗುತ್ತದೆ. ಆದರೆ, ಇದು ಸುಳ್ಳು ಎಂಬುದನ್ನು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ಅದರಲ್ಲಿಯೂ ಕರ್ನಾಟಕದ ಪ್ರಮುಖ ನಗರಗಳ ಬಗ್ಗೆ ವರದಿಯಲ್ಲಿರುವ ಅಂಶಗಳು ಕಳವಳಕಾರಿಯಾಗಿವೆ. ಅಧ್ಯಯನ ವರದಿಯ ಕುರಿತಾದ ವಿವರ ಇಲ್ಲಿದೆ.

ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ವಾಯು ಗುಣಮಟ್ಟ ಗಣನೀಯ ಕುಸಿತ, ಗಾಳಿಯಲ್ಲಿ ಹೆಚ್ಚಿದ ಅಪಾಯಕಾರಿ ಕಣಗಳು: ಅಧ್ಯಯನ ವರದಿ
ಸಾಂದರ್ಭಿಕ ಚಿತ್ರ
Image Credit source: Getty Images
Follow us on

ಬೆಂಗಳೂರು, ಸೆಪ್ಟೆಂಬರ್ 7: ಕರ್ನಾಟಕದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ವಾಯು ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿರುವುದು ಗ್ರೀನ್‌ಪೀಸ್ ಇಂಡಿಯಾ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ. ಪರಿಣಾಮವಾಗಿ, ಹಿತಕರವಾದ ಹವಾಮಾನ ಮತ್ತು ಮಾಲಿನ್ಯ ಮುಕ್ತ ಪರಿಸರದಿಂದಲೇ ಗುರುತಿಸಿಕೊಂಡಿರುವ ಕರ್ನಾಟಕಕ್ಕೆ ಈ ವಿಚಾರದಲ್ಲಿ ತುಸು ಹಿನ್ನಡೆಯಾದಂತಾಗಿದೆ.

ದಕ್ಷಿಣ ಭಾರತದ 10 ಪ್ರಮುಖ ನಗರಗಳಲ್ಲಿ ಸರಾಸರಿ ಪಿಎಂ2.5 ಮತ್ತು ಪಿಎಂ10 (ಇವು ಗಾಳಿಯಲ್ಲಿರುವ ದೂಳು ಮತ್ತು ಅಪಾಯಕಾರಿ ಕಣಗಳನ್ನು ನಿರ್ಧರಿಸುವ ಮಾಪಕಗಳಾಗಿವೆ) ಮಟ್ಟ ಹೆಚ್ಚುತ್ತಲೇ ಇದೆ. ಇದು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳನ್ನು ಮೀರಿದೆ. ಇದು ಆರೊಗ್ಯದ ವಿಚಾರದಲ್ಲಿ ಆತಂಕ ಸೃಷ್ಟಿಸಿದೆ ಎಂದು ಗ್ರೀನ್‌ಪೀಸ್ ಇಂಡಿಯಾದ ಇತ್ತೀಚಿನ ವರದಿ, ‘ಸ್ಪೇರ್ ದಿ ಏರ್-2’ನಲ್ಲಿ ಉಲ್ಲೇಖಿಸಲಾಗಿದೆ.

ಯಾವೆಲ್ಲ ನಗರಗಳಲ್ಲಿ ಹೆಚ್ಚಿದೆ ವಾಯುಮಾಲಿನ್ಯ?

ಹೈದರಾಬಾದ್, ಚೆನ್ನೈ, ವಿಶಾಖಪಟ್ಟಣಂ, ಕೊಚ್ಚಿ, ಮಂಗಳೂರು, ಅಮರಾವತಿ, ವಿಜಯವಾಡ, ಬೆಂಗಳೂರು, ಮೈಸೂರು ಮತ್ತು ಪುದುಚೇರಿಗಳ ವಾಯು ಗುಣಮಟ್ಟದ ಬಗ್ಗೆ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಡಬ್ಲ್ಯುಎಚ್​​ಒ ಮಾನದಂಡಕ್ಕಿಂತಲೂ ಹೆಚ್ಚಿನ ವಾಯುಮಾಲಿನ್ಯ

ವಿಶಾಖಪಟ್ಟಣಂನಲ್ಲಿ ಪಿಎಂ2.5 10 ಪಟ್ಟು ಮತ್ತು ಪಿಎಂ10 ಮಟ್ಟ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳಿಗಿಂತ 9 ಪಟ್ಟು ಹೆಚ್ಚಾಗಿದೆ ಮತ್ತು ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳ (NAAQS) ಮಿತಿಗಳನ್ನು ಮೀರಿದೆ ಎಂದು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಹೈದರಾಬಾದ್, ವಿಜಯವಾಡ, ಕೊಚ್ಚಿ, ಮಂಗಳೂರು, ಅಮರಾವತಿ ಮತ್ತು ಚೆನ್ನೈನಲ್ಲಿ ವಾರ್ಷಿಕ ಸರಾಸರಿ ಪಿಎಂ2.5 ಮಟ್ಟಗಳು 6 ರಿಂದ 7 ಪಟ್ಟು ಹೆಚ್ಚಾಗಿದೆ. ಆದರೆ ಬೆಂಗಳೂರು, ಪುದುಚೇರಿ ಮತ್ತು ಮೈಸೂರಿನಲ್ಲಿ ವಾರ್ಷಿಕ ಸರಾಸರಿ ಪಿಎಂ10 ಮಟ್ಟ ವಿಶ್ವಸಂಸ್ಥೆಯ ಮಾರ್ಗಸೂಚಿ ಪ್ರಕಾರ ಇರಬೇಕಾದ್ದರಿಂದ 4 ರಿಂದ 5 ಪಟ್ಟು ಹೆಚ್ಚಿದೆ ಎಂದು ವರದಿ ತಿಳಿಸಿದೆ.

ಶುದ್ಧ ಗಾಳಿಯು ನಮ್ಮ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಆದರೆ ಈ ವರದಿಯು ಎಲ್ಲಾ ನಗರಗಳಲ್ಲಿನ ದೂಳಿನ ಕಣಗಳ ಮಟ್ಟವು ಡಬ್ಲ್ಯುಎಚ್​ಒದ ಪರಿಷ್ಕೃತ ಮಾರ್ಗಸೂಚಿಗಳನ್ನು ಮೀರಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಸಂಶೋಧಕಿ ಆಕಾಂಕ್ಷಾ ಸಿಂಗ್ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ಯಲಹಂಕ ಎರ್ನಾಕುಲಂ ವಿಶೇಷ ರೈಲು ಸೆ. 19ರ ವರೆಗೆ ವಿಸ್ತರಣೆ

ಅಧ್ಯಯನ ವರದಿಯು, ದಕ್ಷಿಣದ ರಾಜ್ಯಗಳಲ್ಲಿ ಶುದ್ಧ ಗಾಳಿ ಇದೆ ಎಂಬ ವಾದವನ್ನು ಸುಳ್ಳಾಗಿಸಿದೆ. ದಕ್ಷಿಣದ ರಾಜ್ಯಗಳಲ್ಲಿನ ಒಂದೇ ಒಂದು ಪ್ರಮುಖ ನಗರವೂ ವಿಶ್ವ ಆರೋಗ್ಯ ಸಂಸ್ಥೆಯ ​​ಸುರಕ್ಷಿತ ಮತ್ತು ಆರೋಗ್ಯಕರ ಗಾಳಿಯ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ