Happy Birthday CNR Rao: ವಿಜ್ಞಾನಿ ಸಿಎನ್​ಆರ್​ ರಾವ್​ಗೆ ಇಂದು 86ನೇ ಜನುಮ ದಿನ, ವಿಜ್ಞಾನದೆಡೆಗೆ ಅದೇ ಕೌತುಕ-ಮುಗ್ಧತೆ!

| Updated By: ಸಾಧು ಶ್ರೀನಾಥ್​

Updated on: Jun 30, 2021 | 11:30 AM

Bharat Ratna CNR Rao: ಆರೇಳು ದಶಕಗಳಿಂದ ರಸಾಯನಶಾಸ್ತ್ರದಲ್ಲಿ ಒಂದಿಲ್ಲೊಂದು ಪ್ರಯೋಗಗಳಲ್ಲಿ ತೊಡಗಿರುವ ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್​​ ಪ್ರಶಸ್ತಿ ಪುರಸ್ಕೃತ ಸಿಎನ್​ಆರ್​ ರಾವ್ ಇಂದಿಗೂ ಯಾವುದಾದರೂ ಸಂಶೋಧನೆ ಮಾಡಿದರೆ ಅದಾಗತಾನೆ ಪ್ರಯೋಗಾಲಯಕ್ಕೆ ಎಂಟ್ರಿ ಕೊಟ್ಟ ಕಾಲೇಜು ವಿದ್ಯಾರ್ಥಿಯಂತೆ ಸಂಭ್ರಮಿಸುತ್ತಾರೆ.

Happy Birthday CNR Rao: ವಿಜ್ಞಾನಿ ಸಿಎನ್​ಆರ್​ ರಾವ್​ಗೆ ಇಂದು 86ನೇ ಜನುಮ ದಿನ, ವಿಜ್ಞಾನದೆಡೆಗೆ ಅದೇ ಕೌತುಕ-ಮುಗ್ಧತೆ!
ಹಿರಿಯ ವಿಜ್ಞಾನಿ ಸಿಎನ್​ಆರ್​ ರಾವ್​​ ಅವರಿಗೆ ಇಂದು 86ನೇ ಜನುಮ ದಿನ... ವಿಜ್ಞಾನದೆಡೆಗೆ ಅದೇ ಕೌತುಕ-ಮುಗ್ಧತೆ!
Follow us on

ಬೆಂಗಳೂರು: ನಮ್ಮ ನಡುವಿನ ಸುಪ್ರಸಿದ್ಧ ವಿಜ್ಞಾನಿ ಸಿಎನ್​ಆರ್​ ರಾವ್​​ ಅವರಿಗೆ ಇಂದು 86ನೇ ಜನುಮ ದಿನ… ಇಂದಿಗೂ ವಿಜ್ಞಾನದೆಡೆಗೆ ಅದೇ ಮುಗ್ಧತೆ ಕಾಪಾಡಿಕೊಂಡು ಲವಲವಿಕೆಯಿಂದ ಇರುವ ಭಾರತ ರತ್ನ ಪುರಸ್ಕಾರಕ್ಕೆ ಭಾಜನವಾಗಿ ಹಿಮಾಲಯದೆತ್ತರದ ವ್ಯಕ್ತಿತ್ವ ರೂಪಿಸಿಕೊಂಡಿರುವ ಚಿಂತಾಮಣಿ ನಾಗೇಶ ರಾಮಚಂದ್ರರಾವ್​ (C. N. R. Rao) ಅವರಿಗೆ ಪ್ರೀತಿಯ ಹ್ಯಾಪಿ ಬರ್ಥ್​​​ಡೆ!

ಪ್ರಪಂಚದಾದ್ಯಂತ ಇರುವ 83 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್​ ಪಡೆದಿರುವ ಸಿಎನ್​ಆರ್​ ರಾವ್ ರಾಜಧಾನಿ ಬೆಂಗಳೂರಿನಿಂದ 80 ಕಿಮಿ ದೂರದ ಚಿಂತಾಮಣಿ ಪಟ್ಟಣದವರು. ಆರೇಳು ದಶಕಗಳಿಂದ ರಸಾಯನಶಾಸ್ತ್ರದಲ್ಲಿ ಒಂದಿಲ್ಲೊಂದು ಪ್ರಯೋಗಗಳಲ್ಲಿ ತೊಡಗಿರುವ ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್​​ ಪ್ರಶಸ್ತಿ ಪುರಸ್ಕೃತ ಸಿಎನ್​ಆರ್​ ರಾವ್ ಇಂದಿಗೂ ಯಾವುದಾದರೂ ಸಂಶೋಧನೆ ಮಾಡಿದರೆ ಅದಾಗತಾನೆ ಪ್ರಯೋಗಾಲಯಕ್ಕೆ ಎಂಟ್ರಿ ಕೊಟ್ಟ ಕಾಲೇಜು ವಿದ್ಯಾರ್ಥಿಯಂತೆ ಸಂಭ್ರಮಿಸುತ್ತಾರೆ.

1770 ಸಂಶೋಧನಾ ಪ್ರಕಟಣೆಗಳು, 50ಕ್ಕೂ ಹಚ್ಚು ವಿಜ್ಞಾನ ಪುಸ್ತಕಗಳನ್ನು ಬರೆದಿರುವ ಪದ್ಮವಿಭೂಷಣ ಪುರಸ್ಕೃತ ಹೆಮ್ಮೆಯ ಕನ್ನಡಿಗ ಸಿಎನ್​ಆರ್​ ರಾವ್ ತಮ್ಮ 17ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ BSc ಪದವಿ ಪಡೆದು, ದೇಶದ ಪ್ರತಿಷ್ಠಿತ ಮಹಾ ವಿಶ್ವವಿದ್ಯಾಲಯವಾದ, ಭಾರತ ರತ್ನ ಬನಾರಸ್​ ವಿಶ್ವ ವಿದ್ಯಾಯದಲ್ಲಿ MSc ಪದವಿ ಗಳಿಸಿದ್ದಾರೆ. ಒಂದೇ ಉಸುರಿನಲ್ಲಿ ವಿಜ್ಞಾನದಲ್ಲಿ ಪದವಿಗಳನ್ನು ಬಾಚಿಕೊಳ್ಳುತ್ತಾ ಸಾಗಿದ ಸಿಎನ್​ಆರ್ ಸರ್, ಅಮೆರಿಕದ ಪುರಾತನ ಯೂನಿವರ್ಸಿಗಳಲ್ಲಿ ಒಂದಾದ Purdue Universityಯಲ್ಲಿ PhD ಗಳಿಸಿದರು!

1934ರ ಜೂನ್​ 30ರಂದು ಜನಿಸಿದ ಸಿಎನ್​ಆರ್​ ರಾವ್ ಅವರು ಇಂದಿಗೂ ದೇಶಕ್ಕಾಗಿ ಏನಾದರೂ ಮಹತ್ತರ ಕೊಡುಗೆ ನೀಡಬೇಕು ಎಂದು ತುಡಿಯುವ ಯುವ ಮನಸುಳ್ಳವರು. ಪಿಎಚ್​​ಡಿ ಪಡೆದು ಅಮೆರಿಕದಿಂದ ವಾಪಸಾದ ಸಿಎನ್​ಆರ್​ ರಾವ್ ಅವರಿಗೆ ಆಗ 24 ವರ್ಷ. ಅಷ್ಟು ಚಿಕ್ಕ ವಯಸ್ಸಿಗೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಲೆಕ್ಚರರ್​ ಆಗಿ ಸೇರಿಕೊಂಡವರು. ನಾನು ಬಸವನಗುಡಿಯಲ್ಲಿದ್ದೆ. ನಾನೂ ‘ಎಪಿಎಸ್ ಪ್ರಾಡಕ್ಟ್’ (Acharya Patashala high school)​​ ಎಂದು ಸಿಎನ್​ಆರ್​ ರಾವ್ ಅದೊಮ್ಮೆ ಸಂದರ್ಶನದಲ್ಲಿ ಹೆಮ್ಮೆಯಿಂದ ಮೆಲುಕು ಹಾಕಿದ್ದರು. ​

ಈ ಮಧ್ಯೆ ಇಡೀ ಪ್ರಪಂಚ ಸುತ್ತಿಬಂದು ಇದೀಗ ಐಐಎಸ್​ಇ ಸಮೀಪದಲ್ಲೇ ವಿಶ್ರಾಂತ ಜೀವನ ನಡೆಸುತ್ತಿದ್ದಾರಾದರೂ ಇಂದಿಗೂ ಪುಸ್ತಕಗಳ ಮಧ್ಯೆಯೇ ಶಿಸ್ತಾಗಿ ಕುಳಿತು ಅಧ್ಯಯನ ನಿರತರು. ಇವರ ಪತ್ನಿ ಇಂದುಮತಿ (Indumati Rao) ಸಹ ಇವರಷ್ಟೇ ಚಟುವಟಿಕೆಯಿಂದ ಸಕ್ರಿಯರಾಗಿದ್ದಾರೆ. ಅವರೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳು ಸಂಜಯ್​ ಮತ್ತು ಸುಚಿತ್ರ (Sanjay and Suchitra).

ಎರಡು ಬಾರಿ ಪ್ರಧಾನ ಮಂತ್ರಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದರು. ಈ ಹಿಂದೆ ಬಿಎಸ್​ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವೈಜ್ಞಾನಿಕ ಸಲಹೆಗಾರರಾಗಿ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ ಮೂವರು ವಿಜ್ಞಾನಿಗಳು ಮಾತ್ರವೇ ಭಾರತ ರತ್ನ ಪುರಸ್ಕೃತರು. ಮೊದಲನೆಯವರು ಸರ್​ ಸಿವಿ ರಾಮನ್(C.V. Raman) ನಂತರ ಎಪಿಜೆ ಅಬ್ದುಲ್​ ಕಲಾಂ (A. P. J. Abdul Kalam). ಮೂರನೆಯವರು ಸಿಎನ್​ಆರ್​ ರಾವ್.
HBD Bharat Ratna CNR Rao Sir…

ವಿಜ್ಞಾನಿ ಸಿಎನ್​ಆರ್​ ರಾವ್​… ಇಂದಿಗೂ ವಿಜ್ಞಾನದೆಡೆಗೆ ಅದೇ ಕೌತುಕತೆ-ಮುಗ್ಧತೆ!

Published On - 11:19 am, Wed, 30 June 21