AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1ನೇ ಕ್ಲಾಸ್ ವಿದ್ಯಾರ್ಥಿಗಳ ಗಲಾಟೆ ಸಾವಿನಲ್ಲಿ ಅಂತ್ಯ: ಮಕ್ಕಳು ತಂದಿಟ್ಟ ಜಗಳದಲ್ಲಿ ಹೋಯ್ತು ತಂದೆಯ ಜೀವ

ಹಾಸನದ ಅರಸೀಕೆರೆಯಲ್ಲಿ ಮಕ್ಕಳ ತರ್ಲೆ ಗಲಾಟೆ ಪೋಷಕರ ಹಂತದವರೆಗ ಹೋಗಿ ದೊಡ್ಡ ಜಗಳವೇ ಆಗಿದ್ದು, ಕೊನೆಗೆ ಸಾವಿನಲ್ಲಿ ಅಂತ್ಯವಾಗಿದೆ. ತಂದೆ-ತಾಯಿಯರ ನಡುವಿನ ಜಗಳಕ್ಕೆ ತಿರುಗಿ ಓರ್ವ ಮಗನ ತಂದೆಯನ್ನು ಮತ್ತೊಬ್ಬ ಹುಡುಗ ತಂದೆ ಕೊಲೆ ಮಾಡಿದ್ದಾನೆ. ಕೊಲೆಯಾದವರ ಕುಟುಂಬಸ್ಥರು ಆರೋಪಿಯ ಮನೆಗೆ ಬೆಂಕಿ ಹಚ್ಚಿ, ಕಾರನ್ನು ಜಖಂಗೊಳಿಸಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಮಕ್ಕಳ ಗಲಾಟೆ ಕೊಲೆ ಹಂತಕ್ಕೆ ಹೋಗಿದ್ಹೇಗೆ?

1ನೇ ಕ್ಲಾಸ್ ವಿದ್ಯಾರ್ಥಿಗಳ ಗಲಾಟೆ ಸಾವಿನಲ್ಲಿ ಅಂತ್ಯ: ಮಕ್ಕಳು ತಂದಿಟ್ಟ ಜಗಳದಲ್ಲಿ ಹೋಯ್ತು ತಂದೆಯ ಜೀವ
ತೌಫಿಕ್
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ|

Updated on: Aug 30, 2025 | 3:58 PM

Share

ಹಾಸನ, (ಆಗಸ್ಟ್ 30): ಮಕ್ಕಳ ಗಲಾಟೆ ಎರಡು ಕುಟುಂಬದ ನಡುವೆ ದೊಡ್ಡ ಜಗಳವಾಗಿದ್ದು, ಅಂತಿಮವಾಗಿ ಈ ಗಲಾಟೆ ಕೊಲೆಯಲ್ಲಿ ಅಂತ್ಯಕಂಡಿದೆ. ಹೌದು..1ನೇ ತರಗತಿ ಮಕ್ಕಳ ಗಲಾಟೆಯಿಂದ ಪೋಷಕರ ನಡುವೆ ಗಲಾಟೆಯಾಗಿ ಬಳಿಕ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಗಲಾಟೆಯಲ್ಲಿ ಫರಾನ್ ಮಾಡಿದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ತೌಫಿಕ್ (28) ಸಾವನ್ನಪ್ಪಿದ್ದಾನೆ.ಈ ಘಟನೆಯಿಂದ ತೌಫಿಕ್‌ನ ಕುಟುಂಬಸ್ಥರು ರೊಚ್ಚಿಗೆದ್ದು, ಆರೋಪಿ ಫರಾನ್‌ನ ಮನೆಯ ಮೇಲೆ ದಾಳಿ ನಡೆಸಿ, ಮನೆ ಜಖಂಗೊಳಿಸಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಸಂಬಂಧ ತೌಫಿಕ್ ನಿವಾಸಕ್ಕೆ ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ ಪಿಎಸ್​ಐ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಪ್ರಕರಣದ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಘಟನೆಯಿಂದ ಮುಜವಾರ್ ಮೊಹಲ್ಲಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಅನ್ಯಜಾತಿ ಯುವಕನನ್ನು ಲವ್ ಮಾಡಿದ್ದಕ್ಕೆ ಮಗಳನ್ನೇ ಕೊಂದು ಸುಟ್ಟುಹಾಕಿದ ತಂದೆ

ಪಿಎಸ್​​ಐ ಮೇಲೆ ಶಾಸಕ ಗರಂ

ಇನ್ನು ಶಾಸಕ ಶಿವಲಿಂಗೇಗೌಡ ಮೃತ ತೌಫೀಕ್ ಅಂತಿಮ ದರ್ಶನ ಪಡೆದುಕೊಂಡರು.ಬಳಿಕ ಕೇಸ್ ದಾಖಲಿಸದಿದ್ದಕ್ಕೆ ಅರಸೀಕೆರೆ ಠಾಣೆ ಪಿಐ ಜಿ.ಕೆ.ರಾಘವೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಾರಣಾಂತಿಕ ಹಲ್ಲೆ ಆಗಿದ್ದರೂ ಕೇಸ್ ದಾಖಲು‌ ಮಾಡಿಲ್ಲ. ಹಲ್ಲೆ ಮಾಡಿದ ಆರೋಪಿಗಳನ್ನೂ ಕೂಡ ಪೊಲೀಸರು ಬಂಧಿಸಿಲ್ಲ.ತೌಫೀಕ್​ ಮೇಲೆ ಹಲ್ಲೆ ಮಾಡಿದ‌ವರು ಪ್ರಭಾವಿಗಳಿದ್ದಾರೆ. ಕೊಲೆಯಾದ ತೌಫೀಕ್ ತುಂಬಾ ಒಳ್ಳೆಯ ಹುಡುಗ. ಆ ಕುಟುಂಬಕ್ಕೆ ನಾನೇ ಖುದ್ದು ನಿಂತು ನೆರವು ನೀಡುತ್ತೇನೆ. ಅರಸೀಕೆರೆ ಇನ್ಸ್​ಪೆಕ್ಟರ್​ ರಾಘವೇಂದ್ರ ವಿರುದ್ಧ ಹಲವು ದೂರುಗಳಿವೆ. ಆತ ಮತ್ತೆ ಅರಸೀಕೆರೆಗೆ ಕಾಲಿಡಬಾರದು ಎಂದು ಹೇಳಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು.

ಮಕ್ಕಳ ಗಲಾಟೆ ಕೊಲೆ ಹಂತಕ್ಕೆ ಹೋಗಿದ್ಹೇಗೆ?

ಅರಸೀಕೆರೆ ನಗರದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ತೌಫಿಕ್ ಹಾಗೂ ಫರಾನ್‌ನ ಮಕ್ಕಳು ಗಲಾಟೆ ಮಾಡಿಕೊಂಡಿದ್ದಾರೆ. ಆಗಸ್ಟ್ 25 ರಂದು ಜ್ವರ ಇದ್ದ ಬಾಲಕನಿಗೆ ಮತ್ತೋರ್ವ ಬಾಲಕ ನೀರೆರಚಿದ್ದಕ್ಕೆ ಗಲಾಟೆಯಾಗಿದೆ. ನೀರು ಎರಚಿದ ಬಗ್ಗೆ ಮಗುವಿಗೆ ಬುದ್ಧಿ ಹೇಳಿ ಎಂದು ತೌಫೀಕ್, ಫರ್ಹಾನ್​ ಎಂಬಾತನಿಗೆ ಹೇಳಿದ್ದ.ಬಳಿಕ ಕಳೆದ ನಾಲ್ಕು ದಿನಗಳ ಹಿಂದೆ ಅರಸೀಕೆರೆಯ ಬಿಎಚ್ ರಸ್ತೆಯ ಲಸ್ಸಿ ಶಾಪ್‌ನಲ್ಲಿ ಎದುರುಬದರಾದ ಇಬ್ಬರು, ಮಕ್ಕಳ ಜಗಳದ ವಿಷಯವನ್ನು ಮತ್ತೆ ಕೆದಕಿದ್ದಾರೆ. ಈ ವೇಳೆ ಗಲಾಟೆ ತಾರಕಕ್ಕೇರಿದ್ದು, ಫರಾನ್ ತೌಫಿಕ್‌ನನ್ನು ತಳ್ಳಿದ್ದಾನೆ. ಇದರಿಂದ ಮೆಟ್ಟಿಲುಗಳ ಮೇಲೆ ಬಿದ್ದ ತೌಫಿಕ್ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣ ಗಾಯಗೊಂಡಿದ್ದ ತೌಫಿಕ್‌ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ತೌಫಿಕ್ ಆಗಸ್ಟ್ 29ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಈ ಸಾವಿನಿಂದ ಕುಪಿತಗೊಂಡ ತೌಫಿಕ್‌ನ ಕುಟುಂಬಸ್ಥರು ಮತ್ತು ಸಂಬಂಧಿಕರು ಫರಾನ್‌ನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಹತ್ತಾರು ಮಂದಿ ಜನರು ಫರಾನ್‌ನ ಮನೆಯನ್ನು ಜಖಂಗೊಳಿಸಿ, ಅವರ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಿಂದ ಉಂಟಾದ ಉದ್ವಿಗ್ನ ಪರಿಸ್ಥಿತಿಯನ್ನು ತಡೆಗಟ್ಟಲು ಅರಸೀಕೆರೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.