ಇದು ಅರಕಲಗೂಡು ತಹಶೀಲ್ದಾರ್ ಶ್ರೀನಿವಾಸರ ಸಾಧನೆ! ಅನ್ನದಾತರ ಕಣ್ಣೀರು ಒರೆಸಿ, ಹತ್ತೇ ತಿಂಗಳಲ್ಲಿ 3,000 ಪೌತಿ ಖಾತೆ ವಿತರಣೆ ಮಾಡಿದರು

| Updated By: ಸಾಧು ಶ್ರೀನಾಥ್​

Updated on: Dec 06, 2022 | 5:23 PM

Arkalgud Tahsildar: ಬೀದಿ ಬದಿ ಆಶ್ರಯ ಪಡೆದಿದ್ದ ಅಂಧ ಮಹಿಳೆಯೊಬ್ಬರಿಗೆ ನಿವೇಶನದ ಜೊತೆಗೆ ಮನೆಯನ್ನೂ ಕೊಡಿಸಿದ ಈ ಅಧಿಕಾರಿಯ ಕೆಲಸ ನೆನೆದು, ತಮ್ಮ ಒಳಗಣ್ಣಿನಿಂದಲೇ ಆನಂದ ಭಾಷ್ಪ ಸುರಿಸಿದ್ದಾರೆ. ಇದ್ದರೆ ಇಂತಹ ಅಧಿಕಾರಿ ಇರಬೇಕು ಎಂದು ತಹಶೀಲ್ದಾರ್ ಶ್ರೀನಿವಾಸರ ಸೇವೆಯನ್ನ ಕೊಂಡಾಡಿದ್ದಾರೆ.

ಇದು ಅರಕಲಗೂಡು ತಹಶೀಲ್ದಾರ್ ಶ್ರೀನಿವಾಸರ ಸಾಧನೆ! ಅನ್ನದಾತರ ಕಣ್ಣೀರು ಒರೆಸಿ, ಹತ್ತೇ ತಿಂಗಳಲ್ಲಿ 3,000 ಪೌತಿ ಖಾತೆ ವಿತರಣೆ ಮಾಡಿದರು
3 ಸಾವಿರ ಪೌತಿ ಖಾತೆ ವಿತರಣೆ -ಇದು ಅನ್ನದಾತರ ಕಣ್ಣೀರು ಒರೆಸಿದ ಅರಕಲಗೂಡು ತಹಶೀಲ್ದಾರ್ ಶ್ರೀನಿವಾಸ್ ಸಾಧನೆ!
Follow us on

ಸರ್ಕಾರಿ ಕಚೇರಿ ಅಂದ್ರೆ ಲಂಚ.. ವಿಳಂಬ.. ಎಷ್ಟೇ ಅಲೆದರೂ ಕೆಲಸ ಮಾಡೋದಿಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿ ಬರುವ ಆರೋಪ… ಅನೇಕ ಸಂದರ್ಭಗಳಲ್ಲಿ ಇದು ಕಟುವಾಸ್ತವೂ ಹೌದು. ಅದ್ರಲ್ಲೂ ಕಂದಾಯ ಇಲಾಖೆ ಅಂದ್ರೆ ಮುಗಿದೇ ಹೋಯ್ತು. ಅಲ್ಲಿ ಒಂದು ಫೈಲ್ ಟೇಬಲ್ ನಿಂದ ಇನ್ನೊಂದು ಟೇಬಲ್ ಗೆ ಮೂವ್ ಆಗಬೇಕು ಅಂದ್ರೆ ಕೈ ಬಿಸಿ ಮಾಡಲೇ ಬೇಕು.. ಅವರು ಹಳ್ಳಿ ರೈತರಿರಲಿ, ನಗರ ಜನರೇ ಇರಲಿ.. ಲಂಚ ಇಲ್ಲದೇ ಏನೂ ಆಗೋದಿಲ್ಲ ಅನ್ನೋ ಮಾತಿನ ನಡುವೆ ಇಲ್ಲೊಬ್ಬರು ಅಧಿಕಾರಿ ಕ್ರಾಂತಿಯನ್ನೇ ಮಾಡಿದ್ದಾರೆ. ಕೇವಲ 10 ತಿಂಗಳಲ್ಲಿ ಬರೊಬ್ಬರಿ 3,000 ಪೌತಿ ಖಾತೆ (Pouthi Kathe) ಮಾಡಿ ಸಾವಿರಾರು ರೈತರ (Farmers) ಕಷ್ಟ ದೂರ ಮಾಡಿದ್ದಷ್ಟೇ ಅಲ್ಲ, ಅವರಿಗೆ ಸರ್ಕಾರದಿಂದಲೂ ಯೋಜನೆಗಳ ಲಾಭ ಬರುವಂತೆಯೂ ಮಾಡಿದ್ದಾರೆ. ಎರಡು ಮೂರು ದಶಕಗಳಿಂದ ಅಲೆದು ಅಲೆದು ಸುಸ್ತಾಗಿದ್ದ ಬಡ ಜನರ ಮನೆ ಬಾಗಿಲಿಗೆ ಖಾತೆ ಪಹಣಿ ತಲುಪಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಹಳ್ಳೀ ಹಳ್ಳಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳ ಸದ್ದು.. ಎರಡು ಮೂರು ದಶಕಗಳಿಂದ ಆಗದೇ ಉಳಿದಿದ್ದ ಕೆಲಸಕ್ಕೆ ಎರಡೇ ತಿಂಗಳಲ್ಲಿ ಮುಕ್ತಿ.. ಅನ್ನದಾತರ ಕಣ್ಣೀರು ಒರೆಸಿದ ತಹಶೀಲ್ದಾರ್. ಅಧಿಕಾರಿ ಕೆಲಸಕ್ಕೆ ಮೆಚ್ಚಿದ ಜನರ ಕಣ್ಣಲ್ಲಿ ಆನಂದ ಭಾಷ್ಪ. ಹೌದು ಹೀಗೆ ಹಳ್ಳಿ ಹಳ್ಳಿಯಲ್ಲಿಯೂ ಜನರ ನಡುವೆ ನಿಂತು ಅವರ ಕಷ್ಟ ಕೇಳುತ್ತಾ, ಅವರ ದಶಕಗಳ ಕಷ್ಟ ದೂರ ಮಾಡಿ ಜನರಿಂದ ಸೈ ಎನಿಸಿಕೊಂಡಿರೋ ಇವರ ಹೆಸರು ಶ್ರೀನಿವಾಸ್… (Arkalgud Tahsildar Srinivas)

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನಲ್ಲಿ ಕಳೆದ 11 ತಿಂಗಳ ಹಿಂದೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡಲು ಬಂದ ಸರಳ ಆದರೆ ಖಡಕ್ ಅಧಿಕಾರಿ. ಮುಂದೆ ಇವರ ಕಾರ್ಯವೈಖರಿಗೆ ತಾಲ್ಲೂಕಿನ ಜನತೆ ಖುಷಿಯಾಗಿದ್ದಾರೆ. ಕಂದಾಯ ಇಲಾಖೆ ಅಂದ್ರೆ ಲಂಚ.. ಹತ್ತಾರು ವರ್ಷ ಆದರೂ ಒಂದೇ ಒಂದು ಖಾತೆಯೂ ಆಗೋದಿಲ್ಲ. ಎಷ್ಟೇ ಅಲೆದರೂ ಜನರ ನೋವು ಜಾಸ್ತಿಯಾಗುತ್ತೇ ಹೊರತು… ಕಡಿಮೆ ಆಗೋದಿಲ್ಲ. ಅಧಿಕಾರಿ ಸಿಬ್ಬಂದಿ ಕೆಲಸ ಮಾಡೋದಿಲ್ಲ ಅನ್ನೋ ಸಾಮಾನ್ಯ ಆರೋಪಕ್ಕೆ ಅಪವಾದ ಎಂಬಂತೆ ಶ್ರೀನಿವಾಸ್ ತಮ್ಮ ಸಿಬ್ಬಂದಿ ಜೊತೆಗೆ ಸಕಲಸಜ್ಜಾಗಿ ಕೇವಲ 10 ತಿಂಗಳಲ್ಲಿ ಬರೊಬ್ಬರಿ 3 ಸಾವಿರ ಪೌತಿ ಖಾತೆ ಮಾಡಿಕೊಟ್ಟಿದ್ದಾರೆ.

ಪೌತಿ ಖಾತೆ ಎಂದರೆ, ಮರಣ ಹೊಂದಿದ ರೈತನ ಹೆಸರಿನಲ್ಲಿರುವ ಆಸ್ತಿಯನ್ನು ಆತನ ವಾರಸುದಾರ ಅಥವಾ ಕುಟುಂಬಸ್ಥರ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾವಣೆ ಮಾಡುವುದನ್ನು ಪೌತಿ ಖಾತೆ ಎನ್ನುತ್ತಾರೆ. ಉದಾಹರಣೆಗೆ -ಒಂದು ಮನೆಯಲ್ಲಿ ತಂದೆ, ಗಂಡ ಅಥವಾ ಅಜ್ಜ, ಅಜ್ಜಿ ಮರಣ ಹೊಂದಿದರೆ ಅವರ ಹೆಸರಿನಲ್ಲಿ ಇರುವ ಜಮೀನನ್ನು ವಾರಸುದಾರರು ಅಥವಾ ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ಮಾಡುವುದು.

ಅದ್ರಲ್ಲೂ ಕಳೆದ ಎರಡೇ ತಿಂಗಳಲ್ಲಿ ಬರೊಬ್ಬರಿ 2,300 ಪೌತಿ ಖಾತೆ ಮಾಡಿ ಮುಗಿಸಿ ಎರಡು ಮೂರು ದಶಕಗಳಿಂದ ಕಚೇರಿಗೆ ಅಲೆದು ಅಲೆದು ಸುಸ್ತಾಗಿದ್ದ ಜನರ ಮನೆ ಬಾಗಿಲಿಗೆ ದಾಖಲೆ ಪತ್ರ ಹಸ್ತಾಂತರ ಮಾಡುತ್ತಾ ಅವರ ನೋವಿಗೆ ಸ್ಪಂದಿಸಿದ್ದಾರೆ. ಈ ಮೂಲಕ ಖಾತೆಗಳಿಲ್ಲದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ.. ಸೇರಿದಂತೆ ರಾಜ್ಯ- ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಉಪಯೋಗ ಪಡೆಯಲಾಗದೆ ಜಮೀನು ಇದ್ದೂ, ಖಾತೆ ಇಲ್ಲದ ಕಾರಣವಾಗಿ ಯೋಜನೆ ಸವಲತ್ತು ಸಿಗದೆ ಪರದಾಡುತ್ತಿದ್ದ ರೈತರಿಗೆ ತಮ್ಮ ಅಧಿಕಾರಿಗಳ ಜೊತೆ ಹಳ್ಳಿಹಳ್ಳಿಗೆ ಅಲೆದು ದಾಖಲೆ ಪತ್ರಗಳನ್ನ ರೆಡಿ ಮಾಡಿ ಎಲ್ಲಾ ಸರ್ಕಾರಿ ಸವಲತ್ತು ಸಿಗುವಂತೆ ಮಾಡೋ ಮೂಲಕ ಎಲ್ಲರ ಮೆಚ್ಚಿಗೆ ಗಳಿಸಿದ್ದಾರೆ. ಈ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಅಂದ್ರೆ ಲಂಚಬಾಕರು ಎನ್ನುತ್ತಿದ್ದ ರೈತ ಸಂಘದ ಮುಖಂಡರೇ ಅಧಿಕಾರಿಗಳನ್ನ ಸನ್ಮಾನ ಮಡುವಂತಹ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ ಎನ್ನುತ್ತಾರೆ ರೈತ ಮುಖಂಡರಾದ ಯೋಗಣ್ಣ.

ಈ ಅಧಿಕಾರಿಯ ಸಾಧನೆಯನ್ನೂ ಓದಿ – ಒಬ್ಬ ತಹಶೀಲ್ದಾರ್ ತೆಗೆದುಕೊಂಡ ಗಟ್ಟಿ ನಿರ್ಧಾರದಿಂದ ಕೋಟ್ಯಂತರ ರೂ ಬೆಲೆಬಾಳುವ ಜಾಗ ಮತ್ತೆ ಶಾಲೆಗೆ ದಕ್ಕಿತು!

ಹತ್ತು ತಿಂಗಳ ಹಿಂದೆ ಅರಕಲಗೂಡು ತಾಲ್ಲೂಕಿಗೆ ತಹಶೀಲ್ದಾರ್ ಆಗಿ ಬಂದ ಬಳಿಕ ಒಂದೊಂದೆ ಸಮಸ್ಯೆ ಅರಿತ ನಿಸ್ಪೃಹ ಅಧಿಕಾರಿ ಶ್ರೀನಿವಾಸ್ ಅವರು ತಾಲ್ಲೂಕಿನಲ್ಲಿ ದಶಕಗಳಿಂದ ಆಗದೇ ಬಾಕಿ ಉಳಿದಿದ್ದ ಸಾವಿರಾರು ಪೌತಿ ಖಾತೆಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳನ್ನ ಪೂರೈಸೋ ಶಪಥ ಮಾಡಿಬಿಟ್ಟರು! ಅದಕ್ಕಾಗಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರ ತಂಡ ಕಟ್ಟಿಕೊಂಡು ತಿಂಗಳಾನುಗಟ್ಟಲೆ ಹಳ್ಳಿಹಳ್ಳಿ ಸುತ್ತಿ ಮಾಹಿತಿ ಸಂಗ್ರಹಿಸಿದರು.

ಒಂದು ವಂಶ ವೃಕ್ಷ ಮಾಡಿಸಲು ಕೋರ್ಟ್ ಕಚೇರಿ ಅಲೆಯಬೇಕಿದ್ದ ರೈತರ ತೊಡಕು ನಿವಾರಿಸಿ ತಾವೇ ಖುದ್ದು ವಿಚಾರಣೆ ಮೂಲಕ ಎಲ್ಲಾ ದಾಖಲೆ ರೆಡಿ ಮಾಡಿ ಕೆಲವೇ ದಿನಗಳಲ್ಲಿ ಅವರ ಜಮೀನಿಗೆ ಖಾತೆ ಆಗಿ, ಪಹಣಿ ಕೈ ಸೇರುವಂತೆ ಮಾಡಿದ್ದಾರೆ. ಹಳ್ಳಿ ಭೇಟಿ ವೇಳೆ ಸಿಕ್ಕ ಬಡ ಜನರ ನಿವೇಶನ ಸಮಸ್ಯೆ, ರಸ್ತೆ, ಕೆರೆ ಒತ್ತುವರಿ, ಅತಿವೃಷ್ಟಿಯಿಂದ ಹಾನಿಯಾಗಿದ್ದ 600ಕ್ಕೂ ಹೆಚ್ಚು ಮನೆಗಳ ಸರ್ವೆ ಕಾರ್ಯಮಾಡಿಸಿ ಹೊಸ ಮನೆ ನಿರ್ಮಾಣಕ್ಕೆ ಕ್ರಮ ಹೀಗೆ ಜನರ ಯಾವುದೇ ಕೆಲಸಗಳಿರಲಿ ವಿಳಂಬವಿಲ್ಲದೆ ಎಲ್ಲಾ ಸೌಲಭ್ಯಗಳನ್ನ ಅವರ ಮನೆ ಬಾಗಿಲಿಗೆ ತಲುಪುವಂತೆ ಮಾಡಿದ್ದಾರೆ.

ಇವರ ಸೇವಾ ನಿಷ್ಠೆ ಕಂಡ ಜನರೇ ಇಂದು ಅವರ ಕಚೇರಿಗೆ ಬಂದು ಕಂದಾಯ ಇಲಾಖೆ ಅಧಿಕಾರಿಗಳನ್ನ ಸನ್ಮಾನಿಸಿ ಅವರ ಕರ್ತವ್ಯ ನಿಷ್ಠೆಯನ್ನ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಮನೆಯೇ ಇಲ್ಲದೆ ಬೀದಿ ಬದಿಯಲ್ಲಿ ಆಶ್ರಯ ಪಡೆದಿದ್ದ ಅಂಧ ಮಹಿಳೆಯೊಬ್ಬರಿಗೆ ನಿವೇಶನದ ಜೊತೆಗೆ ಮನೆಯನ್ನೂ ಕೊಡಿಸಿದ ಈ ಅಧಿಕಾರಿಯ ಕೆಲಸ ನೆನೆದು, ತಮ್ಮ ಒಳಗಣ್ಣಿನಿಂದಲೇ ಆನಂದ ಭಾಷ್ಪ ಸುರಿಸಿದ್ದಾರೆ. ‘‘ಇದ್ದರೆ ಇಂತಹ ಅಧಿಕಾರಿ ಇರಬೇಕು’’ ಎಂದು ತಹಶೀಲ್ದಾರ್ ಸೇವೆಯನ್ನ ಮೆಚ್ಚಿ, ಫಲಾನುಭವಿ ಜಯಲಕ್ಷ್ಮಿ ಕೊಂಡಾಡುತ್ತಾರೆ. ಇದಕ್ಕಿಂತ ಇನ್ನೇನು ಬೇಕು ಆ ಅಧಿಕಾರಿಗೆ! (ವರದಿ: ಮಂಜುನಾಥ್ ಕೆಬಿ, ಟಿವಿ 9, ಹಾಸನ)

Also Read:
“86ನೇ‌ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರತಿನಿಧಿಗಳಾಗಲು ಆ್ಯಪ್ ಮೂಲಕ ನೊಂದಣಿ ಮಾಡ್ಕೊಳ್ಳಿ”