ಕಾಂಗ್ರೆಸ್ಗೆ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ: ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ 14 ತಿಂಗಳ ಕಾಲ ಸಿಎಂ ಆಗಿದ್ದರು. ಯಾರಿಂದಲಾದರೂ ವರ್ಗಾವಣೆಗೆ ಹಣ ಪಡೆದಿದ್ದರೆ ಹೇಳಲಿ. ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಕಾಂಗ್ರೆಸ್ಗೆ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ ಎಂದು ಕಿಡಿಕಾರಿದ್ದಾರೆ.
ಹಾಸನ, ಜನವರಿ 24: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 14 ತಿಂಗಳ ಕಾಲ ಸಿಎಂ ಆಗಿದ್ದರು. ಯಾರಿಂದಲಾದರೂ ವರ್ಗಾವಣೆಗೆ ಹಣ ಪಡೆದಿದ್ದರೆ ಹೇಳಲಿ. ನಾನು ಕ್ಷಮೆ ಕೇಳುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಹೇಳಿದ್ದಾರೆ. ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 13 ತಿಂಗಳಿಗೆ ಕುಮಾರಣ್ಣನನ್ನು ಸಿಎಂ ಸ್ಥಾನದಿಂದ ಯಾಕೆ ತೆಗೆದರು. 25 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದರು. ಕಾಂಗ್ರೆಸ್ಗೆ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಸ್ಥಾನದಿಂದ ನನ್ನನ್ನು ಯಾಕೆ ತೆಗೆದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದರು. ನನ್ನನ್ನು ಏಕೆ ಸೋಲಿಸಿದರು ಎಂದು ಹೇಳಲು ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಜೆಡಿಎಸ್ ಪಕ್ಷ ಹೆಚ್.ಡಿ.ದೇವೇಗೌಡರ ಆಸ್ತಿನಾ ಎಂದು ಹೇಳುತ್ತಾರೆ. ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬದ ಆಸ್ತಿ ಅಲ್ಲ. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದೇನೆ ಎಂದರು.
ಇವತ್ತು ರಾಜ್ಯ ಕೆಟ್ಟ ಸ್ಥಿತಿಗೆ ತಲುಪಿದೆ
ಏನಾಗಿದೆ ಈ ರಾಜ್ಯ ಇವತ್ತು. ಯಾವ ಸಿದ್ದರಾಮಯ್ಯ ಅವರ ಬಗ್ಗೆ ಎತ್ತರದಲ್ಲಿ ಯೋಚನೆ ಮಾಡಿದ್ದೆ. ಇವತ್ತು ಸಿದ್ದರಾಮಯ್ಯ ಕಾಲದಲ್ಲಿ ಯಾವ ಪರಿಸ್ಥಿತಿ ಇದೆ. ಇವತ್ತು ರಾಜ್ಯ ಕೆಟ್ಟ ಸ್ಥಿತಿಗೆ ತಲುಪಿದೆ. ನಾನು ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ. ಜನತಾದರ್ಶನದಲ್ಲಿ ಉಪಮುಖ್ಯಮಂತ್ರಿ ಮುಂದೆ ಮಹಿಳೆಯೊಬ್ಬರು ಅಧಿಕಾರ ವಿರುದ್ಧ ದೂರು ಹೇಳುತ್ತಾರೆ. ಕೂಡಲೇ ಅವರನ್ನು ಸಸ್ಪೆಂಡ್ ಮಾಡಿ ಅಂತಾರೆ. ಈ ದೇಶದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬರಬೇಕಾದರೆ ಕಾರಣ ಇವರೇ. ಕುಮಾರಸ್ವಾಮಿ ಸರ್ಕಾರ ಏಕೆ ತೆಗೆದರು. ಹದಿನೆಂಟು ಜನರನ್ನು ಬಾಂಬೆಗೆ ಯಾರು ಕಳುಹಿಸಿದವರು ಹೇಳಲಿ ಎಂದು ವಾಗ್ದಾಳಿ ಮಾಡಿದ್ದಾರೆ.
ಮೊಮ್ಮಗ ಪರ ಹೆಚ್ಡಿ ದೇವೇಗೌಡ ಪ್ರಚಾರ
ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಂಸದ ಪ್ರಜ್ವಲ್ ರೇವಣ್ಣರನ್ನು ಅಭ್ಯರ್ಥಿ ಎಂದು ಘೋಷಿಸಿರುವ ದೇವೇಗೌಡರು, ಮೊಮ್ಮಗ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ಎಂದು ಸಭೆಯಲ್ಲಿ ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಬಳಿಕ ಐದು ಗ್ಯಾರಂಟಿಗಳು ನಿಲ್ಲುತ್ತವೆ: ಮಾಜಿ ಸಚಿವ ಹೆಚ್.ಡಿ.ರೇವಣ್ಣ
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿ, ಲೋಕಸಭೆ ಚುನಾವಣೆ ಬಳಿಕ ಐದು ಗ್ಯಾರಂಟಿಗಳು ನಿಲ್ಲುತ್ತವೆ. ಐದು ಗ್ಯಾರಂಟಿಗಳು ಎಲ್ಲೆಲ್ಲಿ ಇವೆಯೋ, ಅಲ್ಲಲ್ಲೇ ನಿಂತುಕೊಳ್ಳುತ್ತವೆ. ಮಹಿಳೆಯರು ಬರುತ್ತಾರೆ ಅಂತಾ ಹಳ್ಳಿಗಳಿಗೆ ಬಸ್ಗಳನ್ನು ಬಿಡುತ್ತಿಲ್ಲ. ಲೋಕಸಭೆ ಚುನಾವಣೆ ಮುಗಿದ ತಕ್ಷಣವೇ ಗ್ಯಾರಂಟಿಗಳು ಖಾಲಿ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.