ಸ್ವಗ್ರಾಮದಲ್ಲಿ ಮೂರು ದೇವಸ್ಥಾನ ಕಟ್ಟಿಸಿರುವ ಹೆಚ್ಡಿಡಿ ಧರ್ಮಪತ್ನಿ: ಚೆನ್ನಮ್ಮರ ದೈವಭಕ್ತಿಗೆ ಹುಟ್ಟೂರೇ ಸಾಕ್ಷಿ!
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ, ಪರಮ ದೈವಭಕ್ತೆ ಚೆನ್ನಮ್ಮನವರು ನಿಧನರಾಗಿದ್ದು, ಅವರ ತವರು ಗ್ರಾಮ ಮುತ್ತಿಗೆಹಿರೇಹಳ್ಳಿಯಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ. ರಾಜಮನೆತನದ ಹಿನ್ನೆಲೆ ಇದ್ದರೂ ಸದಾ ದೈವಾರಾಧನೆಯಲ್ಲೇ ಮುಳುಗಿದ್ದ ಅವರು ಹುಟ್ಟೂರಲ್ಲಿ ಮೂರು ದೇವಸ್ಥಾನಗಳನ್ನು ಕಟ್ಟಿಸಿದ್ದರು. ಜಾತ್ರೆಯಲ್ಲಿ ಮೊದಲ ಪೂಜೆ ಸ್ವೀಕರಿಸುತ್ತಿದ್ದ ತಾಯಿಯ ಅಂತಿಮ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಊರಿಗೆ ತರಲು ಗ್ರಾಮಸ್ಥರು ವಿನಂತಿಸಿದ್ದಾರೆ.

ಮುಖ್ಯಾಂಶಗಳು
- ಪರಮ ದೈವಭಕ್ತೆ ಚೆನ್ನಮ್ಮನವರು ತಮ್ಮ ಹುಟ್ಟೂರಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ.
- ಐದು ಹಳ್ಳಿಗಳ ಜಂಟಿ ಜಾತ್ರೆಯಲ್ಲಿ ಇವರಿಗೇ ಮೊದಲ ಪೂಜೆಯ ಗೌರವವಿತ್ತು.
- ಗಂಡ ಪ್ರಧಾನಿಯಾದರೂ ಸಾರ್ವಜನಿಕ ಬೆಳಕಿಗೆ ಬಾರದೆ ದೇವರ ಕೋಣೆಯಲ್ಲೇ ಇರುತ್ತಿದ್ದರು.
ಹಾಸನ, ಜುಲೈ 19: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರು ಶನಿವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಗಂಡ ಮುಖ್ಯಮಂತ್ರಿಯಾದಾಗ, ದೇಶದ ಪ್ರಧಾನಿಯಾದಾಗಲೂ ಎಂದಿಗೂ ಸಾರ್ವಜನಿಕ ಬೆಳಕಿಗೆ ಬಂದವರಲ್ಲ ಚೆನ್ನಮ್ಮ. ತಾವಾಯಿತು, ತಮ್ಮ ದೇವರಾಯಿತು ಎಂದು ಸದಾ ದೈವಾರಾಧನೆಯಲ್ಲೇ ಮುಳುಗಿದ ಮಹಿಳೆ ಅವರು. ಸ್ವತಃ ಶ್ರೀಮಂತರ ಮನೆಯ ಮಗಳಾದರೂ ಎಳ್ಳಷ್ಟೂ ಅಹಂಕಾರ ಇಲ್ಲದವರು ಆಕೆ. ಚೆನ್ನಮ್ಮರ ಅಪಾರ ದೈವಭಕ್ತಿಗೆ ಅವರು ತಮ್ಮ ಹುಟ್ಟೂರಲ್ಲಿ ಕಟ್ಟಿಸಿದ 3 ದೇವಾಲಯಗಳೇ ಜೀವಂತ ಸಾಕ್ಷಿಯಾಗಿವೆ.
ಪ್ರತಿ ವರ್ಷದ ಜಾತ್ರೆಯಲ್ಲಿ ಚೆನ್ನಮ್ಮರದೇ ಮೊದಲ ಪೂಜೆ
ಚೆನ್ನಮ್ಮನವರ ಈ ಅಪಾರ ದೈವಭಕ್ತಿಗೆ ಅವರ ಹುಟ್ಟೂರಾದ ಹಾಸನ ತಾಲೂಕಿನ ಮುತ್ತಿಗೆಹಿರೇಹಳ್ಳಿ ಗ್ರಾಮವೇ ಸಾಕ್ಷಿ. ಹುಟ್ಟೂರಿನ ಮೇಲೆ ಅವಿಸ್ಮರಣೀಯ ಪ್ರೀತಿ ಹೊಂದಿದ್ದ ಅವರು, ಗ್ರಾಮದಲ್ಲಿ ಮೂರು ಸುಂದರ ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದ ಚೆನ್ನಾಂಬಿಕಾ ದೇವಾಲಯ. ಐದು ಗ್ರಾಮಗಳು ಸೇರಿ ವರ್ಷಕ್ಕೊಮ್ಮೆ ಸಡಗರದಿಂದ ಮಾಡುವ ಜಂಟಿ ಜಾತ್ರಾ ಮಹೋತ್ಸವದಲ್ಲಿ ಚೆನ್ನಮ್ಮನವರಿಂದಲೇ ದೇವರಿಗೆ ಮೊದಲ ಪೂಜೆ ಸಲ್ಲುತ್ತಿತ್ತು. ಅವರು ದೇವಸ್ಥಾನದ ಒಳಗೆ ಪ್ರಾರ್ಥನೆ ಸಲ್ಲಿಸುವಾಗ ಯಾರೊಬ್ಬರೂ ಒಳಗೆ ಹೋಗುತ್ತಿರಲಿಲ್ಲ. ಅವರು ಪೂಜೆ ಮುಗಿಸಿ ಭಕ್ತಿಯಿಂದ ಹೊರಬಂದ ಮೇಲಷ್ಟೇ ಇಡೀ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಪೂಜೆ ಸಲ್ಲಿಸುವ ಸಂಪ್ರದಾಯವಿತ್ತು. ಆದರೆ, ಅನಾರೋಗ್ಯದ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅವರು ತಮ್ಮ ಹುಟ್ಟೂರಿಗೆ ಬರಲು ಸಾಧ್ಯವಾಗಿರಲಿಲ್ಲ.
ರಾಜಮನೆತನದ ಹಿನ್ನೆಲೆ, ಧೀಮಂತ ವ್ಯಕ್ತಿತ್ವ!
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮನವರು ಕೇವಲ ರಾಜಕಾರಣಿಯ ಪತ್ನಿಯಷ್ಟೇ ಅಲ್ಲ, ಅವರು ಸ್ವತಃ ರಾಜಮನೆತನದ ಬೇರುಗಳನ್ನು ಹೊಂದಿದ್ದ ಅತ್ಯಂತ ಶ್ರೀಮಂತ ಹಾಗೂ ಪ್ರತಿಷ್ಠಿತ ಕುಟುಂಬದಿಂದ ಬಂದವರಾಗಿದ್ದರು. ಚೆನ್ನಮ್ಮನವರ ತಾತ ಪಟೇಲ್ ಸಬ್ಬೇಗೌಡರು ಅದೇ ತಾಲೂಕಿನ ಹರದನಹಳ್ಳಿಯ ರಾಜಮನೆತನದಲ್ಲಿ ಹುಟ್ಟಿ ಬೆಳೆದವರು. ಅವರ ಕುಟುಂಬಸ್ಥರ ಪ್ರಕಾರ, ಪಟೇಲ್ ಸಬ್ಬೇಗೌಡರು ಅಪಾರ ಶ್ರೀಮಂತರಾಗಿದ್ದರಲ್ಲದೆ, ಅತ್ಯಂತ ಜನಪ್ರಿಯ ದಾನಿಯಾಗಿದ್ದರು. ಬಡ ಕುಟುಂಬಗಳ ನೂರಾರು ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಂತು ವಿದ್ಯಾಭ್ಯಾಸ ಕೊಡಿಸಿದ್ದ ಹೆಗ್ಗಳಿಕೆ ಅವರದಾಗಿತ್ತು. ಇಷ್ಟೇ ಅಲ್ಲದೆ ಹೆಚ್.ಡಿ. ದೇವೇಗೌಡರ ವಿದ್ಯಾಭ್ಯಾಸಕ್ಕೂ ಇವರ ತಾತ ಪಟೇಲ್ ಸಬ್ಬೇಗೌಡರೇ ಪ್ರಮುಖ ಪ್ರೇರಕ ಶಕ್ತಿಯಾಗಿದ್ದರು ಮತ್ತು ಆರ್ಥಿಕವಾಗಿ ಸಹಾಯ ಮಾಡಿದ್ದರು.
ಇದನ್ನೂ ಓದಿ ಚೆನ್ನಮ್ಮನ ಅಂತಿಮ ದರ್ಶನ ಪಡೆದು ದೇವೇಗೌಡ, ಕುಮಾರಸ್ವಾಮಿಗೆ ಸಾಂತ್ವನ ಹೇಳಿದ ಸಿದ್ದರಾಮಯ್ಯ
ಪತಿಯ ರಾಜಕೀಯ ಬದುಕಿನ ಬೆನ್ನೆಲುಬು
ಶ್ರೀಮಂತ ಹಿನ್ನೆಲೆಯ ತವರಿನಿಂದ ಬಂದಿದ್ದರೂ ಚೆನ್ನಮ್ಮನವರಲ್ಲಿ ಎಂದಿಗೂ ಅಹಂಕಾರ ಇರಲಿಲ್ಲ. ಅವರು ಸದಾ ಬಡ ಕುಟುಂಬಗಳಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಅಪಾರ ದೈವಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅವರು, ತಮ್ಮ ಸಂಬಂಧಿಕರು ಹಾಗೂ ಸ್ನೇಹಿತರನ್ನು ಯಾವಾಗಲೂ ಅತ್ಯಂತ ಪ್ರೀತಿಯಿಂದ ತಮ್ಮ ಹತ್ತಿರದಲ್ಲೇ ಇಟ್ಟುಕೊಳ್ಳುತ್ತಿದ್ದರು.
ಚೆನ್ನಮ್ಮನವರು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಲಿಲ್ಲ. ಆದರೆ, ಹೆಚ್.ಡಿ. ದೇವೇಗೌಡರು ದೇಶದ ಅತ್ಯುನ್ನತ ಪ್ರಜಾಪ್ರಭುತ್ವ ಹುದ್ದೆಯಾದ ಪ್ರಧಾನಿ ಪಟ್ಟವನ್ನು ಏರುವವರೆಗಿನ ಅವರ ಸುದೀರ್ಘ ಹಾಗೂ ಹೋರಾಟದ ರಾಜಕೀಯ ಜೀವನದ ಏಳುಬೀಳುಗಳಲ್ಲಿ ಭದ್ರವಾದ ಬೆನ್ನೆಲುಬಾಗಿ ನಿಂತು ತಕ್ಕ ಸಾಥ್ ನೀಡಿದ್ದರು.
ತಾಯಿಯ ಅಗಲಿಕೆಗೆ ಕಣ್ಣೀರಿಟ್ಟ ತವರು ಗ್ರಾಮಸ್ಥರು
ಚೆನ್ನಮ್ಮನವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಮುತ್ತಿಗೆಹಿರೇಹಳ್ಳಿ ಗ್ರಾಮದಲ್ಲಿ ಶೋಕ ಸಾಗರವೇ ಹರಿದಿದೆ. ಸಂಬಂಧಿಕರು ಹಾಗೂ ಗ್ರಾಮಸ್ಥರು ತಮ್ಮ ನೆಚ್ಚಿನ ತಾಯಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಚೆನ್ನಮ್ಮನವರು ನಮ್ಮನ್ನು ಸ್ವಂತ ಮಕ್ಕಳಿಗಿಂತಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವರನ್ನು ಕಳೆದುಕೊಂಡು ಇಂದು ನಾವು ಅನಾಥರಾಗಿದ್ದೇವೆ ಎಂದು ಗ್ರಾಮದ ಮಹಿಳೆಯೊಬ್ಬರು ಕಣ್ಣೀರು ಸುರಿಸಿದ್ದಾರೆ.
ಗ್ರಾಮಸ್ಥರು ಹೇಳುವಂತೆ ಅನಾಥೆಯಾಗಿದ್ದ ಬಾಲಕಿಯೊಬ್ಬಳನ್ನು ಚೆನ್ನಮ್ಮನವರು ತಮ್ಮ ಮನೆಗೆ ಕರೆದೊಯ್ದು ಆಶ್ರಯ ನೀಡಿ ಬೆಳೆಸಿದ್ದರು. ಹಳ್ಳಿಯಿಂದ ಅವರ ಬೆಂಗಳೂರಿನ ಮನೆಗೆ ಯಾರು ಹೋದರೂ, ಯಾವುದೇ ಆಳು-ಕಾಳುಗಳನ್ನೂ ಬಿಡದೆ ಸ್ವತಃ ತಾವೇ ಕೈಯಾರೆ ಅಡುಗೆ ಮಾಡಿ ಬಡಿಸುತ್ತಿದ್ದರು. ಅಷ್ಟೇ ಅಲ್ಲದೆ, ಹಳ್ಳಿಯಿಂದ ಬಂದಿರುವ ಜನರಲ್ಲಿ ಹಣವಿದೆಯೋ ಇಲ್ಲವೋ ಎಂದು ಯೋಚಿಸಿ, ಮರಳಿ ಊರಿಗೆ ಹೋಗಲು ಬಸ್ ಚಾರ್ಜ್‌ಗೆ ಕೈತುಂಬಾ ಹಣ ಕೊಟ್ಟು ಕಳುಹಿಸುತ್ತಿದ್ದರು ಎಂದು ಗ್ರಾಮಸ್ಥರು ಸ್ಮರಿಸಿದ್ದಾರೆ.
ಇದನ್ನೂ ಓದಿ ದೇವೇಗೌಡರ ಪತ್ನಿ ಚೆನ್ನಮ್ಮನ ಮೇಲೆ ಆ್ಯಸಿಡ್ ದಾಳಿ ಎಲ್ಲಿ-ಯಾವಾಗ ಆಗಿತ್ತು ಗೊತ್ತಾ?
ಪಾರ್ಥಿವ ಶರೀರವನ್ನು ತವರಿಗೆ ತರುವಂತೆ ಗ್ರಾಮಸ್ಥರ ಕೊನೆಯ ಆಸೆ
ತಮ್ಮ ಊರಿನ ಮಗಳ ಮೇಲಿರುವ ಅಪಾರ ಗೌರವ ಹಾಗೂ ಪ್ರೀತಿಯಿಂದಾಗಿ ಮುತ್ತಿಗೆಹಿರೇಹಳ್ಳಿ ಗ್ರಾಮಸ್ಥರು ಮತ್ತು ಸಂಬಂಧಿಕರು ದೇವೇಗೌಡರ ಕುಟುಂಬಕ್ಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಚೆನ್ನಮ್ಮನವರ ಪಾರ್ಥಿವ ಶರೀರವನ್ನು ಒಮ್ಮೆ ಅವರ ತವರುಮನೆಗೆ ತರಬೇಕು. ನಾವು ಅವರಿಗೆ ಕೊನೆಯ ಪೂಜೆ ಸಲ್ಲಿಸಬೇಕು. ಕನಿಷ್ಠ 30 ನಿಮಿಷಗಳ ಕಾಲವಾದರೂ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಹಾಸನ ತಾಲೂಕಿನ ಮುತ್ತಿಗೆಹಿರೇಹಳ್ಳಿ ಗ್ರಾಮಸ್ಥರು ಅತ್ಯಂತ ಭಾವನಾತ್ಮಕವಾಗಿ ವಿನಂತಿಸಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sun, 19 July 26




