ಹಾಸನಾಂಬೆ ಪೂಜಾ ವಿವಾದಕ್ಕೆ ತೆರೆ; ಪ್ರತಿ ಶುಕ್ರವಾರ ಪೂಜೆ ಸಲ್ಲಿಸಲು ಸಭೆಯಲ್ಲಿ ನಿರ್ಧಾರ
ಕಳೆದ ಕೆಲ ದಿನಗಳಿಂದ ಹಾಸನಾಂಬೆ ದೇಗುಲದಲ್ಲಿ ನಡೆಯುತ್ತಿದ್ದ ಪೂಜೆ ಈಗ ಸ್ಥಗಿತವಾಗಿದೆ. ಈಗ ದೇಗುಲದ ಬಾಗಿಲಿಗೆ ಬೀಗ ಹಾಕಲಾಗಿದ್ದು, ವಾರಕ್ಕೆ ಒಮ್ಮೆ ಮಾತ್ರ ಪೂಜೆ ನಡೆಸಲು ತೀರ್ಮಾನ ಮಾಡಲಾಗಿದೆ.
ಹಾಸನ: ವರ್ಷಕ್ಕೊಮ್ಮೆ ದರ್ಶನ ಕೊಡುವ ಅಧಿದೇವತೆಯನ್ನು ನೋಡಲು ಹಾಸನಾಂಬೆಯ (Hasanamba) ಸನ್ನಿಧಿಗೆ ಭಕ್ತರು (Devotees) ವರ್ಷಕ್ಕೊಮ್ಮೆ ಮಾತ್ರ ಬರುತ್ತಾರೆ. ಆದರೆ ಇತ್ತೀಚೆಗೆ ಪ್ರತಿದಿನವೂ ಭಕ್ತರು ದೇಗುಲಕ್ಕೆ ಬರುತ್ತಿದ್ದರು. ಪ್ರತಿದಿನವೂ ಅದ್ಧೂರಿಯಾಗಿ ಪೂಜೆ ನಡೆಯುತ್ತಿತ್ತು. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ನಾಡಿನ ಶಕ್ತಿದೇವತೆ ಹಾಸನಾಂಬೆಯ ಸನ್ನಿಧಿಯಲ್ಲಿ ಅರ್ಚಕರು ದೇವಿಯ ಗರ್ಭಗುಡಿಯ ಬಾಗಿಲಿಗೆ ಹೊಂದಿಕೊಂಡಂತೆ ದೇವಿ ಸ್ವರೂಪಿ ಕಳಸಗಳನ್ನ ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದರು. ಇದು ಕೆಲ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ವಿವಾದದ ಸುಳಿಯಲ್ಲಿ ಸಿಲುಕಿತ್ತು. ಆದರೆ ಹಾಸನಾಂಬೆ ಪೂಜಾ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ.
ಹಾಸನಾಂಬೆ ಅಂದರೆ ವರ್ಷಕ್ಕೆ ಒಮ್ಮೆ ಮಾತ್ರ. ಅದೂ ಆಶ್ವಯುಜ ಮಾಸದಲ್ಲಿ ನಿಗದಿಯಾಗುವ ಮುಹೂರ್ತದಂತೆ ಐದು, ಏಳು, ಒಂಬತ್ತು ಹೀಗೆ ಒಂದೊಂದು ವರ್ಷ ಒಂದೊಂದು ರೀತಿಯಲ್ಲಿ ಸೀಮಿತ ದಿನಗಳಲ್ಲಿ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆದು ದೇವಿಯ ದರ್ಶನ ಸಿಗುತ್ತದೆ. ಇತ್ತೀಚೆಗೆ ಕೆಲ ದಿನಗಳಿಂದ ಹಾಸನಾಂಬೆ ದೇಗುಲದಲ್ಲಿ ಹೊಸ ಆಚರಣೆ ಆರಂಭದ ಬಗ್ಗೆ ಟಿವಿ9ನಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾಗುತ್ತಲೆ ದೇಗುಲಕ್ಕೆ ಬೇಟಿ ನೀಡಿದ್ದ ದೇವಾಲಯದ ಆಡಳಿತಾಧಿಕಾರಿ ಬಿಎ ಜಗದೀಶ್ ಅರ್ಚಕರಿಂದ ಮಾಹಿತಿ ಪಡೆದು ಸೋಮವಾರ ಸಭೆ ನಡೆಸಿದ್ದರು.
ಹಾಸನ ತಹಶೀಲ್ದಾರ್ ಸೇರಿ ಕಂದಾಯ ಅಧಿಕಾರಿಗಳೂ ಹಾಗು ಅರ್ಚಕರ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ದೇಗುಲದ ಬಾಗಿಲಿಗೆ ವಾರಕ್ಕೆ ಒಮ್ಮೆ ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದಿನಿಂದಲೂ ಇದೆ. ಆದರೆ ಈಗ ಅರ್ಚಕರು ವಿಶೇಷವಾಗಿ ಅಲಂಕಾರ ಮಾಡಿ ಪೂಜೆ ಸಲ್ಲಿಸೋಕೆ ಶುರುಮಾಡಿದ್ದು, ಭಕ್ತರ ಆಕ್ಷೇಪಕ್ಕೆ ಕಾರಣವಾಗಿತ್ತು. ಹಾಗಾಗಿ ತಕ್ಷಣ ಹೊಸ ರೀತಿಯ ಪೂಜೆ ಸ್ಥಗಿತಗೊಳಿಸಿ ಈ ಹಿಂದೆ ಇದ್ದಂತೆ ವಾರಕ್ಕೆ ಒಮ್ಮೆ ಪ್ರತಿ ಶುಕ್ರವಾರ ದೇವಿಯ ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಲು ಅರ್ಚಕರು ಒಪ್ಪಿಗೆ ಸೂಚಿಸಿದ್ದರಿಂದ ವಿವಾದ ಕೊನೆಯಾಗಿದೆ.
ಅಧಿಕಾರಿಗಳ ಸಭೆ ಬಳಿಕ ಹೊಸ ಪೂಜೆಗೆ ಬ್ರೇಕ್: ಕಳೆದ ಕೆಲ ದಿನಗಳಿಂದ ಹಾಸನಾಂಬೆ ದೇಗುಲದಲ್ಲಿ ನಡೆಯುತ್ತಿದ್ದ ಪೂಜೆ ಈಗ ಸ್ಥಗಿತವಾಗಿದೆ. ಈಗ ದೇಗುಲದ ಬಾಗಿಲಿಗೆ ಬೀಗ ಹಾಕಲಾಗಿದ್ದು, ವಾರಕ್ಕೆ ಒಮ್ಮೆ ಮಾತ್ರ ಪೂಜೆ ನಡೆಸಲು ತೀರ್ಮಾನ ಮಾಡಲಾಗಿದೆ. ಹಾಸನ ನಗರದಲ್ಲಿ ನೆಲೆಸಿರುವ ಹಾಸನಾಂಬೆ ಗರ್ಭಗುಡಿಯೊಳಗೆ ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ. ಉತ್ತರ ದಿಕ್ಕಿನಿಂದ ದಕ್ಷಿಣದ ಕಡೆಗೆ ವಿಹಾರಕ್ಕೆ ಬಂದ ಸಪ್ತಮಾತೃಕೆಯರು ಇಲ್ಲಿಯೇ ನೆಲೆದಿದ್ದರು ಎನ್ನುವುದು ಪುರಾಣದ ನಂಬಿಕೆ. ವೈಷ್ಣವಿ, ಕೌಮಾರಿ ಮಹೇಶ್ವರಿಯರು ಒಟ್ಟಿಗೆ ಇಲ್ಲಿ ನೆಲೆಸಿದ್ದರು. ಹಾಸನದಲ್ಲಿ ಶಕ್ತಿದೇವತೆ ನೆಲೆಸಿದ್ದರಿಂದ ಹಾಸನಾಂಬೆ ಎಂದು ಹೆಸರು ಬಂತು ಎನ್ನುವ ನಂಬಿಕೆ ಇದೆ. ಈ ದೇವತೆಗಳ ದರ್ಶನ ಭಾಗ್ಯ ವರ್ಷಕ್ಕೆ ಒಮ್ಮೆ ಮಾತ್ರ. ಹಾಗಾಗಿ ಈ ಕ್ಷೇತ್ರ ಮಹಿಮೆ ಬಗ್ಗೆ ಭಕ್ತರಲ್ಲಿ ಅಪಾರ ನಂಬಿಕೆ ಇದೆ.
ಕಳೆದ ಭಾನುವಾರ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದಂತೆ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲಿನ ಬಳಿ ಹೊಸ ಪೂಜಾ ವಿಧಾನ ಮಾಡಲಾಗಿದೆ ಎನ್ನುವ ಬಗ್ಗೆ ಮಾಹಿತಿ ಬಂದು ಪರಿಶೀಲನೆ ಮಾಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳು ಅರ್ಚಕರ ಸಭೆ ನಡೆಸಿ ಮಾಹಿತಿ ಕಲೆಹಾಕಿ ಈ ಹಿಂದೆ ಇದ್ದಂತೆ ವಾರಕ್ಕೆ ಒಮ್ಮೆ ಮಾತ್ರ ದೇಗುಲದ ಗರ್ಭಗುಡಿ ಬಾಗಿಲಿಗೆ ಪೂಜೆ ಸಲ್ಲಿಸಲು ನಿರ್ಧರಿಸಲಾಗಿದೆ. ಅರ್ಚಕರು ಕೂಡ ಇದಕ್ಕೆ ಇಪ್ಪಿಗೆ ನೀಡಿದ್ದಾರೆ ಅಂತ ಹಾಸನಾಂಬೆ ದೇಗುಲ ಆಡಳಿತಾಧಿಕಾರಿ ಬಿಎ ಜಗದೀಶ್ ತಿಳಿಸಿದರು.
ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ದೇವ. ಆದರೆ ಅರ್ಚಕರು ಹೊಸ ಸಂಪ್ರದಾಯ ಸೃಷ್ಟಿಸಿ ಪೂಜೆ ಶುರುಮಾಡಿದ್ದರು. ಈ ಬಗ್ಗೆ ಭಕ್ತರಿಗೂ ಅಚ್ಚರಿ ಉಂಟಾಗಿತ್ತು. ಈಗ ಅಧಿಕಾರಿಗಳು ಮದ್ಯ ಪ್ರವೇಶ ಮಾಡಿ ಎಲ್ಲವನ್ನು ಸರಿಪಡಿಸಿದ್ದಾರೆ. ಸನ್ನಿಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದು ಈ ಕ್ಷೇತ್ರ ಮತ್ತಷ್ಟು ಉನ್ನತಿಯಾಗಲು ಜಿಲ್ಲಾಡಳಿತ ಕ್ರಮ ವಹಿಸಲಿ ಅಂತ ಭಕ್ತರಾದ ವೇದಾವತಿ ಹೇಳಿದರು.
ವರದಿ: ಮಂಜುನಾಥ್ ಕೆಬಿ
ಇದನ್ನೂ ಓದಿ
ನಟಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು; ಇಲ್ಲಿದೆ ಒರಿಜಿನಲ್ ಫೋಟೋ
Gold and Silver Price: ಬೆಂಗಳೂರಿನಲ್ಲಿ ಚಿನ್ನ ದರ ಸ್ಥಿರ, ಬೆಳ್ಳಿ ಬೆಲೆ ಬಾರಿ ಇಳಿಕೆ