ಶಿಕ್ಷಣಕ್ಕೆ ಕೊಡೋಕೆ ದುಡ್ಡಿಲ್ಲ, ಸರ್ಕಾರ ಪಾಪರ್ ಆಗಿದೆ ಅಂತ ಹೇಳಿಬಿಡ್ಲಿ: ಜೆಡಿಎಸ್ ನಾಯಕ ರೇವಣ್ಣ ಸವಾಲು

ಈ ಸರ್ಕಾರದಲ್ಲಿ ಯಾರ ಮಾತನ್ನು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಮುಖ್ಯಮಂತ್ರಿಯ ಪತ್ರವನ್ನೇ ಅಧಿಕಾರಿಗಳು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ ಎಂದು ರೇವಣ್ಣ ಹರಿಹಾಯ್ದರು.

ಶಿಕ್ಷಣಕ್ಕೆ ಕೊಡೋಕೆ ದುಡ್ಡಿಲ್ಲ, ಸರ್ಕಾರ ಪಾಪರ್ ಆಗಿದೆ ಅಂತ ಹೇಳಿಬಿಡ್ಲಿ: ಜೆಡಿಎಸ್ ನಾಯಕ ರೇವಣ್ಣ ಸವಾಲು
ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 03, 2022 | 6:40 PM

ಹಾಸನ: ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಶಿಕ್ಷಣಕ್ಕೆ (Education) ಆದ್ಯತೆ ಕೊಡುತ್ತಿಲ್ಲ. ಬಡ ಮಕ್ಕಳಿಗೆ ನೆರವಾಗುವ ಯೋಜನೆಗಳಿಗೆ ಅನುದಾನ ಕಡಿತವಾಗುತ್ತಿದೆ. ಸರ್ಕಾರ ಪಾಪರ್ ಆಗಿದೆ ಎಂದು ಘೋಷಿಸಿಕೊಳ್ಳಲಿ. ಅವರಿಗೆ ಆಗದಿದ್ದರೆ ಹೇಳಲಿ, ನಾನೇ ಹಾಸ್ಟೆಲ್ ಮಾಡ್ತೀನಿ. ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡು ಮಕ್ಕಳಿಗೆ ಹಾಸ್ಟೆಲ್​ ಮಾಡ್ತೀನಿ ಎಂದು ಹಾಸನದಲ್ಲಿ ಜೆಡಿಎಸ್ ನಾಯಕ ಎಚ್​.ಡಿ.ರೇವಣ್ಣ  (HD Revanna) ಸವಾಲು ಹಾಕಿದರು. ಈ ಸರ್ಕಾರದಲ್ಲಿ ಯಾರ ಮಾತನ್ನು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಮುಖ್ಯಮಂತ್ರಿಯ ಪತ್ರವನ್ನೇ ಅಧಿಕಾರಿಗಳು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಇನ್ನು ರಾಜ್ಯದ ಜನರು ಬರೆದಿರುವ ಪತ್ರಗಳ ಕತೆ ಏನು ಎಂದು ಪ್ರಶ್ನಿಸಿದರು.

ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರವು ಈವರೆಗೆ ಪರಿಹಾರ ಕೊಟ್ಟಿಲ್ಲ. 2023 ಚುನಾವಣೆಗಾಗಿ ತಮ್ಮ ಶಾಸಕರ ಜೇಬು ತುಂಬಿಸೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ ಅಧಿಕಾರಿಗಳು ಕಾನೂನು ಮೀರಿ ಯಾವುದೇ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದ ಅವರು, ಎಚ್​.ಸಿ.ಮಹದೇವಪ್ಪ ಬಗ್ಗೆ ನಮಗೆ ಗೌರವ ಇದೆ. ಅವರು ನನ್ನೊಂದಿಗೆ ಹಾಗೂ ದೇವೇಗೌಡರೊಂದಿಗೆ ಗೌರವದಿಂದ ನಡೆದುಕೊಂಡಿದ್ದರು ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಬೆಂಗಳೂರು ಅನ್ನೋದು ರಸ್ತೆಗುಂಡಿಗಳ ಆಗರವಾಗಿದೆ. ಪಾಪಾ ಆ ಮೇಡಂ ಸತ್ರು, ರಸ್ತೆ ಗುಂಡಿಯಿಂದ ಮೃತಪಟ್ಟವರ ಕಡೆಯವರ ಗೊಳಾಟ ನೋಡಿದ್ರೆ ಕಣ್ಣೀರು ಬರುತ್ತೆ. ಇಂದು ರಾತ್ರಿ ಗುಂಡಿ ಮುಚ್ಚಿದ್ರೆ ನಾಳೆ ಮತ್ತೆ ಗುಂಡಿ ಆಗುತ್ತೆ ಎಂದು ಬೆಂಗಳೂರಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ್ದ ಬಹುತೇಕ ಯೋಜನೆಗಳಿಗೆ ಈ ಸರ್ಕಾರ ತಡೆಯೊಡ್ಡಿದೆ. ಅದೆಷ್ಟು ದಿನ ದ್ವೇಷದ ರಾಜಕಾರಣ ಮಾಡುತ್ತಾರೋ ಮಾಡಲಿ. ಮುಂದೆ ನಮಗೆ ಅವಕಾಶ ಸಿಕ್ಕಾಗ ಕೆಲಸ ಮಾಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಸರ್ಕಾರ ರಾಗಿ, ಭತ್ತ ಖರೀದಿ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರು ಎಪಿಎಂಸಿಗಳಿಗೆ ಅಲೆಯುತ್ತಿದ್ದಾರೆ. ಸರ್ಕಾರ ರೈತರ ಹಿತ ಕಾಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದರು.

ಹಾಸನ ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳು ಮತ್ತು ರಾಜಕಾರಣಿಗಳು ಭೂ ಮಾಫಿಯಾ ಮಾಡುತ್ತಿದ್ದಾರೆ. ದಾಖಲೆಗಳನ್ನು ತಿದ್ದಲಾಗುತ್ತಿದೆ. ಜಿಲ್ಲಾದಿಕಾರಿಯೂ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಮುಂದೆ ಸಂಕಷ್ಟ ಎದುರಾಗಬಹುದು. ಈ ಸರ್ಕಾರಕ್ಕೆ ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ. ಹೊಳೆನರಸೀಪುರ ಪದವಿ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್ ಬೇಕೆಂದು ವಿನಂತಿಸಿದ್ದೆ. ಸಿಎಂ ಎರಡು ದಿನ ಸಮಯ ಕೇಳಿದ್ದಾರೆ. ಹೀಗಾಗಿ ಸುಮ್ಮನಾಗಿದ್ದೀನಿ. ಅವ್ರು ಏನೂ ಮಾಡಿಲ್ಲ ಎಂದಾದರೆ ನಾನು ಸುಮ್ನೆ ಕೂರ್ತೀನಾ, ಮುಂದೆ ಅಧಿವೇಶನ ಶುರುವಾಗುತ್ತೆ ಆಗ ಮಾತಾಡುತ್ತೇನೆ ಎಂದು ಎಚ್ಚರಿಸಿದರು.

ಅಧಿಕಾರ ಸಿಕ್ಕಾಗ ನೀವು ಸರಿಯಾಗಿ ಕೆಲಸ ಮಾಡದಿದ್ದರೆ 2023ರ ಚುನಾವಣೆಯಲ್ಲಿ 40 ಸೀಟ್ ತಗೊಳ್ಥೀರಿ. ಅದಕ್ಕೆ ಈಗ್ಲೇ ಎಚ್ಚೆತ್ತುಕೊಳ್ಳಿ. ಒಳ್ಳೇ ಕೆಲಸ ಮಾಡಿ. 120-130 ಸ್ಥಾನ ಅಂತೀರಾ. ಅದೆಲ್ಲಾ ಕನಸು ತಿಳ್ಕೊಳಿ. ಇನ್ನೂ ಐದು ವರ್ಷ ನೀವೆ ಆಡಳಿತ ಮಾಡಿದ್ರೂ ನಮಗೇನು ಸಮಸ್ಯೆ ಇಲ್ಲ ಎಂದೂ ಅವರು ನುಡಿದರು.

ಇದನ್ನೂ ಓದಿ: ಕೆಲ ಅಧಿಕಾರಿಗಳು ಜೈಲಿಗೆ ಹೋಗುವ ಕಾಲ ಸದ್ಯದಲ್ಲೇ ಬರುತ್ತದೆ: ಮಾಜಿ ಸಚಿವ ಹೆಚ್​ಡಿ ರೇವಣ್ಣ

ಇದನ್ನೂ ಓದಿ: ಬೆಂಗಳೂರು: ವಿಧಾನ ಪರಿಷತ್ ಸದಸ್ಯರಾಗಿ ಸೂರಜ್ ರೇವಣ್ಣ ಪ್ರಮಾಣ ವಚನ ಸ್ವೀಕಾರ