
ಹಾಸನ, ಆಗಸ್ಟ್ 24: ಈ ಹಿಂದೆಯೂ ಕೆಲ ಜಿಲ್ಲಾಧಿಕಾರಿಗಳ ಜೊತೆಗೆ ಸಂಘರ್ಷದ ಮೂಲಕ ಸುದ್ದಿಯಾಗಿದ್ದ ಮಾಜಿ ಸಚಿವ, ಶಾಸಕ ಹೆಚ್.ಡಿ. ರೇವಣ್ಣ ಈಗ ಮತ್ತೆ ಅಂತಹುದ್ದೇ ವಿಚಾರದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಯ ಮೀಸಲಾತಿ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ರೇವಣ್ಣ ಹಾಗೂ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನಡುವೆ ತೀವ್ರ ಜಟಾಪಡಿಯೇ ನಡೆದಿದ್ದು, ಶಾಸಕರ ನಡೆಗೆ ಕಾಂಗ್ರೆಸ್ನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ನಡುವೆಯೂ ರೇವಣ್ಣ ತಮ್ಮ ನಡೆ ಸಮರ್ಥಿಸಿಕೊಂಡಿದ್ದರೆ, ಡಿಸಿ ಕೂಡ ತಮ್ಮ ಮೇಲಿನ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಮೀಸಲಾತಿ ಪಟ್ಟಿ ಪ್ರಕಟಣೆಯಲ್ಲಿ ನಿಯಮ ಗಾಳಿಗೆ ತೂರಲಾಗಿದೆ ಎಂಬ ರೇವಣ್ಣ ಅವರ ಆರೋಪಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕೆ.ಎಸ್. ಲತಾಕುಮಾರಿ ಅವರು ಉತ್ತರಿಸಿದ್ದು, ನಾವು ನಿಯಮ ಮೀರಿದ್ದರೆ ಕಾನೂನಿನಲ್ಲಿ ಅವಕಾಶವಿದೆ, ಪತ್ರ ಬರೆಯಬಹುದಿತ್ತು. ಆದರೆ ಇಷ್ಟು ತುಚ್ಛವಾಗಿ, ಮಾನಸಿಕವಾಗಿ ನೋವಾಗುವಂತೆ ಮಾತನಾಡುವುದು ಹಿರಿಯ ರಾಜಕಾರಣಿಗೆ ಶೋಭೆಯಲ್ಲ. ಡಿಸಿ ಸ್ಥಾನದಲ್ಲಿದ್ದರೂ ಗೌರವ ಸಿಗುವುದಿಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದರು. ಹೀಗಿದ್ದರೂ ತಮ್ಮ ಹೇಳಿಕೆಯನ್ನು ರೇವಣ್ಣ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಅವರು IAS ಮಾಡಿದ್ರೆ ಜನ ನನ್ನನ್ನು 6 ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಜನರಿಗೆ ನೋವಾದಾಗ ನಾನು ಮಾತನಾಡಲೇಬೇಕು. ತಹಶೀಲ್ದಾರ್ ಯಾವ ಆಧಾರದ ಮೇಲೆ ಪಟ್ಟಿ ಕಳುಹಿಸಿದರು? ಎಲ್ಲಾ ತಹಶೀಲ್ದಾರ್‌ಗೆ ಪ್ರಪೋಸಲ್ ಕಳುಹಿಸಲು ಯಾರು ಹೇಳಿದ್ರು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ: ಕಣ್ಣೀರಿಟ್ಟು ತಿರುಗೇಟು ನೀಡಿದ ಡಿಸಿ ಲತಾ ಕುಮಾರಿ!
ಒಬ್ಬ ರಾಜಕಾರಣಿ ಹೇಳಿದಂತೆ ಮೀಸಲಾತಿ ಪಟ್ಟಿ ನಿಗದಿ ಮಾಡಿದ್ದಾರೆ. ಸಮಯ ಬಂದಾಗ ಅವರ ಹೆಸರು ಹೇಳುತ್ತೇನೆ ಎಂದೂ ಹೇಳಿರುವ ರೇವಣ್ಣ, ಡಿಸಿಗೆ ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ನಾನು ಕಳೆದ ಒಂದೂವರೆ ವರ್ಷದಿಂದ ಅವರ ಕಚೇರಿಗೆ ಹೋಗಿಲ್ಲ. 30 ವರ್ಷ ರಾಜಕೀಯದಲ್ಲಿ ಎಂತೆಂಥಾ ಅಧಿಕಾರಿ ನೋಡಿದ್ದೇನೆ. ನಾನು ಐಎಎಸ್ ಓದಿಲ್ಲ, ಅವರಷ್ಟು ಅನುಭವವಿಲ್ಲ. ಅವರಿಗೆ ನೋವಾಗದಂತೆ ಹೇಗೆ ನಡೆದುಕೊಳ್ಳಬೇಕೆಂದು ಹೇಳಲಿ. ನಾನೊಬ್ಬ ಆರ್ಡಿನರಿ ಶಾಸಕ, ಜನರ ಕೂಲಿ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಜಿಲ್ಲಾಧಿಕಾರಿಗಳಿಗೆ ರೇವಣ್ಣ ಟಾಂಗ್ ನೀಡಿದ್ದಾರೆ.
ಮತ್ತೊಂದೆಡೆ ಗ್ರಾಮ ಪಂಚಾಯತಿ ಚುನಾವಣೆಗೆ ಅವೈಜ್ಞಾನಿಕವಾಗಿ ಮೀಸಲಾತಿ ನಿಗದಿ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಹಾಸನದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿದೆ. ಎನ್‌ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ರಸ್ತೆ ತಡೆ ನಡೆಸಿದ ಘಟನೆಯೂ ನಡೆದಿದೆ. ಸರ್ಕಾರದ ಅಧಿಸೂಚನೆಯಂತೆ ಗ್ರಾ.ಪಂ. ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಿಗದಿ ಮಾಡಿರುವ ಮೀಸಲಾತಿಯನ್ನು ಕೂಡಲೇ ರದ್ದು ಮಾಡಿ ವೈಜ್ಞಾನಿಕವಾಗಿ ಮೀಸಲಾತಿ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ.
ಇನ್ನು ಮೀಸಲಾತಿ ಬಗ್ಗೆ ಹೆಚ್.ಡಿ.ರೇವಣ್ಣ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಹಾಸನ ಸಂಸದ ಶ್ರೇಯಸ್ ಪಟೇಲ್, ಇದು ಸಂಪೂರ್ಣವಾಗಿ ಚುನಾವಣಾ ಆಯೋಗ ಮಾಡುವ ಕೆಲಸ. ಯಾರೂ ಇದರಲ್ಲಿ ಮೂಗು ತೂರಿಸುವಂತಿಲ್ಲ. ಕಾನೂನು ಬದ್ದವಾಗಿ ಮಾಡಿಲ್ಲ ಎಂದರೆ ಅಹವಾಲು ಸಲ್ಲಿಸಲಿ. ಹಿರಿಯ, ಅನುಭವಿ ರಾಜಕಾರಣಿಯಾಗಿರುವ ರೇವಣ್ಣ ಜಿಲ್ಲಾಧಿಕಾರಿ ಸ್ಥಾನಕ್ಕೆ ಗೌರವ ಕೊಡಬೇಕು. ಹಿಂದಿನ ಜಿಲ್ಲಾಧಿಕಾರಿ, ಎಸ್ಪಿ ಬಗ್ಗೆಯೂ ಹೀಗೆಯೇ ಮಾತನಾಡಿದ್ದರು. ಮಹಿಳೆಯರಿಗೆ ಕನಿಷ್ಠ ಗೌರವವನ್ನೂ ಕೊಡಲಿಲ್ಲ ಎಂದರೆ ಜನರೇ ತೀರ್ಮಾನ ಮಾಡಬೇಕು. ಜಿಲ್ಲಾಧಿಕಾರಿ ಬಗ್ಗೆ ಅಸಂಬದ್ಧವಾಗಿ ಮಾತನಾಡುವುದನ್ನು ಖಂಡಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.