ಹಾಸನ: ಕಾಫಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದ ಮಳೆ, ಕೊಳೆ ರೋಗಕ್ಕೆ ತುತ್ತಾದ ಕಾಫಿ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಕಾಲಿಕ ಮಳೆಯಿಂದ ಕಾಫಿ, ಅಡಿಕೆ, ಕಾಳುಮೆಣಸು ಬೆಳೆಗಳು ಹಾನಿಗೊಳಗಾಗಿವೆ. ಕೊಳೆ ರೋಗದ ಹರಡುವಿಕೆಯಿಂದ ಫಸಲು ನಷ್ಟವಾಗುತ್ತಿದೆ. ಕಳೆದ ವರ್ಷದ ಅತಿವೃಷ್ಟಿಯಿಂದ ಚೇತರಿಸಿಕೊಳ್ಳುತ್ತಿದ್ದ ರೈತರು ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರೀ ಮಳೆಯಿಂದಾಗಿ ರಸ್ತೆಗಳು ಕುಸಿತ ಸೇರಿದಂತೆ ಹಲವು ಸಮಸ್ಯೆಗಳನ್ನು ರೈತರು ಎದುರಿಸುವಂತಾಗಿದೆ.

ಹಾಸನ, ಜೂನ್ 05: ಈ ವರ್ಷ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಮಳೆ (rain) ಕಾಫಿ ಬೆಳೆಗಾರರನ್ನ (Coffee growers) ಸಂಕಷ್ಟಕ್ಕೆ ಸಿಲುಕಿಸಿದೆ. ಅವಧಿಗೆ ಮುನ್ನವೇ ಆರ್ಭಟಿಸಿದ ಮುಂಗಾರು, ಮೇ ಅಂತ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದು ಫಸಲು ಕಟ್ಟೋ ವೇಳೆಯಲ್ಲೇ ಕೊಳೆ ರೋಗ ಅಂಟಿ ಕಾಫಿಗೆ ಕಂಟಕ ಎದುರಾಗಿದೆ. ಕಾಳುಮೆಣಸು, ಅಡಿಕೆ ಸೇರಿ ಹಲವು ಬೆಳೆಗಳಿಗೆ ಮಳೆ ಆಘಾತ ತಂದಿದೆ. ಇನ್ನು ಕಾಫಿಗೆ ಉತ್ತಮ ಬೆಳೆ ಇರುವ ಸಂದರ್ಭದಲ್ಲೇ ಮಳೆಯಿಂದ ಹಾನಿಯಾಗುವ ಆತಂಕ ಎದುರಾಗಿರುವುದು ಬೆಳೆಗಾರರನ್ನು ಕಂಗೆಡಿಸಿದೆ.
ಕಾಫಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದ ಮಳೆ
ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಸುರಿದ ಮುಂಗಾರು ಮಳೆ ದೊಡ್ಡ ಅನಾಹುತ ಸೃಷ್ಟಿಸಿದೆ. ಸತತ 10 ದಿನಗಳು ಸುರಿದ ಭಾರೀ ಮಳೆಗೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನ ಕಾಫಿ ತೋಟಗಳಲ್ಲಿ ಕಾಫಿ ಫಸಲು ತೆನೆಕಟ್ಟುವ ವೇಳೆಯಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಹೆಚ್ಚಾದ ಶೀತದಿಂದ ಗೊಂಚಲು ಕೊಳೆ ರೋಗದಿಂದ ಕಾಫಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ.
ಇದನ್ನೂ ಓದಿ: ಶಿರಾಡಿ, ಚಾರ್ಮಾಡಿ, ಶಿರೂರಿನಲ್ಲಿ ಭೂಕುಸಿತ: ಉತ್ತರ ಕನ್ನಡದಲ್ಲಿ ಹೆದ್ದಾರಿಯ 19 ಕಡೆ ವಾಹನ ನಿಲುಗಡೆ ಬಂದ್
ಕಳೆದ 20 ವರ್ಷಗಳಲ್ಲೇ ಅತ್ಯಧಿಕ ಕಾಫಿ ರೇಟ್ ಪಡೆದು ಕಳೆದ ವರ್ಷದ ಅತಿವೃಷ್ಟಿಯಿಂದ ಉಳಿದ ಬೆಳೆಯಿಂದಲೇ ಒಂದಷ್ಟು ಲಾಭ ನೋಡಿದ್ದ, ಬೆಳೆಗಾರರು ಈ ವರ್ಷವಾದರೂ ಉತ್ತಮ ಬೆಲೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ಇರುವಾಗಲೇ ಮೊದಲ ಮಳೆಯೇ ದೊಡ್ಡ ಹೊಡೆತ ನೀಡಿರುವುದು ಬೆಳೆಗಾರರ ನಿದ್ದೆಗೆಡಿಸಿದೆ.
ಶೇಕಡ 50 ರಷ್ಟು ಬೆಲೆ ನಷ್ಟ
ಕಳೆದ ವರ್ಷ ಸುದೀರ್ಘ ಅವಧಿಗೆ ಮಳೆ ಸುರಿದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಕಾಫಿ ಬೆಳೆಗೆ ದೊಡ್ಡ ಆಘಾತವಾಗಿ ಶೇಕಡ 50 ರಷ್ಟು ಬೆಲೆ ನಷ್ಟವಾಗಿತ್ತು. ಆದರೆ ಉತ್ತಮ ಬೆಲೆಯಿಂದ ಕಾಫಿ ಬೆಳೆಗಾರರು ಕೊಂಚ ನಿರಾಳವಾಗಿದ್ದರು. ಈ ವರ್ಷ ಮಾತ್ರ ಮೇ ಅಂತ್ಯದಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆಯಿಂದ ಬೆಳೆಗಾರರು ಆಘಾತಗೊಂಡಿದ್ದಾರೆ. ಇನ್ನೊಂದೆಡೆ ಕಾಳು ಮೆಣಸಿಗೂ ಮಳೆ ಆಘಾತ ನೀಡಿದೆ. ಮಳೆ ಹೆಚ್ಚಾಗಿದ್ದರಿಂದ ಗಿಡದಲ್ಲಿಯೇ ಮೆಣಸು ಬಳ್ಳಿಗಳು ಕೊಳೆಯುತ್ತಿವೆ. ಅಡಿಕೆ ಫಸಲು ಕೂಡ ಸಂಪೂರ್ಣ ನಾಶವಾಗಿದೆ.
ಜಿಲ್ಲೆಯ ಆಲೂರು, ಬೇಲೂರು, ಸಕಲೇಶಪುರದಲ್ಲಿ ಅತಿ ಹೆಚ್ಚಿನ ಮಳೆ ಸುರಿದು ಅಪಾರ ಪ್ರಮಾಣದ ಹಾನಿಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದೆಡೆ ಶಿರಾಡಿಘಾಟ್ನಲ್ಲಿ ರಸ್ತೆ ಕುಸಿತ, ಮತ್ತೊಂದೆಡೆ ಬೆಳೆನಾಶ, ಮಲೆನಾಡಿ ಭಾಗದ ಜನರು ಅಕ್ಷರಶಃ ಮೊದಲ ಮಳೆಗೆ ಹೈರಾಣಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮಂಗಳೂರು ವಾಹನ ಸವಾರರೇ ಗಮನಿಸಿ: ಶಿರಾಡಿ ಘಾಟ್ ರಸ್ತೆಯ ಹಲವೆಡೆ ಭೂಕುಸಿತ
ಒಟ್ಟಿನಲ್ಲಿ ಕಳೆದ ವರ್ಷ ಕೂಡ ಅತಿವೃಷ್ಟಿಯಿಂದ ಉಂಟಾಗಿದ್ದ ಹಾನಿಯಿಂದ ಉಳಿದ ಬೆಳೆಗಳಿಂದ ಹೇಗೋ ಒಂದಷ್ಟು ಆದಾಯ ಮಾಡಿಕೊಂಡಿದ್ದ ಕಾಫಿ ಬೆಳೆಗಾರರು, ಈ ವರ್ಷ ಮೊದಲ ಮಳೆಗೆ ಹಾನಿಯಾಗುವ ಆತಂಕದಲ್ಲಿದ್ದು, ಇನ್ನೂ ಮೂರ್ನಾಲ್ಕು ತಿಂಗಳು ಸುರಿಯುವ ಮಳೆ ಮತ್ತಿನ್ನೇನು ಅವಾಂತರ ಮಾಡುತ್ತೆ ಎಂಬ ಆತಂಕದಲ್ಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







