ದೇಶದಲ್ಲಿ 3ನೇ ಸ್ಥಾನ ಹೊಂದಿರುವ ಹಾಸನ ಹಾಲು ಒಕ್ಕೂಟದಿಂದ ಇನ್ಮುಂದೆ ಅತ್ಯಾಧುನಿಕ ಸುವಾಸಿತ ಹಾಲು ಉತ್ಪಾದನೆ!
ಹಾಸನದ ಬಿಎಂ ರಸ್ತೆಯಲ್ಲಿರುವ ಹಾಸನ ಹಾಲು ಒಕ್ಕೂಟದ ಪ್ರಾಂಗಣದಲ್ಲೇ ಈ ಅತ್ಯಾಧುನಿಕ ಘಟಕ ಕಾರ್ಯಾರಂಭಕ್ಕೆ ಸಿದ್ಧಗೊಂಡಿದೆ. ಬಹುತೇಕ ಯಂತ್ರೋಪಕರಣಗಳೇ ಇಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಲಿದ್ದು, ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಸಾಮರ್ಥ್ಯ ಈ ಘಟಕದ ವಿಶೇಷವಾಗಿದೆ.
ಹಾಸನ: ದೇಶದಲ್ಲಿಯೇ ಮೂರನೇ ಸ್ಥಾನಗಳಿಸಿರುವ ಹಾಸನ ಹಾಲು ಒಕ್ಕೂಟದ ನಂದಿನಿ ಬ್ರಾಂಡ್ ಈಗ ಮತ್ತೊಂದು ಹಿರಿಮೆಗೆ ಪಾತ್ರವಾಗುತ್ತಿದೆ. ದೇಶದಲ್ಲಿಯೇ ಮೂರನೇ ಹಾಗೂ ದಕ್ಷಿಣ ಭಾರತದ ಮೊಟ್ಟ ಮೊದಲ, ಸುವಾಸಿತ ಹಾಲು ಉತ್ಪಾದನಾ ಘಟಕ ಬರೊಬ್ಬರಿ 167 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಅಕ್ಟೋಬರ್ ತಿಂಗಳಿನಿಂದ ಕಾರ್ಯಾರಂಭ ಮಾಡಲಿದೆ. ಈಗಾಗಲೆ ಪ್ರಾಯೋಗಿಕ ಚಾಲನೆ ನೀಡಲಾಗಿದ್ದು, ಇಟಲಿ ಹಾಗೂ ಜರ್ಮನಿಯಿಂದ ಬಂದಿರುವ ಅತ್ಯಾಧುನಿಕ ಕಂಪ್ಯೂಟರೈಸ್ಡ್ ಯಂತ್ರಗಳ ಸಹಾಯದಿಂದ ಗಂಟೆಗೆ 30 ಸಾವಿರ ಬಾಟಲ್ ಹಾಲು ತಯಾರಾಗಲಿದ್ದು, ನಿತ್ಯ ಒಂದು ಲಕ್ಷ ಲೀಟರ್ ಹೆ್ಚ್ವುವರಿ ಹಾಲನ್ನು ಬಳಕೆ ಮಾಡಿ ರೈತರಿಗೆ ಲಾಭಮಾಡಿಕೊಡುವ ಮಹತ್ವದ ಯೋಜನೆ ರೈತರಿಗೆ ಗೌರಿಗಣೇಶ ಹಬ್ಬದ ಕೊಡುಗೆಯಾಗಿ ಲಭ್ಯವಾಗುತ್ತಿದೆ.
ಕರ್ನಾಟಕ ರಾಜ್ಯ ಹಾಲು ಒಕ್ಕೂಟದ ಅಡಿಯಲ್ಲಿ ಕೆಲಸ ಮಾಡುವ ಹಾಸನ ಹಾಲು ಒಕ್ಕೂಟ ಮತ್ತೊಂದು ಮಹತ್ತರ ಸಾಧನೆ ಮಾಡಿ ದೇಶದಲ್ಲಿಯೇ ಹಿರಿಮೆಗೆ ಪಾತ್ರವಾಗುತ್ತಿದೆ. ದೇಶದಲ್ಲಿಯೇ ಮೂರನೇ ಹಾಗೂ ದಕ್ಷಿಣ ಭಾರತದ ಮೊತ್ತ ಮೊದಲ ಸುವಾಸಿತ ಹಾಲು ಉತ್ಪಾದನಾ ಘಟಕ ಇದೇ ಅಕ್ಟೋಬರ್ನಿಂದ ಚಾಲನೆ ಆಗಲಿದೆ. ಈಗಾಗಲೆ ಘಟಕಕ್ಕೆ ಪ್ರಯೋಗಿಕ ಚಾಲನೆ ನೀಡಲಾಗಿದ್ದು, ಉತ್ಘಾಟನೆಗೆ ಅಂತಿಮ ಹಂತದ ಸಿದ್ಧತೆ ಆಗುತ್ತಿದೆ.
ವರ್ಷದ ಹಿಂದೆಯೇ ಚಾಲನೆ ಸಿಗಬೇಕಿದ್ದ ಘಟಕ ಕೊರೊನಾ ಕಾರಣದಿಂದ ಇದೀಗ ಕಾರ್ಯಾರಂಭ ಮಾಡುತ್ತಿದೆ. 167 ಕೋಟಿ ವೆಚ್ಚದಲ್ಲಿ ಇಟಲಿ ಹಾಗೂ ಜರ್ಮನಿಯಿಂದ ಆಮದು ಮಾಡಿಕೊಂಡ ಅತ್ಯಾಧುನಿಕ ಕಂಪ್ಯೂಟರೈಸ್ಡ್ ಯಂತ್ರೊಪಕರಣಗಳು ಘಟಕದಲ್ಲಿದ್ದು, ಒಂದು ಗಂಟೆಗೆ 30 ಸಾವಿರ ಬಾಟಲ್ನಂತೆ ದಿನಕ್ಕೆ 5 ಲಕ್ಷದ 40 ಸಾವಿರ ಬಾಟಲ್ ಹಾಲು ತಯಾರಾಗಲಿದೆ. ಬಾದಾಮ್ ಮಿಲ್ಕ್, ಪಿಸ್ತಾ, ಸ್ಟ್ರಾಬೆರಿ, ವೆನಿಲ್ಲಾ, ಕಾರಾಮೆಲ್, ಬನಾನ, ಮ್ಯಾಂಗೋ, ಪೆಪ್ಪರ್, ಚಾಕೋ, ಕೇಸರ್, ಸೋಯಾ ಹೀಗೆ ಹತ್ತಾರು ಫ್ಲೇವರ್ಗಳಲ್ಲಿ ಸುವಾಸಿತ ಹಾಲು ಉತ್ಪಾದನೆಯಾಗಿ ಬಾಟಲ್ ಸೇರಲಿದೆ.
ಜೊತೆಗೆ ಹೆಚ್ಚುದಿನ ಬಾಳಿಕೆ ಬರಬರದ ಪ್ಲೇನ್ ಹಾಲು, ಮಸಾಲ ಮಜ್ಜಿಗೆ, ಲಸ್ಸಿ ಕೂಡ ಇಲ್ಲಿ ಉತ್ಪಾದನೆ ಆಗಲಿದ್ದು, ದೇಶದ 25 ರಾಜ್ಯಗಳಲ್ಲಿ ಈ ಹಾಲಿನ ಉತ್ಪನ್ನಗಳು ಮಾರಾಟ ಆಗಲಿದೆ ಎಂದು ಮಾಹಿತಿ ನೀಡಿರುವ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ಈ ಘಟಕ ಉದ್ಘಾಟನೆ ಜೊತೆಗೆ ಹಾಸನ ಹಾಲು ಒಕ್ಕೂಟ ಹೊಸದಾಗಿ 60 ಎಕರೆ ಪ್ರದೇಶದಲ್ಲಿ 500 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಕೂಡ ಮಾಡುತ್ತಿದ್ದು, ಇದರಿಂದ ಈ ಭಾಗದ ಜಿಲ್ಲೆಗಳ ರೈತರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ಹಾಸನದ ಬಿಎಂ ರಸ್ತೆಯಲ್ಲಿರುವ ಹಾಸನ ಹಾಲು ಒಕ್ಕೂಟದ ಪ್ರಾಂಗಣದಲ್ಲೇ ಈ ಅತ್ಯಾಧುನಿಕ ಘಟಕ ಕಾರ್ಯಾರಂಭಕ್ಕೆ ಸಿದ್ಧಗೊಂಡಿದೆ. ಬಹುತೇಕ ಯಂತ್ರೋಪಕರಣಗಳೇ ಇಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಲಿದ್ದು, ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮಾಡುವ ಸಾಮರ್ಥ್ಯ ಈ ಘಟಕದ ವಿಶೇಷವಾಗಿದೆ. ಶುಚಿ, ರುಚಿಗೆ ಆಧ್ಯತೆ ನೀಡಿ, ಸುರಕ್ಷಿತವಾದ ಗುಣಮಟ್ಟದ ಹಲವು ಬಗೆಯ ಸುವಾಸಿತ ಹಾಲು ದೇಶದಾದ್ಯಂತ ಮಾರಾಟಕ್ಕೆ ಸಿದ್ದಗೊಳ್ಳಲಿದೆ.
ಹಾಸನ ಹಾಲು ಒಕ್ಕೂಟದಲ್ಲಿ ನಿತ್ಯ ಒಂದು ಲಕ್ಷ ಲೀಟರ್ ಹೆಚ್ಚುವರಿ ಹಾಲನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಲಾಗುತ್ತಿತ್ತು, ಈಗ ಈ ಘಟಕ ಸಿದ್ಧವಾಗಿರುವುದರಿಂದ ಈ ಹೆಚ್ಚುವರಿ ಹಾಲು ಸಮರ್ಫಕವಾಗಿ ಬಳಕೆ ಆಗಲಿದೆ. ಇದರಿಂದ ಹೆಚ್ಚುವರಿ ಲಾಭ ಕೂಡ ಸಿಗಲಿದೆ. ಈ ಲಾಭದಲ್ಲಿ ರೈತರಿಗೆ ಹೆಚ್ಚಿನ ನೆರವು ಸಿಗಲಿದೆ ಎನ್ನುವ ಇಲ್ಲಿನ ಆಡಳಿತಮಂಡಳಿ, ದೇಶದ 25 ರಾಜ್ಯಗಳಲ್ಲಿ ನಮ್ಮ ನಂದಿನಿ ಬ್ರಾಂಡ್ನ ಈ ಸುವಾಸಿತ ಹಾಲು ಮಾರಾಟ ಆಗಲಿದ್ದು, ಇದರಿಂದ ನಮ್ಮ ಬ್ರಾಂಡ್ಗೂ ಹೆಚ್ಚು ಜನಪ್ರಿಯ ಆಗಲಿದೆ. ಇದೆಲ್ಲವೂ ರೈತರ ಹೈನುಗಾರಿಕೆಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಹಾಸನ ಹಾಲು ಒಕ್ಕೂಟದ ಮುಖ್ಯಸ್ಥ ತಿಳಿಸಿದ್ದಾರೆ.
ಒಟ್ಟಿನಲ್ಲಿ ಒಂದಿಲ್ಲೊಂದು ಹೊಸ ಯೋಜನೆಗಳ ಮೂಲಕ ದೇಶದಲ್ಲಿಯೇ ಗಮನ ಸೆಳೆಯುವ ಹಾಸನ ಹಾಲು ಒಕ್ಕೂಟ ಈಗ ಮತ್ತೆ ಇಡೀ ದೇಶದ ಹೈನುಗಾರಿಕೆ ವಲಯ ತಿರುಗಿ ನೋಡುವ ಸಾಧನೆ ಮಾಡಿದೆ. ನೂರಾರು ಕೋಟಿ ವೆಚ್ಚದ ಹೊಸ ಘಟಕ ನಿರ್ಮಾಣದ ಮೂಲಕ ಹೆಚ್ಚುವರಿಯಾಗುತ್ತಿದ್ದ ಹಾಲನ್ನು ಬಳಸಿ ಮೌಲ್ಯವರ್ದನೆಗೊಳಿಸಲಾಗುತ್ತಿದೆ. ಇನ್ನು ಇದರಿಂದ ಬಂದ ಬಂದ ಲಾಭವನ್ನು ರೈತರಿಗೆ ನೀಡಲು ತಯಾರಾಗಿದ್ದು, ಗೌರಿ ಗಣೇಶ ಹಬ್ಬದ ಈ ಸಂದರ್ಭದಲ್ಲಿ ಇದು ಅನ್ನದಾತರಿಗೆ ಹಬ್ಬದ ಕೊಡುಗೆ ನೀಡಿದಂತಾಗಿದೆ.
ವರದಿ: ಮಂಜುನಾಥ್ ಕೆ. ಬಿ
ಇದನ್ನೂ ಓದಿ: ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಚಿಂತನೆ: ಉಸ್ತುವಾರಿ ಸಚಿವ ಭೈರತಿ ಬಸವರಾಜ್