ದಯಾಮರಣ ಕೋರಿ ಹಾಸನದ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಂದ ರಾಷ್ಟ್ರಪತಿ, ಸಿಎಂಗೆ ಪತ್ರ
ರಾಜ್ಯ ಸರ್ಕಾರದ ಇಬ್ಬಂದಿ ನೀತಿಗೆ ಹಾಸನದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.
ಹಾಸನ: ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಇಲಾಖೆ ಜ. 14ರಂದು ಹೊರಡಿಸಿರುವ ಅವೈಜ್ಞಾನಿಕ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಹಲವು ದಿನಗಳಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ದಯಾಮರಣ ಕೋರಿ ಹಾಸನದ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಕೆಲವು ದಿನಗಳಿಂದ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಅಂಚೆ ಕಚೇರಿಗೆ ಪತ್ರ ಪೋಸ್ಟ್ ಮಾಡಿದ್ದಾರೆ. ರಾಜ್ಯ ಸರ್ಕಾರದ ಇಬ್ಬಂದಿ ನೀತಿಗೆ ಹಾಸನದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸೋಮವಾರದಿಂದ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಅತಿಥಿ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.
ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿದ್ದು, ಪ್ರತಿಭಟನೆ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಸರ್ಕಾರ ಅತಿಥಿ ಉಪನ್ಯಾಸಕರ ಆಗ್ರಹಗಳನ್ನು ಪರಿಗಣಿಸಿದ್ದು, ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಉಪನ್ಯಾಸಕರ ಗೌರವಧನದಲ್ಲಿ ಶೇ. 100ರಷ್ಟು ಹೆಚ್ಚಳವೂ ಸೇರಿದೆ. ಅರ್ಹ ಅತಿಥಿ ಉಪನ್ಯಾಸಕರ ಸಂಬಳ 2ರಿಂದ 3 ಪಟ್ಟು ಹೆಚ್ಚಳ ಮಾಡಲಾಗಿದೆ. 11ರಿಂದ ರೂ.13 ಸಾವಿರ ಸಂಬಳ ಪಡೆಯುತ್ತಿದ್ದ ಅತಿಥಿ ಉಪನ್ಯಾಸಕರು ಇನ್ನು ಮುಂದೆ ರೂ. 32 ಸಾವಿರದವರೆಗೆ ವೇತನ ಪಡೆಯಲಿದ್ದಾರೆ. ಆದರೂ ಪ್ರತಿಭಟನೆ ನಡೆಸಿದರೆ ಹೇಗೆ? ಎಂದು ಸಚಿವರು ಪ್ರಶ್ನಿಸಿದ್ದರು.
ನೇರ ನೇಮಕಾತಿಯಾದ ಉಪನ್ಯಾಸಕರಿಗೆ ಮಾತ್ರ ಸೇವಾ ಭದ್ರತೆ ಇರಲಿದೆ. 8 ಗಂಟೆ ಮಾತ್ರ ಪಾಠ ಮಾಡುತ್ತಿದ್ದ ಉಪನ್ಯಾಸಕರಿಗೆ ಇನ್ನಷ್ಟು ಪಾಠಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. 13 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಕೇವಲ ನಾಲ್ಕೂವರೆ ಸಾವಿರ ಮಂದಿ ಮಾತ್ರ ಯುಜಿಸಿ ಪ್ರಕಾರ ಅರ್ಹತೆ ಹೊಂದಿದ್ದಾರೆ. 9 ಸಾವಿರ ಮಂದಿ ಅರ್ಹತೆ ಇರುವವರು ಮತ್ತು 5 ಸಾವಿರ ಮಂದಿ ಅರ್ಹತೆ ಇಲ್ಲವಾದರು ಕೂಡ ನೇಮಕ ಆಗಲಿದ್ದಾರೆಂದು ಸಚಿವ ಅಶ್ವಥ್ ನಾರಾಯಣ ಹೇಳಿದ್ದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನಿಸಿದ ಸರ್ಕಾರ; ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನ
ಶೀಘ್ರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆ ಸಾಧ್ಯತೆ: ಸಚಿವರ ಜೊತೆ ಸಂಘದ ಪದಾಧಿಕಾರಿಗಳ ಸಭೆ