ಹಾಸನ: ಕಾಫಿತೋಟದಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಕಾಡಾನೆ ದಾಳಿ; ಓರ್ವನ ಕಾಲುಮುರಿತ, ಮತ್ತೋರ್ವನಿಗೆ ಗಾಯ
ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕನೋರ್ವ ಒಂಟಿ ಸಲಗದ ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಜ.04 ರಂದು ನಡೆದಿತ್ತು. ಇದೀಗ ಸಕಲೇಶಪುರ(Sakleshpur) ತಾಲ್ಲೂಕಿನ ಕಲ್ಕುಂದ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ.
ಹಾಸನ, ಫೆ.07: ಜನವರಿ 4 ರಂದು ಬೇಲೂರು ತಾಲ್ಲೂಕಿನ ಮತ್ತಾವರದ ಬಳಿ ದಾಳಿ ಮಾಡಿ ಕಾರ್ಮಿಕನ ಬಲಿಪಡೆದಿದ್ದ ಒಂಟಿ ಸಲಗ, ಇದೀಗ ಹಾಸನ ಜಿಲ್ಲೆಯ ಸಕಲೇಶಪುರ(Sakleshpur) ತಾಲ್ಲೂಕಿನ ಕಲ್ಕುಂದ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ(Wild Elephant) ಮಾಡಿದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವನ ಕಾಲುಮುರಿತವಾಗಿದ್ದು, ಮತ್ತೋರ್ವನಿಗೆ ಗಾಯವಾಗಿದೆ. ರಮೇಶ್ ಹಾಗೂ ಶಾಶ್ವತ್ ಕಾಡಾನೆ ದಾಳಿಯಿಂದ ಗಾಯಗೊಂಡವರು. ಕೂಡಲೇ ಇಬ್ಬರನ್ನು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರು
ಕಾಫಿ ಕೊಯ್ಲು ಮಾಡಿದ್ದು, ಚೀಲಗಳನ್ನು ತರಲು ಹೋಗಿದ್ದ ರಮೇಶ್ ಹಾಗೂ ಶಾಶ್ವತ್ ಎಂಬುವವರ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿತ್ತು. ಕಾಡಾನೆ ದಾಳಿ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಓಡಿ ಹೋಗುವಾಗ ಬಿದ್ದು ಶಾಶ್ವತ್ ಗಾಯಗೊಂಡಿದ್ದಾನೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ವಿಚಾರಿಸಿದ್ದಾರೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯದ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಮಲೆನಾಡು ಭಾಗದ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಹಂತಕ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವಂತೆ ಜನರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಾಡಾನೆ ದಾಳಿಯಿಂದ ಕಾರ್ಮಿಕನ ಸಾವು, ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್
ಒಂಟಿ ಸಲಗದ ದಾಳಿಗೆ ಬಲಿಯಾಗಿದ್ದ ಅಮಾಯಕ ಕಾರ್ಮಿಕ
ಜಿಲ್ಲೆಯ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಜನವರಿ 04 ರಂದು ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕ ಕಾರ್ಮಿಕ ವಸಂತ್ (45), ಒಂಟಿ ಸಲಗದ ದಾಳಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದ. ಒಂಟಿ ಸಲಗ ವಸಂತ್ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದ. ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮೃತದೇಹ ಮೇಲೆತ್ತಲು ಬಿಡದೆ ಸ್ಥಳೀಯರು ಅಹೋರಾತ್ರಿ ಪ್ರತಿಭಟನೆ ಶುರುಮಾಡಿದ್ದರು. ಇಲ್ಲಿ ನಿರಂತರವಾಗಿ ಆನೆ ದಾಳಿಗಳಿಗೆ ಜನರು ಬಲಿಯಾಗುತ್ತಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ಶವವನ್ನು ಸ್ಥಳದಿಂದ ಮೇಲೆತ್ತಲು ಬಿಡಲ್ಲ ಎಂದು ಜನರು ಪ್ರತಿಭಟನೆ ಆರಂಭಿಸಿದ್ದರು. ಆದರೀಗ ಸ್ವಲ್ಪದರಲ್ಲೇ ಓರ್ವ ಕಾರ್ಮಿಕ ಬಚಾವ್ ಆಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Wed, 7 February 24