ಹುಣಸೂರು ತಾಲೂಕಿನಲ್ಲಿ ಮುಂದುವರೆದ ಕಾಡಾನೆ ದಾಳಿ: ಮಹಿಳೆಗೆ ಗಾಯ, ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ
ಮೈಸೂರು ಜಿಲ್ಲೆಯ ಜನ ಕಾಡಾನೆ ದಾಳಿಯಿಂದ ರೋಸಿ ಹೋಗಿದ್ದಾರೆ. ಮೇಲಿಂದ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಂತೂ ಹುಣಸೂರು ತಾಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಜನರು ಜೀವ ಭಯದಲ್ಲಿ ಓಡಾಡುತ್ತಿದ್ದಾರೆ.
ಮೈಸೂರು, ಜನವರಿ 13: ಮೈಸೂರು (Mysore) ಜಿಲ್ಲೆಯ ಜನ ಕಾಡಾನೆ ದಾಳಿಯಿಂದ ರೋಸಿ ಹೋಗಿದ್ದಾರೆ. ಮೇಲಿಂದ ಮೇಲೆ ಕಾಡಾನೆಗಳು ದಾಳಿ ಮಾಡುತ್ತಿದ್ದರೂ ಅರಣ್ಯ ಇಲಾಖೆ (Forest Department) ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲಂತೂ ಹುಣಸೂರು (Hunasur) ತಾಲೂಕಿನಲ್ಲಿ ಕಾಡಾನೆ ಹಾವಳಿಯಿಂದ ಜನರು ಜೀವ ಭಯದಲ್ಲಿ ಓಡಾಡುತ್ತಿದ್ದಾರೆ. ಇದೀಗ ಮತ್ತೊಂದು ಕಾಡಾನೆ ದಾಳಿ ಪ್ರಕರಣ ನಡೆದಿದ್ದು, ರೈತ ಮಹಿಳೆ ಗಾಯಗೊಂಡಿದ್ದಾರೆ. ಹುಣಸೂರು ತಾಲೂಕು ಕಿಕ್ಕೇರಿ ಕಟ್ಟೆ ಗ್ರಾಮದ ರೈತ ಮಹಿಳೆ ಜಮೀನಿಗೆ ಹೋಗುತ್ತಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ. ಮೀನಾಕ್ಷಿ ಕಾಡಾನೆ ದಾಳಿಯಿಂದ ಗಾಯಗೊಂಡ ರೈತ ಮಹಿಳೆ.
ಆನೆ ದಾಳಿ ಮಾಡುತ್ತಿದ್ದಂತೆ, ಸ್ಥಳದಲ್ಲೇ ಇದ್ದ ಮೀನಾಕ್ಷಿ ಪತಿ ಜೋರಾಗಿ ಕೂಗಿಕೊಂಡಿದ್ದಾರೆ. ಧ್ವನಿ ಕೇಳುತ್ತಿದ್ದಂತೆ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಜನರು ಬರುತ್ತಿದ್ದಂತೆ ಆನೆ ಓಡಿ ಹೋಗಿದೆ. ಬಳಿಕ ಸಾರ್ವಜನಿಕರು ಗಾಯಾಳು ಮೀನಾಕ್ಷಿ ಅವನರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡಾನೆ ಹಾವಳಿಯಿಂದ ಬೆಳೆ ನಾಶ
ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಇದೇ ಹುಣಸೂರು ತಾಲೂಕಿನ ನಾಗರಹೊಳೆ ಉದ್ಯಾನ ವನದಂಚಿನ ಬಿಲ್ಲೇನಹೊಸಹಳ್ಳಿ ಗ್ರಾಮದ ಚಿನ್ನದೊರೆ ಗ್ರಾಮದಲ್ಲಿ ಕಾಡಾನೆ ಹಾವಳಿಗೆ ರಾಗಿ, ಮುಸುಕಿನಜೋಳ, ಮರಗೆಣಸು ಬೆಳೆ ನಾಶವಾಗಿತ್ತು. ರೈತ ವೆಂಕಟೇಶ್ಗೆ ಸೇರಿದ ಬೆಳೆ ನಾಶವಾಗಿತ್ತು. ಕಾಡಾನೆಗಳು ಬೆಳೆಯನ್ನು ತಿಂದು, ತುಳಿದು ನಾಶ ಮಾಡಿತ್ತು.
ಇದನ್ನೂ ಓದಿ: ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಕಾಡಾನೆಗೆ ಸೆರೆ ಕಾರ್ಯಾಚರಣೆ ಮತ್ತೆ ಆರಂಭ
ಜೊತೆಗೆ ವಾಸದ ಮನೆ ಮೇಲೂ ದಾಳಿ ಮಾಡಿದೆ. ಮನೆ ಅಂಗಳದಲ್ಲಿ ಡ್ರಮ್ ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿತ್ತು. ಆನೆ ಹಾವಳಿಯಿಂದ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಕಾಡಾನೆಗಳು ಕೂಟದ ಕಡ ಹಾಗೂ ತಟ್ಟೆ ಹಳ್ಳ ಪಾರೆ ಭಾಗದಿಂದ ಬಂದಿವೆ ಎನ್ನಲಾಗಿದೆ. ರೈಲ್ವೆ ಬ್ಯಾರಿಕೇಡ್ ಬೇಲಿ ದಾಟಿ ಗಜಪಡೆ ಬಂದು ದಾಂದಲೆ ಮಾಡುತ್ತಿದ್ದವು.
ಕಾಡಾನೆ ದಾಳಿ ವ್ಯಕ್ತಿ ಸಾವು
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಇದೇ ಹುಣಸೂರು ತಾಲೂಕು ವೀರನಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆ ಆನೆ ತುಳಿತಕ್ಕೆ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಹಾಡಿ ನಿವಾಸಿ ವಸಂತ್(36) ಮೃತದುರ್ದೈವಿ. ಮೃತ ವಸಂತ್ ಅವರು ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಡಾನೆ ದಾಳಿ ನಡೆಸಿತ್ತು. ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:57 am, Sat, 13 January 24