AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ: ಬೇಲೂರಿನ ಮತ್ತಾವರದಲ್ಲಿ ಘಟನೆ

ಕಾರ್ಮಿಕ ವಸಂತ್ (45) ಗುರುವಾರ ಸಂಜೆ ಕೆಲಸ ಮುಗಿಸಿ ತನ್ನ ಆಪ್ತನ ಜೊತೆಗೆ ವಾಪಸ್ ಮರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿದ ಒಂಟಿ ಸಲಗ ವಸಂತ್ ಮೇಲೆ ದಾಳಿ ಮಾಡಿದೆ. ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ.

ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ: ಬೇಲೂರಿನ ಮತ್ತಾವರದಲ್ಲಿ ಘಟನೆ
ಕಾಡಾನೆ ದಾಳಿ ಪ್ರದೇಶಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮಂಜುನಾಥ ಕೆಬಿ
| Updated By: Ganapathi Sharma|

Updated on:Jan 05, 2024 | 10:08 AM

Share

ಹಾಸನ, ಜನವರಿ 4: ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕನೋರ್ವ ಒಂಟಿ ಸಲಗದ ದಾಳಿಗೆ (Wild Elephant Attack)ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಹಾಸನ (Hassan) ಜಿಲ್ಲೆ ಬೇಲೂರು (Belur) ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಸಂಭವಿಸಿದೆ. ನಿರಂತರವಾಗಿ ಆನೆ ದಾಳಿಗಳಿಗೆ ಜನರು ಬಲಿಯಾಗುತ್ತಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ವರೆಗೆ ಶವವನ್ನು ಸ್ಥಳದಿಂದ ಮೇಲೆತ್ತಲು ಬಿಡಲ್ಲ ಎಂದು ಜನರು ಧರಣಿ ಆರಂಭಿಸಿದ್ದಾರೆ. ನಿಮ್ಮ ಪರಿಹಾರ ಬೇಡ ನಮ್ಮ ಸಮಸ್ಯೆಗೆ ಪರಿಹಾರ ಕೊಡಿ ಎಂದು ಜನ ಪಟ್ಟು ಹಿಡದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಜನರಿಗೆ ಕಂಟಕವಾಗಿದ್ದ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ದಾರುಣವಾಗಿ ಮೃತಪಟ್ಟಿದ್ದ. ಇದಾಗಿ ಒಂದು ತಿಂಗಳಿಗೆ ಸರಿಯಾಗಿ ಒಂಟಿ ಸಲಗದ ದಾಳಿಗೆ ಅಮಾಯಕ ಕಾರ್ಮಿಕನೋರ್ವ ಬಲಿಯಾಗಿದ್ದು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ದಿನೇ ದಿನೆ ಹೆಚ್ಚಾಗುತ್ತಿರೋದಕ್ಕೆ ಸಾಕ್ಷಿ ಹೇಳುತ್ತಿದೆ.

ಕಾರ್ಮಿಕ ವಸಂತ್ (45) ಗುರುವಾರ ಸಂಜೆ ಕೆಲಸ ಮುಗಿಸಿ ತನ್ನ ಆಪ್ತನ ಜೊತೆಗೆ ವಾಪಸ್ ಮರಳುತ್ತಿದ್ದರು. ಈ ವೇಳೆ ಏಕಾಏಕಿ ಕಾಣಿಸಿದ ಒಂಟಿ ಸಲಗ ವಸಂತ್ ಮೇಲೆ ದಾಳಿ ಮಾಡಿದೆ. ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಸ್ಥಳದಿಂದ ಓಡಿ ಅಪಾಯದಿಂದ ಪಾರಾಗಿದ್ದಾರೆ. ಸಂಜೆ ಸುಮಾರು 6-30ರ ವೇಳೆಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮೃತದೇಹ ಮೇಲೆತ್ತಲು ಬಿಡದೆ ಸ್ಥಳೀಯರು ಅಹೋರಾತ್ರಿ ಪ್ರತಿಭಟನೆ ಶುರುಮಾಡಿದ್ದರು.

ಮನೆಯಿಂದ ಆಚೆ ಹೋಗೋ ಕಾರ್ಮಿಕ ವಾಪಸ್ ಜೀವಂತವಾಗಿ ಮರಳೋ ಯಾವುದೇ ಗ್ಯಾರಂಟಿ ಇಲ್ಲ, ನಿಮ್ಮ ಪರಿಹಾರ ನಮಗೆ ಬೇಡ. ಓರ್ವ ಮನುಷ್ಯ ಬಲಿಯಾದ್ರೆ 15 ಲಕ್ಷ ಬೆಲೆ ಕಟ್ಟುತ್ತೀರಿ. ಒಂದು ವರ್ಷಕ್ಕೆ ಮನುಷ್ಯ 15 ಲಕ್ಷ ದುಡಿಯುತ್ತಾನೆ. ಅಂತಹವರ ಜೀವವೇ ಹೋದರೂ ಸರ್ಕಾರ ಗಮನ ಹರಿಸಿಲ್ಲ. ಹಾಗಾಗಿಯೇ ಶವ ಇಲ್ಲೇ ಇಟ್ಟು ಹೋರಾಟ ಮಾಡುತ್ತೇವೆ. ಬೆಳಿಗ್ಗೆಯೇ ಅಧಿಕಾರಿಗಳು ಬರಲಿ, ನಮ್ಮ ಜೀವ ಹಿಂಡುತ್ತಿರೊ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು, ಆಲೂರು, ಸಕಲೇಶಪುರ ತಾಲ್ಲೂಕಿನಲ್ಲಿ ಬೀಡು ಬಿಟ್ಟಿರುವ ಆನೆಗಳ ಹಿಂಡು ಕಾಫಿತೋಟ, ಗ್ರಾಮ, ಭತ್ತ ಗದ್ದೆಗಳಲ್ಲಿ ಓಡಾಡುತ್ತಾ ಬೆಳೆ ಹಾನಿ ಜೊತೆಗೆ ಜೀವ ಹಾನಿಯನ್ನೂ ಮಾಡುತ್ತಿವೆ. ಕಾಡಾನೆಗಳ ಹಾವಳಿಯಿಂದ ಆಗುತ್ತಿರೋ ಮಾನವ ಪ್ರಾಣ ಹಾನಿಯನ್ನು ತಡೆಯಲೆಂದೇ ಸರ್ಕಾರ ಹಾಲಿ ಇದ್ದ ಆರ್.ಆರ್.ಟಿ ಟೀಂ ಗಳ ಜೊತೆಗೆ ಇಟಿಎಫ್ ಕಾಡಾನೆ ಕಾರ್ಯಾಚರಣೆ ಪಡೆ ಹೆಸರಿನಲ್ಲಿ ಹೊಸ ಟೀಂ ರಚನೆ ಮಾಡಿ ಜನರಿಗೆ ಆನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡುತ್ತಾ ಮಾನವ ಪ್ರಾಣ ಹಾನಿ ತನಡೆಯಲು ಪ್ರಯತ್ನ ಮಾಡಿತ್ತು. ಆದರೆ ಇದ್ಯಾವುದೂ ಇದೀಗ ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಇದನ್ನೂ ಓದಿ: ರೈತರನ್ನು ಅಟ್ಟಾಡಿಸಿಕೊಂಡು ಹೋದ 30 ಕಾಡಾನೆಗಳ ಹಿಂಡು: ಅನ್ನದಾತ ಬಚಾವ್

ಕಳೆದ 20 ವರ್ಷಗಳಲ್ಲಿ ಜಿಲ್ಲೆಯಲ್ಲಿ 80ಕ್ಕೂಹೆಚ್ಚು ಜನರು ಬಲಿಯಾಗಿದ್ದರೆ. ಕಾಡಾನೆಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಲಿಯಾಗಿವೆ.

ಘಟನಾ ಸ್ಥಳಕ್ಕೆ ಬೇಲೂರು ಶಾಸಕ ಭೇಟಿ

ಘಟನಾ ಸ್ಥಳಕ್ಕೆ ಬೇಲೂರು ಶಾಸಕ ಎಚ್​​ಕೆ ಸುರೇಶ ಹಾಗೂ ಎಸ್ಪಿ ಮೊಹಮ್ಮದ್ ಸುಜಿತ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದ್ದಾರೆ. ಜನರ ಮನವೊಲಿಕೆ ಮಾಡಲಿ ಪೊಲೀಸರು ಹಾಗು ಅಧಿಕಾರಿಗಳ ಹರಸಾಹಸಪಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 am, Fri, 5 January 24