ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೋರ್ವ ಮಹಿಳೆ ಸಾವು: 2 ತಿಂಗಳ ಅಂತರದಲ್ಲಿ ನಾಲ್ಕನೇ ಬಲಿ
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಇದು ಎರಡು ತಿಂಗಳಲ್ಲಿ ನಾಲ್ಕನೇ ಬಲಿಯಾಗಿದೆ. ಹೀಗಾಗಿ ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಅರಣ್ಯ ಮಂತ್ರಿ ಬರುವಂತೆ ಪಟ್ಟುಹಿಡಿದಿದ್ದಾರೆ.

ಹಾಸನ, ಮಾರ್ಚ್ 14: ಕಾಡಾನೆ (elephant) ದಾಳಿಯಿಂದ ಮಹಿಳೆ (woman) ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಬೊಮ್ಮನಹಳ್ಳಿ ನಡೆದಿದೆ. ಸುಶೀಲಮ್ಮ (63) ಮೃತ ಮಹಿಳೆ. 2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ನಾಲ್ಕನೇ ಬಲಿ ಆಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಸೊಂಡಲಿನಿಂದ ಮಹಿಳೆಯನ್ನು ಎತ್ತಿ ಬಿಸಾಡಿ, ಕಾಲಿನಿಂದ ತಲೆಯನ್ನು ತುಳಿದು ಸಾಯಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸರ್ಕಾರದ ವಿರುದ್ಧ ಘೋಷಣೆ
ಕಾಡಾನೆ ದಾಳಿಗೆ ಮಹಿಳೆ ಸಾವು ಖಂಡಿಸಿ ಚೀಕನಹಳ್ಳಿ-ಬೇಲೂರು ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದಾರೆ. ಕಳೆದ 2 ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಹೀಗಾಗಿ ಕಾಡಾನೆ ಹಾವಳಿ ನಿಯಂತ್ರಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ: ಕಾಡಾನೆ ದಾಳಿಗೆ ಯುವಕ ಬಲಿ
ರಸ್ತೆ ತಡೆ ವೇಳೆ ತೆರಳಲು ಮುಂದಾದ ಬಸ್ ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಸಿಎಂ, ಅರಣ್ಯ ಮಂತ್ರಿ ಬರುವವರೆಗೆ ಯಾವುದೇ ವಾಹನ ಸಂಚರಿಸಲು ಅವಕಾಶ ನೀಡಲ್ಲವೆಂದು ಪಟ್ಟುಹಿಡಿದಿದ್ದಾರೆ. ಟೈರ್ಗೆ ಬೆಂಕಿ ಹಚ್ಚಿ ರಸ್ತೆಯಲ್ಲಿ ಪ್ರತಿಭಟಿಸಿದ್ದಾರೆ.
ರಸ್ತೆ ತಡೆದು ಗ್ರಾಮಸ್ಥರ ಪ್ರತಿಭಟನೆ
ಇನ್ನು ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭೇಟಿ ನೀಡಿದರು. ಈ ವೇಳೆ ಡಿಸಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜನಾಕ್ರೋಶಕ್ಕೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹಾಗೂ ತಹಶಿಲ್ದಾರ್ ಮಮತಾ ಸುಮ್ಮನೆ ನಿಂತರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ಮಲೆನಾಡು ಸೇರಿದಂತೆ ಜಿಲ್ಲೆಯಲ್ಲಿ ವಿವಿಧೆಡೆ ಮಿತಿ ಮೀರಿರುವ ಕಾಡಾನೆ ಹಾವಳಿಗೆ ಕೊಂಚ ಪ್ರಮಾಣದಲ್ಲಾದರೂ ಕಡಿವಾಣ ಹಾಕಲು ಅರಣ್ಯ ಇಲಾಖೆ ಇತ್ತೀಚೆಗೆ ಮುಂದಾಗಿತ್ತು. ಆನೆ-ಮಾನವ ಸಂಘರ್ಷ ತಡೆಯಿರಿ, ಶಾಶ್ವತ ಪರಿಹಾರ ಕಂಡು ಹಿಡಿಯಿರಿ ಎಂದು ಪ್ರತಿಭಟನೆ, ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ ದಿಢೀರ್ ಎಚ್ಚೆತ್ತ ಅಧಿಕಾರಿಗಳು, ಉಪಟಳ ನೀಡುತ್ತಿರುವ 4 ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ತಯಾರಿ ನಡೆಸಿದ್ದರು. ಅಮಾಯಕರನ್ನು ಬಲಿ ಪಡೆಯುತ್ತಿರುವ 4 ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಸಕಲೇಶಪುರ: ಅಪಾಯದಲ್ಲಿ ಹೇಮಾವತಿ ನದಿ ಸೇತುವೆ, ಮಳೆಗಾಲಕ್ಕೂ ಮುನ್ನವೇ ಆತಂಕ
ಈ ವಿಚಾರವಾಗಿ ಮಾತನಾಡಿದ್ದ ಹಾಸನ-ತುಮಕೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಏಡುಕೊಂಡಲು, ಜಿಲ್ಲೆಯಲ್ಲಿ 1 ವರ್ಷದಲ್ಲಿ ಐವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಗಾಗಿ ಜೀವ ಹಾನಿ ತಪ್ಪಿಸಲು ತುರ್ತು ಕ್ರಮಕ್ಕೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಕಾಡಾನೆ ಬಾಧಿತ ತಾಲೂಕು ವ್ಯಾಪ್ತಿಯ ಎಲ್ಲ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದು ಹೇಳಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.