AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವ-ಕಾಡಾನೆ ಸಂಘರ್ಷಕ್ಕೆ ಕಡಿವಾಣಕ್ಕೆ ಮುಂದಾದ ಹಾಸನ ಜಿಲ್ಲಾಡಳಿತ: ನಾಲ್ಕು ಪುಂಡಾನೆ ಸೆರೆಗೆ ಅನುಮತಿ

ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡಾನೆ ಸಮಸ್ಯೆಗೆ ಅರಣ್ಯ ಇಲಾಖೆ ಪರಿಹಾರ ಕಂಡುಹಿಡಿಯಲು ಮುಂದಾಗಿದೆ. ಮಿತಿಮೀರಿದ ಕಾಡಾನೆ ಹಾವಳಿಯಿಂದ ಜೀವಹಾನಿ ತಪ್ಪಿಸಲು, ನಾಲ್ಕು ಪುಂಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸಲು ಯೋಜಿಸಲಾಗಿದೆ. ಹೆಚ್ಚುವರಿ ಪೆಟ್ರೋಲಿಂಗ್, ವಾಹನಗಳ ಒದಗಿಸುವಿಕೆ ಮತ್ತು ಆನೆ ಧಾಮ ನಿರ್ಮಾಣದ ಬಗ್ಗೆಯೂ ಚರ್ಚಿಸಲಾಗಿದೆ.

ಮಾನವ-ಕಾಡಾನೆ ಸಂಘರ್ಷಕ್ಕೆ ಕಡಿವಾಣಕ್ಕೆ ಮುಂದಾದ ಹಾಸನ ಜಿಲ್ಲಾಡಳಿತ: ನಾಲ್ಕು ಪುಂಡಾನೆ ಸೆರೆಗೆ ಅನುಮತಿ
ಮಾನವ-ಕಾಡಾನೆ ಸಂಘರ್ಷಕ್ಕೆ ಕಡಿವಾಣಕ್ಕೆ ಮುಂದಾದ ಹಾಸನ ಜಿಲ್ಲಾಡಳಿ: ನಾಲ್ಕು ಪುಂಡಾನೆ ಸೆರೆಗೆ ಅನುಮತಿ
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Mar 01, 2025 | 8:16 PM

Share

ಹಾಸನ, ಮಾರ್ಚ್​ 01: ಮಲೆನಾಡು ಸೇರಿದಂತೆ ಜಿಲ್ಲೆಯಲ್ಲಿ ವಿವಿಧೆಡೆ ಮಿತಿ ಮೀರಿರುವ ಕಾಡಾನೆ (elephant) ಹಾವಳಿಗೆ ಕೊಂಚ ಪ್ರಮಾಣದಲ್ಲಾದರೂ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ಆನೆ-ಮಾನವ ಸಂಘರ್ಷ ತಡೆಯಿರಿ, ಶಾಶ್ವತ ಪರಿಹಾರ ಕಂಡು ಹಿಡಿಯಿರಿ ಎಂದು ಪ್ರತಿಭಟನೆ, ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು, ಉಪಟಳ ನೀಡುತ್ತಿರುವ 4 ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಅಮಾಯಕರನ್ನು ಬಲಿ ಪಡೆಯುತ್ತಿರುವ 4 ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸಂರಕ್ಷಣಾಧಿಕಾರಿ ಏಡುಕೊಂಡಲು ಹೇಳಿದ್ದಿಷ್ಟು

ಈ ವಿಚಾರವಾಗಿ ನಗರದಲ್ಲಿ ಶುಕ್ರವಾರ ಮಾತನಾಡಿದ ಹಾಸನ-ತುಮಕೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್) ಏಡುಕೊಂಡಲು, ಜಿಲ್ಲೆಯಲ್ಲಿ 1 ವರ್ಷದಲ್ಲಿ ಐವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಹಾಗಾಗಿ ಜೀವ ಹಾನಿ ತಪ್ಪಿಸಲು ತುರ್ತು ಕ್ರಮಕ್ಕೆ ಆದ್ಯತೆ ನೀಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಕಾಡಾನೆ ಬಾಧಿತ ತಾಲೂಕು ವ್ಯಾಪ್ತಿಯ ಎಲ್ಲ ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು.

ಇದನ್ನೂ ಓದಿ: ಹಾಸನದಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ: ಕಾಡಾನೆ ದಾಳಿಗೆ ಯುವಕ ಬಲಿ

ಇದನ್ನೂ ಓದಿ
Image
ಹಾಸನದಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ: ಕಾಡಾನೆ ದಾಳಿಗೆ ಯುವಕ ಬಲಿ
Image
ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ
Image
ಹಾಸನ: ಉಳುಮೆ ವೇಳೆ ಜೈನ ಮೂರ್ತಿಗಳು ಪತ್ತೆ
Image
ದಾನ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನ: ನಕಲಿ ಸ್ವಾಮೀಜಿಗಳಿಗೆ ಗೂಸಾ!

ಸರಣಿ ಸಾವು ಮರುಕಳಿಸದಂತೆ ತಕ್ಷಣ ಕ್ರಮ ಕೈಗೊಳ್ಳಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಅಧೀನ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ 6 ಇಟಿಎಫ್ ಕ್ಯಾಂಪ್ ಸ್ಥಾಪನೆ ಮಾಡಿ, ಅಲ್ಲಿ 140 ಜನ ಇಟಿಎಫ್ ಸಿಬ್ಬಂದಿ ನಿಯೋಜಿಸಿ, ದಿನದ 24 ಗಂಟೆಯೂ ಪೆಟ್ರೋಲಿಂಗ್ ಮಾಡುವ ಮೂಲಕ ಆನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಸಿಬ್ಬಂದಿಗೆ ಹಗಲು ರಾತ್ರಿ ಕೆಲಸ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕೂಡ ಮಾಡಲು ಕ್ರಮ ವಹಿಸಲಾಗಿದೆ. ಕಾಡಾನೆಗಳ ಬಗ್ಗೆ ಮಾಹಿತಿ ನೀಡಲು ಇದ್ದ ವಾಹನ ಕೊರತೆ ನೀಗಿಸಿ ಹಾಲಿ ಇರುವ 3 ಗಸ್ತು ವಾಹನಗಳ ಜೊತೆಗೆ ಜಿಪಿಎಸ್ ಸಹಿತ ಇನ್ನೂ 5 ಹೆಚ್ಚುವರಿ ವಾಹನ ಶನಿವಾರದಿಂದಲೇ ಕಾರ್ಯಾಚರಣೆ ಆರಂಭಿಸಲಿವೆ. ಆ ಮೂಲಕ ಕಾಡಾನೆ ಸಂಚಾರದ ಬಗ್ಗೆ ತಕ್ಷಣ ಮಾಹಿತಿ ನೀಡಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.

ಹೆಚ್ಚು ಸಮಸ್ಯೆ ಕೊಡುತ್ತಿರುವ ನಾಲ್ಕು ಪುಂಡಾನೆಗಳನ್ನು ಸೆರೆ ಹಿಡಿದು ಅವುಗಳಿಗೆ ರೆಡಿಯೊ ಕಾಲರ್ ಅಳವಡಿಸಲು ಸಹ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಒಂದು ವಾರದೊಳಗೆ ಅನುಮತಿ ಸಿಗಲಿದ್ದು ಕಾರ್ಯಾಚರಣೆ ಶುರುಮಾಡುವುದಾಗಿ ಹೇಳಿದ್ದಾರೆ.

ಆನೆ ಧಾಮ ನಿರ್ಮಾಣ ಬಗ್ಗೆ ಪರಿಶೀಲನೆ 

ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹೆಚ್ಚಿರುವ ಕಡೆಗಳಲ್ಲೇ ಅಕೇಶಿಯಾ ನೆಡುತೋಪು ಪ್ರದೇಶ ಸಾಕಷ್ಟು ಇದೆ. ಅದನ್ನು ತೆರವುಗೊಳಿಸಿ ಆನೆಗಳಿಗೆ ಪ್ರಿಯವಾದ ಸ್ಥಳೀಯ ಬಿದಿರು, ಬೈನೆ, ಹಲಸು ಬೆಳೆಯಲು ಕ್ರಮವಹಿಸಲಾಗುವುದು ಎಂದು ಹೇಳಿದರು. ಅಕೇಶಿಯ ಮರಗಳನ್ನು ತೆರವು ಮಾಡಲು ಸಂಬಂಧಪಟ್ಟವರಿಗೆ ಕೂಡಲೇ ಪತ್ರ ಬರೆಯುತ್ತೇವೆ ಎಂದಿದ್ದಾರೆ.

ಹಾಗೆಯೇ ಸೆರೆಹಿಡಿದ ಆನೆಗಳನ್ನು ಕೂಡಿಹಾಕಿ ಪಾಲನೆ, ಪೋಷಣೆ ಮಾಡಲು ಪೂರಕವಾದ ಆನೆ ಧಾಮ ನಿರ್ಮಾಣ ಮಾಡುವ ಸಂಬಂಧವಾಗಿಯೂ ಪರಿಶೀಲನೆ ನಡೆಸುತ್ತೇವೆ ಎಂದು ಇದೇ ವೇಳೆ ತಿಳಿಸಿದರು. ಎಲ್ಲೆಲ್ಲಿ ಆನೆಗಳಿವೆ ಎಂಬ ಬಗ್ಗೆ ಮಾಹಿತಿ ನೀಡುವ ಜನರಿಗೆ ಜಾಗೃತಿ ಮೂಡಿಸಿ, ಮಾಹಿತಿಯ ಅವಧಿಯನ್ನೂ ಹೆಚ್ಚು ಮಾಡುತ್ತೇವೆ ಎಂದ ಸಿಸಿಎಫ್, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಂಟಿ ಸಭೆಯನ್ನು ಶೀಘ್ರವೇ ಕರೆದು ಪರಸ್ಪರ ಚರ್ಚಿಸಿ ಆನೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

33 ದಿನಗಳಲ್ಲಿ ಮೂರು ಸಾವು: ಐವರು ಪಾರು

ಜಿಲ್ಲೆಯಲ್ಲಿ 33 ದಿನಗಳ ಅಂತರದಲ್ಲಿ ಮೂವರು ಕಾಡಾನೆ ದಾಳಿಗೆ ಬಲಿಯಾಗಿದ್ದರೆ. ಏಳೆಂಟು ಮಂದಿ ಗಾಯಗೊಂಡು ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಕಳೆದ ಜ.22 ರಂದು ಆಲೂರು ತಾಲೂಕು ಅಡಿಬೈಲು ಗ್ರಾಮದ ವೃದ್ಧ ಪುಟ್ಟಯ್ಯ ಎಂಬುವರು ಆನೆ ತುಳಿತಕ್ಕೆ ಬಲಿಯಾದರೆ, ಫೆ.13 ರಂದು ಬೇಲೂರು ತಾಲೂಕು ಕಣಗುಪ್ಪೆ ಗ್ರಾಮದ ದ್ಯಾವಮ್ಮ ಜೀವ ಕಳೆದುಕೊಂಡರು.

ಇದನ್ನೂ ಓದಿ: ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ

ಅದಾದ ಕೆಲವೇ ದಿನಗಳಲ್ಲಿ ಅಂದರೆ ಫೆ.24 ರಂದು ಇದೇ ತಾಲೂಕಿನ ಗುಜ್ಜನಹಳ್ಳಿಯ ಅನಿಲ್‌ಕುಮಾರ್ ಸಲಗನ ಸಿಟ್ಟಿಗೆ ಹೆಣವಾಗಿದ್ದಾನೆ. ಜ.21 ರಂದು ಸಕಲೇಶಪುರ ತಾಲೂಕು ಮರಗುಂದ ಬಳಿ ಮದಗಜಗಳ ಕಾದಾಟದಿಂದ ಸಲಗ ಸತ್ತಿರುವ ಸಂಗತಿ ಬಯಲಾಗಿದೆ. ಈ ನಡುವೆ ಜ.18 ರಿಂದ 27 ರನಡುವೆ ಗರ್ಭಿಣಿ ಸೇರಿ ಐವರು ಕೂದಲೆಳೆ ಅಂತರದಲ್ಲಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಬಚಾವಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:14 pm, Sat, 1 March 25