ಪಾನಿಪುರಿ, ಗೋಬಿ ಅಂಗಡಿಯವರೇ ನಮಗಿಂತ ಸುಖವಾಗಿದ್ದಾರೆ: ತಹಶೀಲ್ದಾರ್ ನೋವಿನ ಮಾತು

ಹೊಳೆನರಸೀಪುರ ತಹಶೀಲ್ದಾರ್ ಸರ್ಕಾರಿ ನೌಕರರ ಮೇಲಿನ ಕೆಲಸದ ಒತ್ತಡಗಳನ್ನು ಹೊರಹಾಕಿದ್ದಾರೆ. ಹೊಳೆನರಸೀಪುರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ತಹಶೀಲ್ದಾರ್​ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿರುವ ನೋವಿನ ಮಾತುಗಳು ವೈರಲ್ ಆಗಿದೆ. ಸರ್ಕಾರಿ ನೌಕರರ ಕೆಲಸದ ಒತ್ತಡದ ಬಗ್ಗೆ ಮಾತನಾಡಿ , ಸರ್ಕಾರಿ ನೌಕರಿನೇ ಬೇಡ ಎನ್ನುವಂತಾಗಿದೆ ಎಂದಿದ್ದಾರೆ.

Follow us
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ

Updated on: Dec 15, 2024 | 5:43 PM

ಹಾಸನ, (ಡಿಸೆಂಬರ್ 15): ನನಗೆ ಸರ್ಕಾರಿ ನೌಕರಿನೇ ಬೇಡ ಎನ್ನುವಂತಾಗಿದೆ ಎಂದು ಸರ್ಕಾರಿ ನೌಕರರ ಕೆಲಸದ ಒತ್ತಡದ ಬಗ್ಗೆ ಹೊಳೆನರಸೀಪುರ ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಅವರು ಹೊರಹಾಕಿದ್ದಾರೆ. ಸರ್ಕಾರಿ ನೌಕರರ ಸಂಘದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಒಬ್ಬ ತಹಶೀಲ್ದಾರ್, ಒಂದು ತಾಲ್ಲೂಕಿನ ಆಡಳಿತದ ಮುಖ್ಯಸ್ಥನಾಗಿದ್ದೇನೆ. ಈಗ ನನಗೆ ಸರ್ಕಾರಿ ನೌಕರಿನೇ ಬೇಡ ಎನ್ನವಂತಾಗಿದೆ. ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಇಟ್ಟುಕೊಂಡಿರುವವರು ಸುಖವಾಗಿ ಜೀವನ ಮಾಡುತ್ತಾರೆ. ಅವರಿಗೆ ಅಷ್ಟು ಸಮಾಧಾನ, ನೆಮ್ಮದಿ ಇದೆ. ಹೆಂಡ್ತಿ ಮಕ್ಕಳ ಜೊತೆ ಕಾಲ ಕಳೆಯುತ್ತಾನೆ. ಹೆಂಡ್ತಿ, ಮಕ್ಕಳನ್ನು ಊರಿಗೆ, ಎಲ್ಲಿ ಬೇಕಾದರೂ ಕರೆದುಕೊಂಡು ಹೋಗುತ್ತಾನೆ. ದುರದೃಷ್ಟವಶಾತ್ ನಮ್ಮ ಕುಟುಂಬವನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಆಗ್ತಿಲ್ಲ. ನಮಗೆ ಬರೀ ಒತ್ತಡ, ಒತ್ತಡ, ಒತ್ತಡ, ಒತ್ತಡ ಎಂದು ತಮ್ಮ ನೋವುಗಳನ್ನು ಹೊರಹಾಕಿದ್ದಾರೆ.

ಶಾಸಕಾಂಗ ಶಾಸನಗಳನ್ನು ಮಾಡಿಕೊಳ್ಳುತ್ತಾರೆ. ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಕೆಲಸ. ಎಲ್ಲಾ ಇಲಾಖೆಗಳ ಸವಲತ್ತುಗಳನ್ನು ಎಲ್ಲರಿಗೂ ತಲುಪಿಸಬೇಕು. ಇತ್ತೀಚೆಗೆ ಮೊಬೈಲ್ ಬಂದಿದೆ, ಅದರಲ್ಲಿ ನಮ್ಮ ಪ್ರೊಗ್ರಾಸ್ ವೀಕ್ಷಣೆ ಮಾಡ್ತಾರೆ. ಶೋಕಾಸ್ ನೋಟೀಸ್ ಕೊಡ್ತಾರೆ, ಒತ್ತಡ ಹೇರುತ್ತಾರೆ, ವರ್ಕ್ ಆಫ್ ಲೋಡ್ ಜಾರಿ ಮಾಡ್ತಾರೆ, ಇಲಾಖೆ ವಿಚಾರಣೆ ನಡೆಸುತ್ತಾರೆ. ವಾಟ್ಸಪ್ ಗ್ರೂಪ್ ಮಾಡುತ್ತಾರೆ, ಸಂಜೆಯೊಳಗೆ ನಾವು ವರದಿ ಕೊಡಬೇಕು. ಅಷ್ಟು ಚಿತ್ರಹಿಂಸೆ ಆಗುತ್ತಿದೆ ಎಂದಿದ್ದಾರೆ.

ಕಡಿಮೆ ಅವಧಿ ನೀಡಿ ಮಾನಸಿಕ ಕಿರುಕುಳ

ಎಂಟು ತಾಲ್ಲೂಕಿಗೆ ಹದಿನಾಲ್ಕು ಜನ ಸಿಬ್ಬಂದಿ ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ನಮ್ಮ ವೀಲೇಜ್ ಅಕೌಂಟೆಟ್ಸ್ ಅಷ್ಟು ಗೋಳು ಹುಯ್ಕೊತಾ ಇದ್ದೀನಿ. ಇದಕ್ಕೆ ಕಾರಣ ಅವೈಜ್ಞಾನಿಕವಾಗಿ ನಮಗೆ ಟಾರ್ಗೆಟ್ ಕೊಡುತ್ತಿದ್ದಾರೆ. ಕಾಲಾವಕಾಶ ಕೊಟ್ಟರೆ ಕೆಲಸ ಮಾಡುತ್ತೇವೆ. ಇಪ್ಪತ್ತೈದು ಕೆಲಸ ಕೊಟ್ಟು ಕಡಿಮೆ ಅವಧಿ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದನ್ನು ಸಮರ್ಥವಾಗಿ ಹೇಳಲು ತಾಕತ್ ಇಲ್ಲ. ಸಮರ್ಪಕವಾಗಿ ಕೆಲಸ ಕೊಡಿ ನಾವು ಮಾಡುತ್ತೇವೆ ಎಂದು ಹೇಳುವ ತಾಕತ್ ಇಲ್ಲ. ಎಷ್ಟು ನೌಕರರು ತಪ್ಪು ಮಾಡದೆ ಬಲಿಪಶು ಆಗುತ್ತಿದ್ದಾರೆ. ಉಗುರಷ್ಟು ಮಾಡಿದ ತಪ್ಪಿಗೆ ಕೊಡಲಿಯಷ್ಟು ಶಿಕ್ಷೆ ನೀಡಿ ಮಟಾಶ್ ಮಾಡ್ತಾರೆ. ಏಕಾಏಕಿ ಎಫ್‌ಐಆರ್ ಮಾಡಿ ಅವರ ಮನೆ ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಈಗ ಶಿಕ್ಷಕ ವೃತ್ತಿ ಮಾಡಲು ಕಷ್ಟ

ಏನು ತಪ್ಪು ಮಾಡಿದ್ದಾರೆ ನೋಡಲ್ಲ. ಸರ್ಕಾರಿ ನೌಕರರು ಘಾಸಿ ಆಗ್ತಾರೆ, ಅವರ ಕುಟುಂಬ ಆಘಾತಕ್ಕೆ ಒಳಗಾಗುತ್ತಾರೆ. ಸಮರ್ಪಕವಾದ ಕಾರಣ ಇಟ್ಟುಕೊಂಡು ಇಲಾಖಾ ವಿಚಾರಣೆ ಮಾಡಲಿ. ಮೊದಲು ಶಿಕ್ಷಕ ವೃತ್ತಿಗೆ ಬಾರಿ ಗೌರವ ಇತ್ತು. ಈಗ ಶಿಕ್ಷಕ ವೃತ್ತಿ ಮಾಡಲು ಕಷ್ಟ. ನನ್ನ ಹೆಂಡ್ತಿ, ನಾದಿನಿ, ಕೋಬ್ರದರ್ ಕೂಡ ಶಿಕ್ಷಕ. ಐದು ರೂಪಾಯಿ ಮೊಟ್ಟೆಗೆ, ಏಳು ರೂಪಾಯಿ ಆದರೂ ಟೀಚರ್ ಕೊಡಬೇಕು. ಮೊಟ್ಟೆ ಸೈಜ್ ನೋಡಬೇಕು, ಚಿಕ್ಕಿ ಬೇರೆ. ಇಷ್ಟು ಒತ್ತಡದಲ್ಲಿ ಬೇಯುತ್ತಿದ್ದೇವೆ. ಆಧುನಿಕತೆ ಜಾಸ್ತಿ ಆದಂತೆ ತಲೆನೋವು ಕೂಡ ಜಾಸ್ತಿ ಆಗುತ್ತಿದೆ ಎಂದು ನೋವು ತೋಡಿಕೊಂಡರು.

ನಾಳೆಗೆ ಕೆಲಸ ಮಾಡಬೇಕು ಅಂದರೆ ಆಗಲ್ಲ. ಸರ್ಕಾರಿ ‌ನೌಕರರು ಹೈರಾಣಾಗಿ ಹೋಗಿದ್ದಾರೆ. ಬಿಪಿ, ಶುಗರ್, ಕಿಡ್ನಿ, ಲಿವರ್ ಎಲ್ಲಾ ಹೋಗಿದೆ. ಸಮರ್ಥವಾದ ರೀತಿಯಲ್ಲಿ ಹೇಳೋಣ, ಎದೆಯುಬ್ಬಿಸಿ ಮಾತನಾಡಬೇಕು. ಎಷ್ಟೇ ಮೇಲ್ಪಟ್ಟ ಅಧಿಕಾರಿಯಾದರೂ ಗೌರವಕೊಟ್ಟು ಎದೆಕೊಟ್ಟು ಮಾಡಬೇಕು. ನಮ್ಮ ಬೇಡಿಕೆಗಳನ್ನು ಗಮನಕ್ಕೆ ತರಬೇಕು ಎಂದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ