ಮನೆಯಲ್ಲಿಲ್ಲ ಭವಾನಿ ರೇವಣ್ಣ: ವಿಚಾರಣೆಗೆ ತೆರಳಿದ ಎಸ್ಐಟಿ ಅಧಿಕಾರಿಗಳಿಗೆ ನಿರಾಸೆ
ಕಿಡ್ನ್ಯಾಪ್ ಪ್ರಕರಣದಲ್ಲಿ ಜಾಮೀನು ಸಿಗದೆ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ತಲೆಮರೆಸಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆಂದು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ತೆರಳಿದ ವೇಳೆ ಭವಾನಿ ರೇವಣ್ಣ ಅಲ್ಲಿರಲಿಲ್ಲ. 15 ದಿನಗಳ ಹಿಂದೆಯೇ ಅವರು ನಿಗೂಢ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಹಾಸನ, ಜೂನ್ 1: ಅಪಹರಣ ಪ್ರಕರಣದಲ್ಲಿ ಹೆಚ್ಡಿ ರೇವಣ್ಣ (HD Revanna) ಕುಟುಂಬಕ್ಕೆ ಎದುರಾಗಿರುವ ಕಾನೂನು ಸಂಕಷ್ಟ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳಿಲ್ಲ. ಆದರೆ ಭವಾನಿ ರೇವಣ್ಣ (Bhavani Revanna) ಇದೀಗ ತಲೆಮರೆಸಿಕೊಂಡಿರುವುದು ಎಸ್ಐಟಿಯ ತಲೆನೋವಿಗೆ ಕಾರಣವಾಗಿದೆ. 34 ದಿನಗಳ ಕಾಲ ಕಣ್ಣಾಮುಚ್ಚಾಲೆ ಆಡಿದ್ದ ಪ್ರಜ್ವಲ್ ಎಸ್ಐಟಿ ಖೆಡ್ಡಾಕ್ಕೆ ಬಿದ್ದಾಗಿದೆ. ಪೆನ್ಡ್ರೈವ್ ಕೇಸ್ಗೆ ಅಂಟಿಕೊಂಡಿರುವ ಮಹಿಳೆಯ ಕಿಡ್ನ್ಯಾಪ್ ಪ್ರಕರಣ ಭವಾನಿ ರೇವಣ್ಣಗೆ ಮುಳುವಾಗಿದೆ.
ಅಶ್ಲೀಲ ವಿಡಿಯೋಗಳು ಹರಿದಾಡ್ತಿದ್ದಂತೆಯೇ ಹೆಚ್ಡಿ ರೇವಣ್ಣ ಮನೆಯ ಕೆಲಸದಾಕೆ ನಾಪತ್ತೆಯಾಗಿದ್ದರು. ಕೆಲಸದಾಕೆ ಮಗ ಕೆಆರ್ ನಗರ ಪೊಲೀಸ್ ಠಾಣೆಗೆ ಅಪಹರಣದ ಕೇಸ್ ಕೊಟ್ಟಿದ್ದರು. ರೇವಣ್ಣ ಹಾಗೂ ಮತ್ತೊಬ್ಬ ಆಪ್ತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಕೇಸ್ ಈಗ ಭವಾನಿ ರೇವಣ್ಣಗೆ ಉರುಳಾಗಿ ಪರಿಣಮಿಸಿದೆ. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ನೋಟಿಸ್ ಕೊಟ್ಟಿದ್ದರು. ಹೀಗಾಗಿ ಬಂಧನ ಭೀತಿಯಲ್ಲಿದ್ದ ಭವಾನಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ನಿನ್ನೆ ಅರ್ಜಿ ವಜಾಗೊಳಿಸಿದೆ. ಈ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಭವಾನಿ ನಿವಾಸಕ್ಕೆ ಭೇಟಿ ಕೊಟ್ಟಿದ್ದಾರೆ.
ಭವಾನಿ ರೇವಣ್ಣಗೆ ಎಸ್ಐಟಿ ಎರಡೆರಡು ನೋಟಿಸ್ ಕೊಟ್ಟಿತ್ತು. ಮನೆಯಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಭವಾನಿ ಪತ್ರ ಬರೆದಿದ್ದರು. ಪತ್ರದಂತೆ ಎಸ್ಐಟಿ ಅಧಿಕಾರಿಗಳು ಹೊಳೆನರಸೀಪುರದಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಆದರೆ, ಮನೆಯೊಳಗೆ ಹೋದ ಎಸ್ಐಟಿ ಅಧಿಕಾರಿಗಳಿಗೆ ಶಾಕ್ ಕಾದಿದೆ. ಭವಾನಿ ರೇವಣ್ಣ ಮನೆಯಲ್ಲಿದ್ದ ಇರದ ಕಾರಣ, ಸಂಜೆ 5ವರೆಗೆ ಕಾಯಲಿದ್ದಾರೆ.
15 ದಿನಗಳ ಹಿಂದೆಯೇ ಮನೆ ತೊರೆದಿರುವ ಭವಾನಿ ರೇವಣ್ಣ
ಹೊಳೆನರಸೀಪುರದಲ್ಲಿರುವ ಭವಾನಿ ರೇವಣ್ಣ ನಿವಾಸ ಖಾಲಿಯಾಗಿದೆ. ಬಂಧನದ ಭೀತಿಯಿಂದ ಭವಾನಿ 15 ದಿನಗಳ ಹಿಂದೆಯೇ ಮನೆ ತೊರೆದಿದ್ದಾರೆ. ಭದ್ರತಾ ಸಿಬ್ಬಂದಿ ಹಾಗೂ ಕೆಲಸದವರು ಮಾತ್ರ ಇದ್ದಾರೆ. ಹೀಗಾಗಿ ಭವಾನಿ ಮೊಬೈಲ್ ಲೊಕೇಶನ್ ಮೇಲೆ ಎಸ್ಐಟಿ ಕಣ್ಣಿಟ್ಟಿದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನ ಸಂಪರ್ಕಿಸಲು ಯತ್ನಿಸುತ್ತಿದೆ. ಭವಾನಿ ವಿಚಾರಣೆಗೆ ಹಾಜರಾದ್ರೆ ಎಸ್ಐಟಿ ವಶಕ್ಕೆ ಪಡೆಯಲಿದೆ.
ಭವಾನಿ ಕಾರು ಚಾಲಕ ಅಜಿತ್ಗಾಗಿ ಹುಡುಕಾಟ
ಕಿಡ್ನ್ಯಾಪ್ ಆಗಿದ್ದ ಮಹಿಳೆ ಅಪಹರಣದ ಬಳಿಕ ವಿಡಿಯೋ ಹೇಳಿಕೆ ಹೊರಬಂದಿತ್ತು. ಭವಾನಿ ಕಾರು ಚಾಲಕ ಅಜಿತ್ ಬೆದರಿಸಿ ವಿಡಿಯೋ ಮಾಡಿಸಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಜಿತ್ ನಾಪತ್ತೆಯಾಗಿದ್ದು, ರಾಜ್ಯದ ಮೂಲೆ ಮೂಲೆಯಲ್ಲೂ ಎಸ್ಐಟಿ ಶೋಧ ನಡೆಸಿದೆ. ಚಿಕ್ಕಮಗಳೂರಿನ ಕಲ್ಯಾಣನಗರದಲ್ಲಿರೋ ಅವರ ಮಾವನ ಮನೆಯಲ್ಲೂ ತಲಾಶ್ ನಡೆಸಿದೆ.
ಇದನ್ನೂ ಓದಿ: ಪ್ರಜ್ವಲ್ ಬಂದಾಯ್ತು ಈಗ ಭವಾನಿ ಎಲ್ಲಿ? ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದ ರೇವಣ್ಣ ಪತ್ನಿ
ಒಟ್ಟಿನಲ್ಲಿ ರೇವಣ್ಣ ಕುಟುಂಬಕ್ಕೆ ಕಾನೂನು ಕಂಟಕ ಎದುರಾಗಿದೆ. ಹೆಚ್ಡಿ ರೇವಣ್ಣ ಜಾಮೀನಿನ ಮೇಲೆ ಹೊರಗೆ ಇದ್ರೆ, ಪುತ್ರ ಎಸ್ಐಟಿ ಕಸ್ಟಡಿಯಲ್ಲಿದ್ದಾರೆ. ಇನ್ನು ಭವಾನಿ ರೇವಣ್ಣ ಬಂಧನ ಭೀತಿಯಲ್ಲಿ ಮನೆ ತೊರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ