ಹೆಚ್ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನ
ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರ ಆಪ್ತರೂ ಆಗಿರುವ ಪ್ರಥಮ ದರ್ಜೆ ಗುತ್ತಿಗೆದಾರನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಸೂರನಹಳ್ಳಿ ಗ್ರಾಮದ ಬಳಿ ನಡೆದಿದೆ. ಕೆಲಕಾಲ ಎಚ್.ಡಿ.ರೇವಣ್ಣ ಅವರ ನಿವಾಸದಲ್ಲಿದ್ದು ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಲಾಗಿದೆ.
ಹಾಸನ, ಅ.10: ಮಾಜಿ ಸಚಿವ ಹೆಚ್ಡಿ ರೇವಣ್ಣ (H.D.Revanna) ಅವರ ಆಪ್ತರೂ ಆಗಿರುವ ಪ್ರಥಮ ದರ್ಜೆ ಗುತ್ತಿಗೆದಾರನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಸೂರನಹಳ್ಳಿ ಗ್ರಾಮದ ಬಳಿ ನಡೆದಿದೆ. ಎಚ್.ಡಿ.ರೇವಣ್ಣ ಅವರ ನಿವಾಸದಿಂದ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ದಾಳಿ ನಡೆಸಲಾಗಿದೆ.
ಇಂದು ಸಂಜೆ ಹಾಸನದಿಂದ ಎಚ್.ಡಿ.ರೇವಣ್ಣ ಅವರ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವಥ್ ಗೌಡ, ಕೆಲಕಾಲ ಅವರ ನಿವಾಸದಲ್ಲಿದ್ದರು. ಬಳಿಕ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಫಾರ್ಚೂನರ್ ಕಾರಿನಲ್ಲಿ ತೆರಳಿದ್ದಾರೆ.
ಇದನ್ನೂ ಓದಿ: Israel-Hamas War: ಹಮಾಸ್ ಭಯೋತ್ಪಾದಕರ ದಾಳಿ: ಇಸ್ರೇಲ್ನಲ್ಲಿ ಸಿಲುಕಿದ ಹಾಸನದ 20 ಮಂದಿ
ಈ ವಿಚಾರ ತಿಳಿದ ಐದಾರು ಮಂದಿ ಇದ್ದ ದುಷ್ಕರ್ಮಿಗಳ ತಂಡ, ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಕಾರಿನ ಗ್ಲಾಸ್ ಮೇಲೆ ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ.
ಕೂಡಲೇ ಕಾರು ಹಿಂದಕ್ಕೆ ತೆಗೆದು 150 ಕಿಲೋಮೀಟರ್ ವೇಗದಲ್ಲಿ ಕಾರು ಚಲಾಯಿಸಿ ತಪ್ಪಿಸಿಕೊಂಡಿದ್ದಾರೆ. ಆದರೂ ಬೆನ್ನು ಬಿಡದ ದುಷ್ಕರ್ಮಿಗಳು, ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್ ಅವರನ್ನು ಹಿಂಬಾಲಿಸಿದ್ದಾರೆ. ಘಟನೆ ಸಂಬಂಧ ಅಶ್ವಥ್ ಅವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ, ಆಪ್ತನ ಮೇಲೆ ದಾಳಿ ನಡೆಸಿದ ಬಗ್ಗೆ ಮಾಹಿತಿ ತಿಳಿದ ರೇವಣ್ಣ ಅವರು ಅಶ್ವಥ್ ಅವರನ್ನ ಭೇಟಿಯಾಗಿ ವಿಚಾರಿಸಿದ್ದಾರೆ.
ರೇವಣ್ಣ ಆಪ್ತರ ಟಾರ್ಗೆಟ್
ದುಷ್ಕರ್ಮಿಗಳು ಪದೇಪದೆ ರೇವಣ್ಣ ಅವರ ಆಪ್ತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಆಗಸ್ಟ್ 9 ರಂದು ರೇವಣ್ಣ ಅವರ ಆಪ್ತ ಕೃಷ್ಣೇಗೌಡ ಅವರನ್ನು ಕೊಲೆ ಮಾಡಲಾಗಿತ್ತು. ಇವರು ಗ್ರಾನೈಟ್ ಉದ್ಯಮಿ ಮತ್ತು ಗುತ್ತಿಗೆದಾರರಾಗಿದ್ದರು. ಇಂದು ಮತ್ತೊಬ್ಬ ಆಪ್ತ ಹಾಗೂ ಗುತ್ತಿಗೆದಾರನ ಮೇಲೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಅಶ್ವತ್ಥ್ ಗೌಡ ಕೊಲೆಗೆ ಯತ್ನ ಪ್ರಕರಣ ಸಂಬಂಧ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಎಸ್‌ಪಿ ಮೊಹಮ್ಮದ್ ಸುಜಿತಾ, ರಾತ್ರಿ 8.30ರ ಸಮಯದಲ್ಲಿ ದುಷ್ಕರ್ಮಿಗಳ ಗುಂಪು ಹತ್ಯೆಗೆ ಯತ್ನಿಸಿದೆ. ಕಾರಿಗೆ ಕಲ್ಲು ಎಸೆದು ಹಲ್ಲೆಗೆ ಮುಂದಾಗಿದ್ದಾರೆ. ಯಾರು ದಾಳಿ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಘಟನೆ ಬಗ್ಗೆ ಮಾಹಿತಿ ಪಡೆದು ತಿಳಿಸುತ್ತೇನೆ. ಗುತ್ತಿಗೆದಾರ ಅಶ್ವತ್ಥ್ ಗೌಡ ಅವರಿಗೆ ಸೂಕ್ತ ರಕ್ಷಣೆಯನ್ನು ನೀಡುತ್ತೇವೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Tue, 10 October 23