ಶಿರಾಡಿ ರಸ್ತೆ ಬಂದ್ ವಿಚಾರದಲ್ಲಿ ಜಟಾಪಟಿ; ಜನವರಿ 20ಕ್ಕೆ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧಾರ
ಜನವರಿ 6ರಂದು ಈ ಬಗ್ಗೆ ಎನ್,ಎಚ್.ಎ ಹಾಸನ ಡಿಸಿಗೆ ಪತ್ರ ಬರೆಯುತ್ತಲೆ ರಾಷ್ಟ್ರೀಯ ಹೆದ್ದಾರಿ 75 ಶಿರಾಢಿ ಘಾಟ್ ಉಳಿಸಿ ಹೋರಾಟ ಸಮಿತಿ ಸಭೆ ಸೇರಿ ಯಾವುದೇ ಕಾರಣದಿಂದ ಈ ರಸ್ತೆ ಬಂದ್ ಮಾಡಲು ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿತ್ತು.
ಹಾಸನ: ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರನ್ನ ಸಂಪರ್ಕಿಸೋ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಶಿರಾಢಿ ಘಾಟ್ ರಸ್ತೆ ದುರಾಸ್ತಿಗಾಗಿ ಬಂದ್ ಮಾಡೋ ವಿಚಾರ ಭಾರೀ ವಿರೋಧಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾಪಕ್ಕೆ ಜನ ಹಾಗೂ ಜನ ಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಆಮೆ ವೇಗದಲ್ಲಿ ನಡೆಯುತ್ತಿರೋ ಕಾಮಗಾರಿಯನ್ನ ಮೊದಲು ಮುಗಿಸಿ, ನಂತರ ಶಿರಾಡಿ ರಸ್ತೆ ಬಂದ್ ಬಗ್ಗೆ ಯೋಚಿಸಿ ಎಂದು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಜನ ಪ್ರತಿನಿಧಿಗಳು ಹಾಸನ ಮಂಗಳೂರು ಡಿಸಿಗಳು ಜನ ಹಾಗು ಜನ ಪ್ರತಿನಿಧಿಗಳು ಜನವರಿ 20ಕ್ಕೆ ಸ್ಥಳ ಪರಿಶೀಲನೆ ನಡೆಸಿ ನೈಜ ಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮ ಎಂದು ತೀರ್ಮಾನ ಮಾಡಿದ್ದಾರೆ.
ಶಿರಾಡಿ ರಸ್ತೆ ಬಂದ್ ವಿಚಾರದಲ್ಲಿ ಜಟಾಪಟಿ..ಎನ್.ಎಚ್.ಎ ಪ್ರಸ್ತಾಪಕ್ಕೆ ಭಾರೀ ವಿರೋಧ ರಾಜ್ಯ ರಾಜದಾನಿ ಬೆಂಗಳೂರಿಗೆ ಬಂದರು ನಗರಿ ಮಂಗಳೂರನ್ನ ಸಂಪರ್ಕಿಸೋ ಏಕೈಕ ರಾಷ್ಟ್ರೀಯ ಹೆದ್ದಾರಿ 75ರ ದುರಸ್ಥಿಗಾಗಿ ಶೀರಾಡಿ ಘಾಟ್ ಅನ್ನು 6 ತಿಂಗಳು ಬಂದ್ ಮಾಡಬೇಕು ಎನ್ನೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾಪ ಈ ಭಾಗದ ಜನ ಹಾಗು ಜನ ಪ್ರತಿನಿಧಿಗಳನ್ನ ಕೆರಳಿಸಿದೆ. ಹಾಸನದಿಂದ ಸಕಲೇಶಫುರ ತಾಲೂಕಿನ ಮಾರನಹಳ್ಳಿವರೆಗೆ ಒಟ್ಟು 46 ಕಿಲೋಮೀಟರ್ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿ 700 ಕೋಟಿ ವೆಚ್ಚದಲ್ಲಿ ಆರಂಭಗೊಂಡು ಆರುವರೆ ವರ್ಷ ಆಗಿದೆ. ಇನ್ನೂ ಶೇಕಡಾ 30ರಷ್ಟು ಕೆಲಸ ಮಾತ್ರ ಆಗಿದೆ. ವಿಸ್ತಾರ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಕಾಮಗಾರಿಯನ್ನ ಮುಗಿಸದೆಯೇ ಘಾಟ್ ಪ್ರದೇಶದ ಸಕಲೇಶಪುರ ಹೊರ ವಲಯದ ದೋಣಿಗಲ್ ನಿಂದ ಮಾರನಹಳ್ಳಿವರೆಗೆ 10 ಕಿಲೋಮೀಟರ್ ರಸ್ತೆ ನಿರ್ಮಿಸಲು 6 ತಿಂಗಳು ರಸ್ತೆ ಬಂದ್ ಮಾಡಿಕೊಡಿ ಎಂದು ಕೇಳಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜನವರಿ 6ರಂದು ಈ ಬಗ್ಗೆ ಎನ್,ಎಚ್.ಎ ಹಾಸನ ಡಿಸಿಗೆ ಪತ್ರ ಬರೆಯುತ್ತಲೆ ರಾಷ್ಟ್ರೀಯ ಹೆದ್ದಾರಿ 75 ಶಿರಾಢಿ ಘಾಟ್ ಉಳಿಸಿ ಹೋರಾಟ ಸಮಿತಿ ಸಭೆ ಸೇರಿ ಯಾವುದೇ ಕಾರಣದಿಂದ ಈ ರಸ್ತೆ ಬಂದ್ ಮಾಡಲು ಅವಕಾಶ ನೀಡಲ್ಲ ಎಂದು ಪಟ್ಟು ಹಿಡಿದಿತ್ತು. ಹಾಗಾಗಿ ಇಂದು ಹಾಸನ ಡಿಸಿ ಕಛೇರಿಯಲ್ಲಿ ಸ್ಥಳೀಯ ಶಾಸಕ ಕುಮಾರಸ್ವಾಮಿ, ಹಾಸನ ಚಿಕ್ಕಮಗಳೂರು, ಹಾಗು ಮಂಗಳೂರು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಯ್ತು, ಅದಿಕಾರಿಗಳೂ ಕೂಡ ಸಭೆಯಲ್ಲಿ ಆನ್ಲೈನ್ ಮೂಳಕ ಬಾಗಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಆದ್ರೆ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕಿಡಿಕಾರಿದ ಹೋರಾಟ ಸಮಿತಿ ಸದಸ್ಯರು ನೀವು ಹಾಸನ ಬಿಟ್ಟು ತೊಲಗಿ ಎಂದು ಆಕ್ರೋಶ ಹೊರ ಹಾಕಿದ್ರು. ಯಾವುದೇ ಕಾರಣದಿಂದ ಶಿರಾಡಿ ರಸ್ತೆ ಬಂದ್ ಮಾಡೋ ಹಾಗಿಲ್ಲ. ಮೊದಲು ಹಾಸನದಿಂದ ಸಕಲೇಶಫುರದ ವರೆಗಿನ ರಸ್ತೆ ಕಾಮಗಾರಿ ಪೂರ್ಣ ಮುಗಿಸಿ ಬಳಿಕ ಶಿರಾಢಿ ಘಾಟ್ ಪ್ರದೇಶಧಲ್ಲಿ ಪ್ರಾಥಮಿಕ ಕೆಲಸ ಮುಗಿಸಿ ಒಂದು ಭಾಗದ ರಸ್ತೆ ಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಟ್ಟು ಕೆಲಸ ಮಾಡಿ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿನ ವರೆಗೂ ನಾಲ್ಕು ಪಥದ ರಸ್ತೆ ನಿರ್ಮಿಸಬೇಕು ಎನ್ನೊ ಯೋಜನೆಯಲ್ಲಿ ಬೆಂಗಳೂರಿನಿಂದ ಹಾಸನದ ವರೆಗೆ ಈ ಕಾಮಗಾರಿ ಮುಗಿದು ದಶಕಗಳೇ ಆಗಿವೆ ಹಾಗಾಗಿಯೇ ಹಾಸನದಿಂದ ಮಾರನಹಳ್ಳಿವರೆಗೆ 700 ಕೋಟಿ ವೆಚ್ಚದಲ್ಲಿ ಐಸೊಲೆಕ್ಸ್ ಎಂಬ ಕಂಪನಿ ಆರುವರೆ ವರ್ಷಗಳ ಹಿಂದೆ ಕೆಲಸ ಶುರುಮಾಡಿತ್ತು. ಆದ್ರೆ ಆ ಕಂಪನಿ ದಿವಾಳಿಯಾದ ಕಾರಣ ಎರಡೂವರೆ ವರ್ಷಗಳ ಹಿಂದೆ ರಾಜಕಮಲ್ ಕಂಪನಿ ಕಾಮಗಾರಿ ಕೈಗೆತ್ತಿಕೊಂಡಿದೆ. ಆದ್ರೆ ಎರಡೂವರೆ ವರ್ಷದಲ್ಲಿ ಆಗಿರೋ ಕೆಲಸ ಕೇವಲ 30 ಪರ್ಸೆಂಟ್ ಮಾತ್ರ. ನಿಧಾನಗತಿಯ ಕಾಮಗಾರಿಯಿಂದ ಈ ಭಾಗದಲ್ಲಿ ಓಡಾಡೋ ಜನರಿಗೆ ಸಾಕಷ್ಟು ಸಮಸ್ಯೆ ಆಗಿದೆ.
ಇದೇ ಕಾರಣದಿಂದ ಈಗ ರಸ್ತೆ ಬಂದ್ ಮಾಡೋದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಸಂಶದರ ನೇತೃತ್ವದ ಸಭೆಯಲ್ಲಿ ನೇರಾ ನೇರಾ ಜನರು ಆಕ್ರೋಶ ಹೊರ ಹಾಕಿದ್ದಾರೆ. ಸ್ವತಃ ಸ್ಥಳೀಯ ಶಾಸಕ ಎಚ್,ಕೆ.ಕುಮಾರಸ್ವಾಮಿ ಹಾಗು ಸಂಸದರು ಕೂಡ ಎನ್.ಎಚ್.ಎ ಅಧಿಕಾರಿಗಳು ಇಂಜಿನಿಯರ್ ಗಳ ಕಾರ್ಯ ವೈಖರಿ ಬಗ್ಗೆ ಅಸಮಧಾನ ಹೊರ ಹಾಕಿದ್ದಾರೆ. ನಿಮ್ಮ ಬೇಜಾವಾಬ್ದಾರಿಯಿಂದ ನಾವು ಜನರಿಂದ ಉಗಿಸಿಕೊಳ್ಳೋ ಹಾಗಾಗಿದೆ, ಇದು ರಾಜ್ಯದ ಲೈಫ್ ಲೈನ್ ರಸ್ತೆ, ಈ ರಸ್ತೆ ಬಂದ್ ಆದ್ರೆ ಕೇವಲ ಹಾಸನದ ಜನತೆ ಮಾತ್ರವಲ್ಲ ಇಡೀ ರಾಜ್ಯದ ಜನತೆಯೇ ಪರಿತಪಿಸುತ್ತಾರೆ. ನಿತ್ಯ 40 ಸಾವಿರ ವಾಹನಗಳು ಓಡಾಡೋ ರಸ್ತೆ ಇದು, ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ವೈದ್ಯಕೀಯ ಸಾಮಗ್ರಿ, ಆಹಾರ ಪದಾರ್ಥಗಳ ಸಾಗಾಟಕ್ಕೂ ಇದೇ ಪ್ರಮುಖ ಮಾರ್ಗ. ಹಾಗಾಗಿ ರಸ್ತೆಯನ್ನ ಸಂಪೂರ್ಣ ಬಂದ್ ಮಾಡೋ ಪ್ರಶ್ನೆ ಇಲ್ಲ. ಈ ಬಗ್ಗೆ ಜನವರಿ 20ಕ್ಕೆ ಮಂಗಳೂರು ಜಿಲ್ಲಾಧಿಕಾರಿಗಳ ತಂಡ, ಹಾಸನ ಜಿಲ್ಲಾದಿಕಾರಿಗಳ ತಂಡ, ಸಂಶದರು, ಶಾಸಕರು, ಸ್ಥಳೀಯ ಹೋರಾಟಗಾರರು ಖುದ್ದು ಸ್ಥಳ ಪರಿಶೀಲನೆ ನಡೆಸುತ್ತೇವೆ. ನೈಜತೆ ಅರಿತ ಬಳಿಕ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎನ್ನೋ ಮೂಳಕ ಶಿರಾಢಿ ರಸ್ತೆ ಬಂದ್ ಬಗ್ಗೆ ಪರೋಕ್ಷ ಅಸಮ್ಮತಿ ಸೂಚಿಸಿದ್ದಾರೆ.
ಒಟ್ನಲ್ಲಿ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75ರ ಆಮೆ ವೇಗದ ಕಾಮಗಾರಿಯಿಂದ ಈ ಭಾಗದ ಜನರು ನಿತ್ಯವೂ ಪರಿತಪಿಸುತ್ತಿದ್ದಾರೆ. ಕೋಟಿ ಕೋಟಿ ಖರ್ಚುಮಾಡಿ ರಸ್ತೆ ನಿರ್ಮಿಸೋ ಸರ್ಕಾರದ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರಿಗೆ ಸಂಕಷ್ಟ ತಂದೊಡ್ಡುತ್ತಿದ್ದು ಈಗ ರಸ್ತೆ ಮಾಡ್ತೀವಿ ಎಂದರೂ ಜನರು ಅನುಮಾನಪಡುವ ಸ್ಥಿತಿ ನಿರ್ಮಾಣವಾಗಿದ್ದು ಕೂಡಲೆ ಇರೋ ಗೊಂದಲ ನಿವಾರಿಸಿ ರಸ್ತೆಕಾಮಗಾರಿಯನ್ನ ಶೀಘ್ರ ಮುಗಿಸೋ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕಿದೆ.
ವರದಿ: ಮಂಜುನಾಥ್.ಕೆ.ಬಿ. ಟಿವಿ9 ಹಾಸನ
ಇದನ್ನೂ ಓದಿ: 5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಕೊವಿಡ್-19 ವಿರುದ್ಧ ಲಸಿಕೆ ಹಾಕಬೇಕು: ತಜ್ಞ ಡಾ.ಫಹೀಮ್ ಯೂನಸ್
Published On - 11:06 am, Wed, 19 January 22