ಗುರುತು ಕೂಡ ಸಿಗದಂತೆ ಪತ್ತೆಯಾಗ್ತಿವೆ ಮೃತದೇಹಗಳು; ಶವಗಳ ತಾಣವಾಗ್ತಿದೆ ಮಾರನಹಳ್ಳಿ ಹೆದ್ದಾರಿ, ಏನಿದರ ರಹಸ್ಯ?
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆ ಆಗಿದ್ರು. ಮಹಿಳೆಯ ಬಲಗೈ ಮೇಲೆ ಮೂರ್ತಿ ಎಂದು ಬರೆಸಿಕೊಂಡಿರೋ ಹಚ್ಚೆ ಗುರುತು ಇತ್ತು.
ಹಾಸನ: ಅಲ್ಲಿನ ಜನ ರಾತ್ರಿ ವೇಳೆ ಓಡಾಡೋಕೆ ಭಯಪಡುತ್ತಿದ್ದಾರೆ. ಒಂಟಿಯಾಗಿ ಹೊರಗೆ ಕಾಲಿಡಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಯಾವಾಗ ಏನ್ ಆಗುತ್ತೋ ಅನ್ನೋ ಆತಂಕದಲ್ಲಿದ್ದಾರೆ. ಯಾಕಂದ್ರೆ ಗುರುತೇ ಸಿಗದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗುತ್ತಿದೆ.
ಅಪರಿಚಿತ ಶವ ಪತ್ತೆ.. ಜನರಿಗೆ ಆತಂಕ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಶವವಾಗಿ ಪತ್ತೆ ಆಗಿದ್ರು. ಮಹಿಳೆಯ ಬಲಗೈ ಮೇಲೆ ಮೂರ್ತಿ ಎಂದು ಬರೆಸಿಕೊಂಡಿರೋ ಹಚ್ಚೆ ಗುರುತು ಇತ್ತು. ಆದ್ರೆ, ಇಲ್ಲಿ ಶವವಾಗಿ ಪತ್ತೆಯಾದ ಮಹಿಳೆ ಯಾರು? ಯಾವ ಊರಿನವರು ಅನ್ನೋದು ಯಾರಿಗೂ ಗೊತ್ತಿಲ್ಲ. ಮೇಲ್ನೋಟಕ್ಕೆ ಯಾರೋ ಪಾಪಿಗಳು ಕೊಲೆ ಮಾಡಿ ಮೃತದೇಹ ಬಿಸಾಡಿದ್ದಾರೆ ಅನ್ನೋ ಶಂಕೆ ವ್ಯಕ್ತವಾಗ್ತಿದೆ. ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಸಾವಿನ ರಹಸ್ಯ ಬೇಧಿಸಲು ಮುಂದಾಗಿದ್ದಾರೆ. ಸಣ್ಣ ಸುಳಿವು ಸಿಕ್ಕರೇ ಸಾಕು ಸಾವಿನ ರಹಸ್ಯ ಬಯಲು ಮಾಡಲು ಖಾಕಿ ಟೀಮ್ ಪ್ರಯತ್ನ ಮಾಡ್ತಿದೆ.
ಇನ್ನು, ಕಳೆದ ಎರಡು ವರ್ಷಗಳ ಹಿಂದೆ ಯಸಳೂರು ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಶವವೊಂದರ ರಹಸ್ಯ ವರ್ಷಗಳ ಬಳಿಕ ಬಯಲಾಗಿತ್ತು. ಅಲ್ದೆ, ಮೂರು ತಿಂಗಳ ಹಿಂದೆ ಬಿಸಿಲೆಘಾಟ್ ವ್ಯಾಪ್ತಿಯ ಹಿಜ್ಜನಹಳ್ಳಿ ಬಳಿ ಗೋಣಿ ಚೀಲವೊಂದರಲ್ಲಿ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ. ಇದೀಗ ಮತ್ತೊಂದು ಮಹಿಳೆ ಶವ ಶಿರಾಢಿಘಾಟ್ನಲ್ಲಿ ಪತ್ತೆಯಾಗಿದ್ದು, ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ. ಪದೇ ಪದೆ ಇಂತಹ ಘಟನೆಗಳು ನಡೆಯುತ್ತಿರೋದ್ರಿಂದ ಸ್ಥಳೀಯರು ಭಯ ಪಡುತ್ತಿದ್ದಾರೆ. ಅಲ್ದೆ, ಪ್ರವಾಸಿತಾಣ ಆಗಿರೋದ್ರಿಂದ ಪೊಲೀಸ್ ಇಲಾಖೆ ಜೊತೆಗೆ ಪ್ರವಾಸೋದ್ಯಮ ಇಲಾಖೆ ಕೂಡ ಈ ಪ್ರದೇಶಗಳಲ್ಲಿ ಅಗತ್ಯಕ್ರಮ ಕೈಗೊಳ್ಳಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ನಲ್ಲಿ ಗುರುತೇ ಸಿಗದ ರೀತಿಯಲ್ಲಿ ಪತ್ತೆಯಾಗೋ ಶವಗಳು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕೋ ಜೊತೆಗೆ ಪೊಲೀಸರ ತನಿಖೆಗೂ ದೊಡ್ಡ ಸವಾಲಾಗುತ್ತಿವೆ. ಕೊಲೆಯೋ ಆತ್ಮಹತ್ಯೆಯೋ ಅನ್ನೋ ಪ್ರಶ್ನೆ ಒಂದೆಡೆಯಾದ್ರೆ, ಮೃತಪಟ್ಟು ತಿಂಗಳುಗಳೇ ಕಳೆದರೂ ಸಣ್ಣ ಸುಳಿವು ಪತ್ತೆಯಾಗ್ತಿಲ್ಲ. ಇದ್ರಿಂದ ಜನರಿಗೆ ಯಾವಾಗ ಏನ್ ಆಗುತ್ತೋ ಅನ್ನೋ ಭೀತಿ ಎದುರಾಗಿದೆ.
ವರದಿ: ಮಂಜುನಾಥ್.ಕೆ.ಬಿ. ಟಿವಿ9. ಹಾಸನ
ಇದನ್ನೂ ಓದಿ: ಇಂಡಿಯನ್ ರಾಕ್ ಪ್ರಭೇದದ ಅಪರೂಪದ ಹೆಬ್ಬಾವು ಪತ್ತೆ; ವಿಡಿಯೋ ನೋಡಿ