
ಹಾಸನ, (ಜೂನ್ 07): ಡಿಕೆ ಶಿವಕುಮಾರ್ (DK Shivakumar) ನೇತೃತ್ವದ ಸರ್ಕಾರ ರಚನೆಯಾಗಿದ್ದು, 2ನೇ ಹಂತದಲ್ಲಿ ಸಚಿವ ಸಂಪುಟ ಸೇರಸಲು ಶಾಸಕರು ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯನವರ ಪರಮಾಪ್ತ ಜಮೀರ್ ಅಹಮ್ಮದ್ ಖಾನ್ (zameer ahmed khan) ಅವರನ್ನು ಮಂತ್ರಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿವೆ. ಇದರ ಮಧ್ಯೆ ಕೋಡಿಮಠದ (Kodi Math) ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Shivananda Shivayogi Rajendra Swamiji) ಜಮೀರ್ ಪರ ಬ್ಯಾಟಿಂಗ್ ಮಾಡಿದ್ದು, ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಅಲ್ಲಾ, ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಸರ್ಕಾರ. ಆ ದೃಷ್ಟಿಯಿಂದ ಜಮೀರ್ ಅವರು ಮಂತ್ರಿಮಂಡಲ ಸೇರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹಾಸನದ ಅರಸೀಕೆರೆಯ ಅಲ್ ಅಮೀನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಕೋಡಿಶ್ರೀ, ಜಮೀರ್ ಅಹಮ್ಮದ್ ಖಾನ್ ಅವರ ಆಡಿಯೋ ವಿಚಾರ ಅಪಪ್ರಚಾರದ ಉದ್ದೇಶದಿಂದ ಆಗಿದೆ. ಇನ್ನೊಂದು ದೊಡ್ಡ ಅಪಪ್ರಚಾರ ಇತ್ತು. ಇದು ಮೊದಲು ಬಂದು ಆ ಅಪಪ್ರಚಾರ ಮುಚ್ಚಿ ಹೋಗುತ್ತಿದೆ. ಜಮೀರ್ ಹೆದರುವ ಅವಶ್ಯಕತೆ ಇಲ್ಲ. ಅವರು ಮತ್ತೊಮ್ಮೆ ಮಂತ್ರಿಮಂಡಲ ಸೇರುತ್ತಾರೆ ಎಂದಿದ್ದಾರೆ.
ಜಮೀರ್ ಜೊತೆಗೆ ನಮ್ಮ ಶಿವಲಿಂಗೇಗೌಡರಿಗೂ ಮಂತ್ರಿ ಸ್ಥಾನ ಸಿಗುತ್ತದೆ. ಯೋಚನೆ ಮಾಡುವುದು ಬೇಡ. ಸಂಬಂಧಪಟ್ಟವರ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ನಾಳೆಯೂ ಮಾತನಾಡುತ್ತೇನೆ. ಯಾವ ಕಾರಣಕ್ಕೂ ಜಮೀರ್ ಇಲ್ಲದ ಸರ್ಕಾರ ಆಗಲ್ಲ. ಜಮೀರ್ ಇದ್ದರೆ ಮಾತ್ರ ಅದು ಸರ್ಕಾರ ಎನಿಸಿಕೊಳ್ಳುತ್ತದೆ. ಆ ದೃಷ್ಟಿಯಿಂದ ಅವರು ಮತ್ತೊಮ್ಮೆ ಮಂತ್ರಿ ಆಗುತ್ತಾರೆ. ಯಾವುದೇ ಕಾರಣಕ್ಕೂ ಆಕ್ರೋಶಕ್ಕೆ ಒಳಗಾಗಬೇಡಿ. ಶಾಂತಿಯಿಂದ ಇರಿ. ಇದರ ಬಗ್ಗೆ ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಡಿಕೆಶಿಗೆ ಸಿಎಂ ಯೋಗ: ನಿಜವಾಯ್ತು ಕೋಡಿಶ್ರೀ ಭವಿಷ್ಯ, ಸಿದ್ದರಾಮಯ್ಯ ಬಗ್ಗೆ ಅಂದು ಸ್ವಾಮೀಜಿ ಹೇಳಿದ್ದೇನು?
ಜಮೀರ್‌ಗೆ ಮಂತ್ರಿ ಸ್ಥಾನ ಸಿಕ್ಕಿದ ಕೂಡಲೇ ಇಲ್ಲಿಗೆ ಕರೆದುಕೊಂಡು ಬರೋಣ. ಅವರ ಮೇಲೆ ಭಗವಂತನ ಕೃಪೆ ಇದೆ. ಅವರು ಜಾತ್ಯತೀತವಾಗಿ ದುಡಿದು ಸಮಾಜ ಸೇವೆ ಮಾಡಿದ್ದಾರೆ. ಅವರಿಗೆ ನಾವೆಲ್ಲಾ ಬೆಂಬಲ ಕೊಡೋಣ. ಅವರು ಮತ್ತೆ ರಾಜ್ಯದ ಮಂತ್ರಿಯಾಗುವುದನ್ನು ನೋಡಿ ಸಂತೋಷ ಪಡೋಣ. ಮುಂದೆ ಜಮೀರ್ ಮತ್ತು ಶಿವಲಿಂಗೇಗೌಡ ಇಬ್ಬರಿಗೂ ನಮ್ಮ ಮಠದಲ್ಲಿ ಸನ್ಮಾನ ಮಾಡೋಣ ಎಂದು ಜಮೀರ್ ಪರ ಸ್ವಾಮೀಜಿ ಬ್ಯಾಟ್ ಬೀಸಿದ್ದಾರೆ.
ಸಿದ್ದರಾಮಯ್ಯನವರೇ ಸ್ವಯಂಪ್ರೇರಿತರಾಗಿ ಬಿಟ್ಟು ಕೊಟ್ಟರೇ ಮಾತ್ರ ಡಿಕೆ ಶಿವಕುಮಾರ್ ಅವರು ಸಿಎಂ ಆಗುತ್ತಾರೆ ಎಂದು ಈ ಹಿಂದೆ ಇದೇ ಕೋಡಿಶ್ರೀ ಭವಿಷ್ಯ ನುಡಿದಿದ್ದರು. ಅದರಂತೆ ಸಿದ್ದರಾಮಯ್ಯನವರು ತಾವಾಗಿಯೇ ಯಾವುದೇ ಗೊಂದಲ ಮಾಡಿಕೊಳ್ಳದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಡಿಕೆ ಶೀವಕುಮಾರ್ ಅವರು ಸಿಎಂ ಆಗಿದ್ದು, ಕೋಡಿಶ್ರೀ ಹೇಳಿದ್ದ ಭವಿಷ್ಯ ನಿಜವಾಗಿದೆ. ಇದೀಗ ಜಮೀರ್ ಅವರು ಮಂತ್ರಿಯಾಗುತ್ತಾರೆಂದು ಭವಿಷ್ಯ ನುಡಿದಿದ್ದು, ಏನಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.