AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಪರ್ ಬೆಲೆ ಇದ್ದಾಗಲೇ ಮಳೆಗೆ ಬಿಳಿ ಬಂಗಾರ ನಾಶ; ರೈತ ಕಂಗಾಲು

ಹತ್ತಿಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದ್ದಾಗಲೇ ನಿರಂತರ ಮಳೆ ಸುರಿದು ಬೆಳೆ ನಾಶಗೊಂಡಿದ್ದು, ಉತ್ತಮ ಆದಾಯ ಗಳಿಸಬಹುದು ಎಂದು ಭಾವಿಸಿದ್ದ ರೈತರು ಕಂಗಾಲಾಗಿದ್ದಾರೆ. ಬಿಳಿ ಬಂಗಾರ ಆಗಬೇಕಿದ್ದ ಹತ್ತಿ ಬೆಳೆ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗಿದೆ.

ಬಂಪರ್ ಬೆಲೆ ಇದ್ದಾಗಲೇ ಮಳೆಗೆ ಬಿಳಿ ಬಂಗಾರ ನಾಶ; ರೈತ ಕಂಗಾಲು
ಮಳೆಗೆ ಹತ್ತಿ ಬೆಳೆ ನಾಶ
TV9 Web
| Edited By: |

Updated on:Oct 25, 2022 | 9:58 AM

Share

ಹಾವೇರಿ: ಉತ್ತಮ ಬೆಲೆ ಇರುವಾಗಲೇ ತಾಲೂಕಿನಾದ್ಯಂತ ಸುರಿದ ನಿರಂತರ ಮಳೆಗೆ ಬಿಳಿ ಬಂಗಾರ (ಹತ್ತಿ) ಬೆಳೆಗಳು ನಾಶಗೊಂಡು ರೈತರು ಕಂಗಾಲಾಗಿದ್ದಾರೆ. ಹೊಂಬರಡಿ ಗ್ರಾಮದ ಒಂದು ನೂರು ಎಕರೆಗೂ ಅಧಿಕ ಜಮೀನಿನಲ್ಲಿ ರೈತರು ಹತ್ತಿ ಬೆಳೆದಿದ್ದರು. ಸದ್ಯ ಹತ್ತಿಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಕ್ವಿಂಟಲ್​ಗೆ ಕನಿಷ್ಠ 7 ಸಾವಿರದಿಂದ ಗರಿಷ್ಠ 11 ಸಾವಿರ ರೂಪಾಯಿವರೆಗೆ ದರ ಇದೆ. ಹತ್ತಿ ಬೆಳೆ ಕೂಡ ರೈತರ ನಿರೀಕ್ಷೆ ಹುಸಿ ಮಾಡುವಂತೆ ಭರಪೂರ ಬೆಳೆದು ನಿಂತಿತ್ತು. ಹೀಗಾಗಿ ರೈತರು ಕೈತುಂಬಾ ಆದಾಯ ಪಡೆಯುವ ಭರವಸೆಯಲ್ಲಿದ್ದರು. ಆದರೆ ಕೆಲವು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಸುರಿಯುತ್ತಿರುವ ಮಳೆಗೆ ಜಮೀನಿನಲ್ಲಿದ್ದ ಹತ್ತಿ ಬೆಳೆ ಸಂಪೂರ್ಣ ಹಾಳಾಗಿದೆ. ರೈತರು ತಮ್ಮ ಪಾಲಿಗೆ ಬಿಳಿ ಬಂಗಾರ ಆಗುತ್ತದೆ ಅಂತಾ ನಂಬಿದ್ದ ಹತ್ತಿ, ವರುಣನ ಆರ್ಭಟಕ್ಕೆ ಸಿಕ್ಕು ಕಪ್ಪು ಬಣ್ಣಕ್ಕೆ ತಿರುಗಿ ಕೊಳೆತು ಯಾವುದಕ್ಕೂ ಬಾರದಂತಾಗಿದೆ. ಇದು ಹತ್ತಿ ಬೆಳೆದಿದ್ದ ರೈತರನ್ನು ದಿಕ್ಕು ತೋಚದಂತೆ ಮಾಡಿದೆ.

ಇನ್ನು ರೈತರು ಹತ್ತಿ ಬೆಳೆಯಲು ಬಿತ್ತನೆ ಬೀಜ, ಗೊಬ್ಬರ, ಔಷಧಿ, ಆಳುಗಳ ಖರ್ಚು ಸೇರಿದಂತೆ ಪ್ರತಿ ಎಕರೆಗೆ ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಹಣ ವ್ಯಯ ಮಾಡಿದ್ದಾರೆ. ಕೆಲವು ರೈತರು ಮುಂಗಾರು ಮಳೆಯ ವ್ಯತ್ಯಾಸದಿಂದ ಎರಡೆರಡು ಬಾರಿ ಬಿತ್ತನೆ ಮಾಡಿದ್ದರು. ನಿರೀಕ್ಷೆಯಂತೆ ಉತ್ತಮವಾಗಿಯೇ ಬೆಳೆ ಬೆಳೆದುನಿಂತಿತ್ತು. ಹತ್ತಿ ಈಗ ಕಾಯಿ ಕಟ್ಟಿ ಒಡೆಯುವ ಸಮಯಕ್ಕೆ ಬಂದಿತ್ತು. ಕೆಲವೆಡೆ ಹತ್ತಿ ಕಾಯಿ ಒಡೆದು ಅರಳಿ ನಿಂತಿದೆ. ಆದರೆ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹತ್ತಿ ಬೆಳೆ ಕಪ್ಪಾಗಿದೆ. ಅಲ್ಲದೆ ನೀರು ನಿಂತು ಹತ್ತಿ ಗಿಡಗಳು ಕೂಡ ಕೊಳೆಯಲು ಆರಂಭಿಸಿವೆ.

ವರುಣನ ಆರ್ಭಟದಿಂದ ಹಾಳಾಗಿರುವ ಹತ್ತಿ ಬೆಳೆ ಕಳೆದುಕಂಡು ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿ ರೈತರು ಇದ್ದಾರೆ. ರೈತರು ವರುಣನ ಆರ್ಭಟದಿಂದ ಇಷ್ಟೆಲ್ಲ ಹಾನಿ ಅನುಭವಿಸುತ್ತಿದ್ದರೂ ಈವರೆಗೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ಮಾಡಿಲ್ಲ. ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಕೊಡಿಸುವ ಕೆಲಸ ಮಾಡಿಲ್ಲ. ಇದು ಹತ್ತಿ ಬೆಳೆದ ರೈತರನ್ನು ಚಿಂತೆಗೀಡು ಮಾಡಿದೆ.

ಕೃಷಿಯನ್ನೆ ನಂಬಿದ್ದ ಗ್ರಾಮದ ರೈತರಿಗೆ ಮಳೆಯ ಹೊಡೆತ ಬಿದ್ದಿದೆ. ಮಳೆಯಿಂದ ಸೃಷ್ಟಿಯಾದ ಆವಾಂತರ ಹತ್ತಿ ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದೆ. ಸಾಕಷ್ಟು ಸಾಲ ಮಾಡಿ ಹತ್ತಿ ಬೆಳೆದು ಕೃಷಿ ಮಾಡಿಕೊಂಡಿದ್ದ ರೈತರನ್ನು ಮಳೆ ಸಂಕಷ್ಟಕ್ಕೆ ದೂಡಿದೆ. ಕೂಡಲೇ ಸರಕಾರ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಬೇಕಿದೆ.

ವರದಿ: ಪ್ರಭುಗೌಡ.ಎನ್.ಪಾಟೀಲ, ಟಿವಿ9 ಹಾವೇರಿ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Tue, 25 October 22