ಮೂಲ ಸೌಕರ್ಯಗಳಿಂದ ವಂಚಿತವಾದ 19 ಕುಟುಂಬಗಳು; ಕನಿಷ್ಠ ವಾಹನ ವ್ಯವಸ್ಥೆಯಾದರೂ ಕಲ್ಪಿಸುವಂತೆ ಸ್ಥಳೀಯರಿಂದ ಮನವಿ
ಯಾರಿಗಾದರು ಆರೋಗ್ಯ ಸಮಸ್ಯೆಯಾದರೆ ಐದಾರು ಕಿ.ಮೀ ದೂರದ ಹೊಸೂರು, ಇಲ್ಲವೆ ಏಳೆಂಟು ಕಿ.ಮೀ ದೂರದಲ್ಲಿರುವ ಮುಂಡಗೋಡ ಪಟ್ಟಣಕ್ಕೆ ತೆರಬೇಕಾದ ಸ್ಥಿತಿಯಿದೆ. ಹೀಗಾಗಿ ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಸ್ಥಳೀಯರಾದ ಬಾಬು ಮನವಿ ಮಾಡಿಕೊಂಡಿದ್ದಾರೆ.
ಹಾವೇರಿ: ಜಿಲ್ಲೆಯ ಕೊನೆಯ ಪ್ರದೇಶ ಎಂದು ಕರೆಸಿಕೊಳ್ಳುವ ಹೊಸೂರು ಗ್ರಾಮದಲ್ಲಿ ಸುಮಾರು ಹತ್ತೊಂಬತ್ತು ಕುಟುಂಬಗಳು ವಾಸವಾಗಿವೆ. ಆಕಳು, ಎಮ್ಮೆ ಸಾಕಾಣಿಕೆ ಮಾಡಿಕೊಂಡಿರುವ ಇಲ್ಲಿನ ಜನರು ಅರಣ್ಯವಾಸಿಗಳಾಗಿ ಬದುಕು ಸಾಗಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಮೂಲಭೂತ ಸೌಲಕರ್ಯಗಳಂತೂ ಇಲ್ಲವೆ ಇಲ್ಲ. ಇನ್ನು ಆಗಾಗ ಇಲ್ಲಿನ ಜನರ ಮೇಲೆ ಕರಡಿಗಳ ದಾಳಿಯೂ ಆಗುತ್ತಿರುತ್ತದೆ. ಚುನಾವಣೆ ಬಂದಾಗ ಮಾತ್ರ ಇಲ್ಲಿಗೆ ಜನಪ್ರತಿನಿಧಿಗಳು ಭೇಟಿ ನೀಡುತ್ತಾರೆ ಹೊರತು, ನಂತರ ಈ ಕಡೆ ಬರುವುದಿಲ್ಲ. ಇದು ಸಹಜವಾಗಿಯೇ ಈ ಭಾಗದ ಜನರ ಬೇಸರಕ್ಕೆ ಕಾರಣವಾಗಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೌಳೇರದೊಡ್ಡಿ ಜನರ ಸ್ಥಿತಿಯಿದು. ಇಲ್ಲಿ ಸುಮಾರು ಹತ್ತೊಂಬತ್ತು ಕುಟುಂಬಗಳು ವಾಸವಾಗಿವೆ. ಮಕ್ಕಳು, ಹೆಣ್ಣು ಮಕ್ಕಳು, ವೃದ್ಧರು ಸೇರಿದಂತೆ ನೂರಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಎಮ್ಮೆ, ಆಕಳು ಮತ್ತು ಕೋಳಿ ಸಾಕಾಣಿಕೆ ಮಾಡಿಕೊಂಡು ಅರಣ್ಯದಲ್ಲಿ ವಾಸವಾಗಿದ್ದಾರೆ. ಆದರೆ ಹತ್ತೊಂಬತ್ತು ಕುಟುಂಬಗಳು ವಾಸವಾಗಿರುವ ಇಲ್ಲಿ ರಸ್ತೆ, ಕುಡಿಯೋ ನೀರು, ವಿದ್ಯುತ್ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ.
ಯಾರಿಗಾದರು ಆರೋಗ್ಯ ಸಮಸ್ಯೆಯಾದರೆ ಐದಾರು ಕಿ.ಮೀ ದೂರದ ಹೊಸೂರು, ಇಲ್ಲವೆ ಏಳೆಂಟು ಕಿ.ಮೀ ದೂರದಲ್ಲಿರುವ ಮುಂಡಗೋಡ ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿಯಿದೆ. ಹೀಗಾಗಿ ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಸ್ಥಳೀಯರಾದ ಬಾಬು ಮನವಿ ಮಾಡಿಕೊಂಡಿದ್ದಾರೆ.
ಗೌಳೇರದೊಡ್ಡಿಯಲ್ಲಿ ಹತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕೆಲವರು ಕಾಲೇಜು, ಹೈಸ್ಕೂಲ್, ಪ್ರಾಥಮಿಕ ಶಿಕ್ಷಣ ಕಲಿತಿದ್ದಾರೆ. ಶಾಲಾ ಕಾಲೇಜಿಗೆ ತೆರಳುವ ಇಲ್ಲಿನ ಮಕ್ಕಳಿಗೂ ಯಾವುದೇ ಬಸ್ ಅಥವಾ ವಾಹನ ಸೌಕರ್ಯವಿಲ್ಲ. ಇಲ್ಲಿನ ಮಕ್ಕಳು ಕಾಡಿನಲ್ಲೇ ನಡೆದುಕೊಂಡು ಶಾಲೆಗೆ ಹೋಗಬೇಕಾದ ಪರಿಸ್ಥಿತಿಯಿದೆ. ಅರಣ್ಯ ಪ್ರದೇಶದಲ್ಲಿ ಈ ಕುಟುಂಬಗಳು ವಾಸವಾಗಿದ್ದರಿಂದ ಆಗಾಗ ಇಲ್ಲಿನ ಜನರು ಕರಡಿ ದಾಳಿಗೆ ಒಳಗಾಗ್ತಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿರುವ ಕರಡಿಗಳು ಆಗಾಗ ಇಲ್ಲಿನ ಜನರಿಗೆ ದರ್ಶನ ನೀಡಿವೆ.
ಪಡಿತರ ಚೀಟಿ, ಆಧಾರ ಕಾರ್ಡ್, ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಗ್ರಾಮ ಪಂಚಾಯತಿ, ಜಿಲ್ಲಾ, ತಾಲೂಕು ಪಂಚಾಯತಿ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ನಾಲ್ವತ್ತು ಜನರು ಮತದಾನ ಮಾಡುತ್ತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಒಂದೆರಡು ಬಾರಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಂದು ಹೋಗ್ತಾರೆ. ಮತದಾನಕ್ಕೆ ಕರೆದುಕೊಂಡು ಹೋಗಿ ಮತ ಹಾಕಿಸಿಕೊಳ್ತಾರೆ. ನಂತರ ಯಾರೂ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡೋ ಕೆಲಸಕ್ಕೆ ಮುಂದಾಗಿಲ್ಲ. ಇನ್ನು ಕ್ಷೇತ್ರದ ಶಾಸಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಈ ಜನರ ಬಗ್ಗೆ ಮಾಹಿತಿ ಗೊತ್ತಿದೆಯೋ ಇಲ್ವೋ ಎಂದು ಸ್ಥಳೀಯರಾದ ರಾಮು ಪ್ರಶ್ನೆ ಮಾಡಿದ್ದಾರೆ.
ಹತ್ತೊಂಬತ್ತು ಕುಟುಂಬಗಳು ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸವಾಗಿವೆ. ಪುಟ್ಟ ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಅರಣ್ಯದಲ್ಲೇ ವಾಸವಾಗಿದ್ದಾರೆ. ಕೆಲವೊಮ್ಮೆ ಕರಡಿ ದಾಳಿಗೆ ಒಳಗಾಗಿ ಸಮಸ್ಯೆ ಅನುಭವಿಸಿದ್ದಾರೆ. ಆದರೆ ಈವರೆಗೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿದಂತೆ ಯಾರೊಬ್ಬರೂ ಇಲ್ಲಿನ ಜನರಿಗೆ ಸುಸಜ್ಜಿತ ಮನೆ, ಕುಡಿಯೋ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸೋ ಮನಸ್ಸು ಮಾಡಿಲ್ಲ. ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿನ ಜನರ ಸಮಸ್ಯೆಗೆ ಸ್ಪಂಧಿಸಬೇಕಿದೆ.
ವರದಿ: ಪ್ರಭುಗೌಡ.ಎನ್.ಪಾಟೀಲ
ಇದನ್ನೂ ಓದಿ: ಕೊವಿಡ್ ಕೇರ್ ಸೆಂಟರ್ನಲ್ಲಿ ಮೂಲಸೌಕರ್ಯ ಕೊರತೆ; ತುಮಕೂರಿನಲ್ಲಿ ಸೋಂಕಿತರ ಆಕ್ರೋಶ
ಗೋಶಾಲೆಗೆ ಅನುದಾನದ ಕೊರತೆ; ಗೋವುಗಳ ದೈನಂದಿನ ನೆರವಿನ ಹಣ ಹೆಚ್ಚಿಸುವಂತೆ ಶಿವಲಿಂಗಾನಂದ ಶ್ರೀಗಳಿಂದ ಸರ್ಕಾರಕ್ಕೆ ಮನವಿ