
ಹಾವೇರಿ, (ನವೆಂಬರ್ 02): ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ (VAO) ಅಕ್ರಮ ಎಸಗಿ 151 ಅಂಕ ಪಡೆಯುವ ಮೂಲಕ ಮೊದಲ ರ‍್ಯಾಂಕ್ ಗಳಿಸಿ ಆರೋಪದ ಮೇಲೆ ಹಾವೇರಿಯ ಶಂಕರ್ ಬನ್ನೂರು ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಶಂಕರ್ ವಿಎ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕ ಪಡೆದಿದ್ದು, ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಕೆಇಎ ಸೂಚನೆ ಮೇರೆಗೆ ಹಾವೇರಿ ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ಶಂಕರ್ ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವುದು ಪತ್ತೆಯಾಗಿದೆ. ಹೀಗಾಗಿ ಶಂಕರ್ನನ್ನು ಈಗಾಗಲೇ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇನ್ನು ಈ ಸಂಬಂಧ ಹಾವೇರಿ ಜಿಲ್ಲಾಧಿಕಾರಿ ಮಾತನಾಡಿ, ಶಂಕರ್ ಹೇಗೆ ಟಾಫರ್ ಆದ ಎನ್ನುವ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈ ಪ್ರಕರಣದ ಹಾವೇರಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಅಕ್ಟೋಬರ್ 4 ರಂದು ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಯಲ್ಲಿ ಶಂಕರ್ ಬನ್ನೂರು ಅಕ್ರಮ ಎಸಗಿರುವುದು ಪತ್ತೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ತನಿಖೆ ನಡೆಸಲು ಎಸಿಯವರಿಗೆ ಸೂಚನೆ ನೀಡಿದ್ದೆವು. ಇದರಲ್ಲಿ ಎಲ್ಲವೂ ಪತ್ತೆಯಾಗಿದೆ. ಎಫ್ಐಆರ್ ದಾಖಲು ಮಾಡಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಮೊಬೈಲ್ ಬಳಕೆ ಮಾಡಿದ್ದಾರೆ ಅಂದ್ಮೇಲೆ ಲೋಪ ಆಗಿದೆ. ಪರೀಕ್ಷೆ ಕೇಂದ್ರದ ಸಿಬ್ಬಂದಿ ಪರೀಕ್ಷಾ ಆಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆ ನಂತರ ಗೊತ್ತಾಗಲಿದೆ. ಶಂಕರ ಬನ್ನೂರ ಕುರಿತು ಮಾಹಿತಿ ಕಲೆ ಹಾಕಿದೆವು. ಆತನ ಶೈಕ್ಷಣಿಕ ಅರ್ಹತೆ ಮತ್ತಿತರೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ್ದೇವೆ. ಮುಂಜಾಗ್ರತಾ ಕ್ರಮ ತೆಗೆದುಕೊಂಡಾಗಲೂ ಲೋಪ ಆಗಿದೆ, ತನಿಖೆ ಆದ್ಮೇಲೆ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ. ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ ಮೇಲೆ ಸತ್ಯ ಗೊತ್ತಾಗಲಿದೆ. ಏನಾದರೂ ಮಾಡಿ ತಪ್ಪಿಸಿಕೊಳ್ಳುತ್ತೇವೆ ಎಂಬುದು ಸುಳ್ಳು. ತನಿಖೆಯ ವರದಿ ಬಂದ್ಮೇಲೆ ಎಲ್ಲವೂ ಗೊತ್ತಾಗಲಿದೆ ಎಂದರು.
ನೇಮಕಾತಿ ಪರೀಕ್ಷೆ ನಡೆಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಸೂಚನೆ ಮೇರೆಗೆ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ನಿರ್ದೇಶನದಂತೆ ಸವಣೂರು ಎಸಿ ಸಮೀರ ಖೋಡೆ ಅವರು ಎಫ್ಐಆರ್ ದಾಖಲು ಮಾಡಿದ್ದಾರೆ. ಈ ದೂರಿನ ಮೇರೆಗೆ ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಮತ್ತು ಕರ್ನಾಟಕ ಪರೀಕ್ಷಾ ಕಾಯ್ದೆ 2023 ಅಡಿ ಎಫ್ಐಆರ್ ದಾಖಲಾಗಿದೆ.
ಅಕ್ಟೋಬರ್ 4ರಂದು ಶಿಗ್ಗಾವಿಯ ಬಿ.ಬಿ. ಮಾಮ್ಲೆದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕೆಇಎ ನಡೆಸಿದ್ದ ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಗೆ ಹಾನಗಲ್ ಪಟ್ಟಣದ ಗುಡಿಕೇರಿ ಓಣಿಯ ಎಲೆಪೇಟೆ ನಿವಾಸಿಯಾಗಿರುವ ಆರೋಪಿ ಶಂಕರ ಬಸವರಾಜ ಬನ್ನೂರ ಹಾಜರಾಗಿದ್ದ. ಬೆಳಗ್ಗೆ ಮತ್ತು ಮಧ್ಯಾಹ್ನ ನಡೆದ ಎರಡೂ ಪರೀಕ್ಷೆಗಳಲ್ಲಿ ನಕಲು ಮಾಡಲು ಈತ ಯಾರಿಗೂ ಗೊತ್ತಾಗದಂತೆ ಮೊಬೈಲ್ನಂತಹ ವಸ್ತುವನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಿದ್ದ. ಜೊತೆಗೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ಉತ್ತರ ಕಂಡುಕೊಂಡು ಓಎಂಆರ್ ಭರ್ತಿ ಮಾಡಿದ್ದ. ಇದರಿಂದ 200 ಅಂಕಗಳಿಗೆ 151.25 ಅಂಕ ಪಡೆದುಕೊಂಡಿದ್ದಾನೆ. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಸಿ ಸಮೀರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ 25 ಅಂಕ ಪಡೆದಿದ್ದ ಶಂಕರ್ ಬನ್ನೂರು ವಿಎಒ ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದ. ಇದು ಭಾರೀ ಸದ್ದು ಮಾಡಿ, ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾದ ಹಿನ್ನೆಲೆಯಲ್ಲಿ ಕೆಇಎ ಸಹ ತನಿಖೆಗೆ ಆದೇಶಿಸಿ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಇದರ ಮೇರೆಗೆ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ ವಿಶೇಷ ತಂಡವನ್ನು ರಚನೆ ಮಾಡಿದ್ದು, ಸವಣೂರು ಎಸಿ ಸಮೀರ ಖೋಡೆ ನೇತೃತ್ವದ ತಂಡ ತನಿಖೆ ನಡೆಸಿತ್ತು. ತನಿಖೆಯಲ್ಲಿ ಪರೀಕ್ಷೆಯಲ್ಲಿ ಮೊಬೈಲ್ ಬಳಸಿರುವುದು ಬಯಲಾಗಿದೆ.